Feeds:
Posts
ಟಿಪ್ಪಣಿಗಳು

Archive for ಆಗಷ್ಟ್, 2010

ಹಾರುವ ಆಸೆ


ಹಾರಬೇಕು ಹಕ್ಕಿ ಹಾಗೆ… ರೆಕ್ಕೆ ಇಲ್ಲದಿದ್ದರೇನಂತೆ ..ಹಾರುವುದಕ್ಕೆಲ್ಲ ರೆಕ್ಕೆಯೇ ಇಲ್ಲ.ಹಾರಬೇಕು ಆ ನೀಲಿ ಆಗಸದಿ.. ರೆಕ್ಕೆ ಇಲ್ಲದ್ದಿದ್ದರೆ ಬಡಿಯುವುದೇನು.. ? ಒಮ್ಮೆ ಬಡಿದು ಮತ್ತೊಮ್ಮೆ ಚಿಮ್ಮಿ ಹಾರಿದರಷ್ಟೆ ಸುಖ .!!. ಯಾಕೆ ಮತ್ತೆ ಮತ್ತೆ ಹಾರಬೇಕು ಅನಿಸ್ತ ಇದೆ .. ಹಾರುವುದು ಜವಾಬ್ದಾರಿಗಳಿರದ,ಮುಕ್ತ ಮನದ,ಸಂಪೂರ್ಣ ಸ್ವಾತಂತ್ರ್ಯದ ಚಿಹ್ನೆಯೆ..? ಸ್ವಾತಂತ್ರ್ಯವೋ,ಸ್ವೇಚ್ಛೆಯೋ..? ಇರಲಿ .., ಏನಾದರು ಇರಲಿ ..ನಾನು ಹಾರಲೇಬೇಕು.ಹಾಗೆ ಹಾರುವಾಗ ಅಲ್ಲಿ ದೂರದಲ್ಲಿ ಬೆಟ್ಟ,ಕೆಳಗೆ ರಸ್ತೆ,ಮನೆ,ಹೊಲ,ಗದ್ದೆ,ನದಿ,ನೀರು..ಹೀಗೆ ಸೊಗಸಲ್ಲವೇ .. ಹಾರಲೇಬೇಕು.”ಸಾರ್..ಸಾರ್.. ನಿಮ್ಮನ್ನೇ ..ಸಾರ್ .. “,ಯಾರೋ ಕೂಗಿದಂತಾಯಿತು, ಓಹ್ ಆಫೀಸ್ ಬಾಯ್ ರಂಗ..ಇವನ್ಯಾಕೆ ಹಿಂಗೆ ಬಡ್ಕೊತ ಇದ್ದಾನೆ..ಹೌದು ನನ್ನನ್ನೇ ಕರೆದಿದ್ದು..ಕನಸು ಕಾಣೋಕು ಬಿಡದಂತ ಕ್ರೂರ ಪ್ರಪಂಚ.. ಛೇ..ಛೇ,” ಏನ್ ರಂಗ ..ಏನಾಯ್ತು ..ಬಾಸ್ ಏನಾದ್ರು ಕರೆದರೆನೋ ..?” ಕೇಳಿದೆ.”ಇಲ್ಲ ಸಾರ್ ನಿಮ್ಮನ್ನ ನೋಡೊಕೆ ಯಾರೊ ಬಂದಿದ್ದಾರೆ, ರಿಸೆಪ್ಸ್ಯನ್ ನಲ್ಲಿ ಕೂತಿದ್ದಾರೆ..ಆಗ್ಲಿಂದ ಕೂಗ್ತಾನೆ ಇದೀನಿ ನೀವು ಯಾವುದೋ ಧ್ಯಾನದಲ್ಲಿದ್ದೀರಿ ಅನ್ಸುತ್ತೆ.”ಏನೋ ಈ ದಿನ ಇಷ್ಟು ಮುದ್ದಾಗಿ ಹೇಳ್ತ ಇದ್ದಾನೆ ..ಯಾವಾಗಲೂ ಗುರ್‍ ಅನ್ನೋನು ಎಂದುಕೊಂಡು “ಯಾರಂತೋ,ಹೆಂಗಿದ್ದಾರೆ ನೊಡೋಕೆ ?.ವಯಸ್ಸಾಗಿದೆಯ..? ಯಂಗಾ..? ” ಕುತೂಹಲದಿಂದ ಕೇಳಿದೆ.”ಗೊತ್ತಿಲ್ಲ ಸಾರ್ ಅದೇನು ನೀವೆ ಕೇಳಿ ..ಹೆಣ್ಣುಮಗಳು…ನಿಮಗಿಂತ ಚಿಕ್ಕ ವಯಸ್ಸಿರಬಹುದು” ಎಂದ.
ನನ್ನ ಹುಡುಕಿಕೊಂಡು ಹೆಣ್ಣುಮಕ್ಕಳು ಬರೋದೆ.. ? ಅಂತು ಸಂಜೆ ಹುಡುಗರ ಜೊತೆ ಕೂತಾಗ ಮಾತಾಡೊಕೆ ಒಳ್ಳೆ ಟಾಪಿಕ್.. ರಿಸೆಪ್ಸ್ಯನ್ ಬಳಿ ಹೋಗ್ತ ಅನಿಸಿದ್ದು ಒಹ್..ಯಾವುದೋ ಇನ್ಸುರೆನ್ಸ್ ಕಂಪನಿಯವರೋ ಏನೋ ಇರಬೇಕು..ಆದರೆ ಯಾರು ನನಗೆ ಫೋನ್ ಮಾಡಿಲ್ಲ..ಅಲ್ಲದೇ ಸರ್ಕಾರಿ ಆಫೀಸ್ ಗಳಿಗೆಲ್ಲ ಬರೊಲ್ಲ .. ನೋಡಿದ್ರಾಯ್ತು..ಇಷ್ಟೊಂದು ಯಾಕೆ ಯೋಚನೆ… ? ಯಾವಾಗಲೂ ಖಾಲಿ ಇರುವ ರಿಸೆಪ್ಸ್ಯನ್ ,ಒಬ್ಬಳೇ ಕುಳಿತಿದ್ದ ಈ ಸುಂದರವಾಗಿದ್ದ ಹುಡುಗಿಯಿಂದಾಗಿ ತುಂಬಿದ ಹಾಗೆ ಕಂಡಿತು…ನಡೆದು ಬರುತಿರುವವನು ಅವಳು ಹುಡುಕಿಕೊಂಡು ಬಂದವನೇ ಇರಬೇಕು ಅಂತ ತಗ್ಗಿಸಿದ್ದ ತಲೆ ಎತ್ತಿ..ನನ್ನೆಡೆ ದೃಷ್ಟಿ ಹಾಯಿಸಿದಳು.”ಭಗವಂತ ಎಲ್ಲಿ ಇಟ್ಟಿರ್ತಿಯ ತಂದೆ, ಇಂಥ ಸೌಂದರ್ಯನ್ನೆಲ್ಲ .. ?? ” ನಿನ್ನ ಕನಸಿನ ಹುಡುಗಿ ಹೇಗೆ ಇರಬೇಕು ಅಂತ ಯಾರಾದರೂ ಕೇಳಿದರೆ ನನ್ನ ಉತ್ತರವನ್ನೂ ಮೀರಿದಂತ ಸೊಬಗು.ಅವಳ ಆ ಒಂದು ನೋಟಕ್ಕೆ ..ನನ್ನ ಜೀವನ ಮುಡಿಪಾಗಿಡಬೇಕು,ನನ್ನ ಆಯುಸ್ಸೆಲ್ಲ ಅವಳ ಮುಂದೆ ಕೂತು ಅವಳ ಆ ಕಂಗಳಲ್ಲಿ ಕಳೆದು ಹೋಗಬೇಕು ಅನಿಸುತ್ತೆ.ನನ್ನ ಯೋಚನಾ ಲಹರಿಗೆ ಕಡಿವಾಣ ಬಿದ್ದಿತ್ತು, “ನೀವು…? ರಾಮಚಂದ್ರಾ….??ನಾ ” . ಇಷ್ಟು ಇಂಪಾಗಿ ಮಾತು ಆಡಬಹುದೇ..?  ನಾನೆಲ್ಲೋ ಗಂಧರ್ವ ಲೋಕದಲ್ಲಿದ್ದಂತೆ..ತಡವರಿಸಿದೆ ..’..ಹಾಂ..ಹೌದು..” ನೀವು ..? ..”ನನ್ನ ಹೆಸರು ನೀಲವೇಣಿ ಅಂತ” ..ಹೆಸರು ಹೇಳಿದ ಮೇಲೆ ಗಮನಿಸಿದ್ದು..ಅವಳದು ಉದ್ದ ಜಡೆ..ಸೊಂಟದ ವರೆಗು ಚಾಚಿದರೂ ಇದು ಕೂದಲೇ ಅಲ್ಲವೇನೊ ಅನ್ನುವಷ್ಟು ಬಿಗಿಯಾಗಿ ಕಟ್ಟಿದ ಜಡೆ…ಈಗಿನ ಕಾಲದಲ್ಲು ಉದ್ದ ಜಡೆ .ಚಿವುಟಿಕೊಂಡೆ..”.. ನೀವು ಯಾರು ? ಅಂತ ಗೊತ್ತಾಗಲಿಲ್ಲ..” ಗೊತ್ತಾಗದೇ ಈ ಪರಿಸ್ಥಿತಿ ಇನ್ನು ಗೊತ್ತೂ ಇದ್ದಿದ್ದರೆ…?? . “ನಮ್ಮ ತಂದೆ,ನಿಮ್ಮ ತಂದೆಯ ಸ್ನೇಹಿತರು.. ರಂಗನಾಥ್ ಅಂತ ಅವರ ಹೆಸರು..ನಿಮ್ಮ ತಂದೆಯ ಆಫೀಸ್ ನಲ್ಲೇ ಕೆಲಸ ಮಾಡ್ತ ಇದ್ದರು. ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡು ಮೂರು ತಿಂಗಳಾಯಿತು,ಅವರ ಕೋಣೆ ಕ್ಲೀನ್ ಮಾಡುವಾಗ ನಿಮ್ಮ ಮನೆಯ ಪೋನ್ ನಂಬರ್ ದೊರೆಯಿತು.ನಾನೇ ದೊಡ್ಡ ಮಗಳು ನಮ್ಮ ಮನೆಯಲ್ಲಿ,ಬಿ.ಎಸ್.ಸಿ ಆಗಿದೆ, ನನ್ನ ನಂತರ ಇನ್ನು ಇಬ್ಬರು ತಂಗಿಯರು..ಅಪ್ಪನ ಪೆನ್ಶನ್ ಹಣ ಸಾಲೊದಿಲ್ಲ ಮನೆ ನಡೆಸೋಕೆ ..ನಿಮ್ಮ ತಂದೆ ಏನಾದ್ರು ನನಗೆ ಒಂದು ಕೆಲಸ ಕೊಡಿಸುವಲ್ಲಿ ಸಹಾಯ ಮಾಡಬಹುದು ಎಂದು ಫೋನ್ ಮಾಡಿದ್ದೆ. ಅವರು ..” ನಾನು ಈಗ ರಿಟೈರ್ಡ್ ಅಮ್ಮ ..ನನ್ನ ಮಾತು ಈಗ ಎಲ್ಲೂ ನಡೆಯೋಲ್ಲ,ನನ್ನ ಮಗನ ಒಮ್ಮೆ ಭೇಟಿ ಮಾಡು ಅಂತ ನಿಮ್ಮ ಆಫೀಸ್ ಅಡ್ರೆಸ್ಸ್ ಕೊಟ್ಟರು., ಸಾರ್ ನನಗೆ ಇನ್ನು ಯಾರನ್ನ ಕೇಳಬೇಕು ಅಂತ ಗೊತ್ತಗ್ತ ಇಲ್ಲ.. ಅಪ್ಪ ಅಮ್ಮನ ಕಡೆಯ ನೆಂಟರು ಅಷ್ಟಕಷ್ಟೆ,ಅದು ಇದು ಎಂದೇ ಇಲ್ಲ ..ಒಂದು ಕೆಲಸ ಈಗ ಬಹಳ ಮುಖ್ಯ ನಮ್ಮ ಮನೆ ನಡೆಸಲು ” ಇನ್ನು ಹೇಳುತ್ತಿದ್ದ ಹಾಗೆ..ಹೆಚ್ಚು ಕೇಳಲಾಗದೆ “ನಿಮ್ಮ ರೆಸುಮೆ ಏನಾದ್ರು ತಂದಿದಿರ” ಅಂದೆ. “ತಂದಿದ್ದೇನೆ ಸಾರ್.. ..” ಎಂದು ಒಂದೆರೆಡು ಪುಟದ ರೆಸುಮೆ ಕೈಗಿತ್ತಳು. “ಅಂದ ಹಾಗೆ ಒಂದು ಮಾತು,ದಯವಿಟ್ಟು ನನ್ನನ್ನ ಸಾರ್ ಎಂದು ಕರೆಯಬೇಡಿ ..ತುಂಬಾ ಮುಜುಗರ ಆಗುತ್ತೆ …ರಾಮಚಂದ್ರ ಕಷ್ಟ ಆದರೆ ಕೇವಲ ರಾಮ್ ಎಂದರೆ ಸಾಕು ..ಬನ್ನಿ ಹೊರಗೆ ಕೂತು ಮಾತನಾಡೊಣ ” ಎಂದು ಆಫೀಸ್ ಹೊರಗಿದ್ದ ಕ್ಯಾಂಟೀನ್ ಕಡೆ ಹೊರಟೆ.ಅವಳ ಕಡೆ ತಿರುಗಿ ನೋಡಲು ಏನೋ ಸಂಕೋಚ ಎನಿಸಿ ರೆಸುಮೆ ನೋಡಹತ್ತಿದೆ … ಚೆನ್ನಾಗಿ ಓದಿರುವ ಹುಡುಗಿ ..ಆದರೆ ಎಕ್ಸಪಿರಿಯನ್ಸ್ ಇಲ್ಲ.. ನಾನೇನು ನಮ್ಮ ಆಫೀಸ್ನಲ್ಲಿ ಸರ್ವಶಕ್ತನಲ್ಲದಿದ್ದರೂ, ನನ್ನ ಮಾತು ನಡೆಯುವ ಒಂದೆರಡು ವಿಭಾಗಗಳು ಇದ್ದವು … ಅವರನ್ನೆಲ್ಲ ನನ್ನ ಬುಟ್ಟಿಗೆ ಹಾಕಿಕೊಳ್ಳೊಕೆ ಅದೆಷ್ಟು ಬಾರಿನ ವಿಸ್ಕಿ,ಅದೆಷ್ಟು ಫಾರ್ಮಿನ ಕೋಳಿ..ಅದೆಷ್ಟು ಕೆರೆ,ಸಮುದ್ರದ ಮೀನುಗಳು ಬಲಿಯಾಗಿವೆ ಅಂತ ನನಗೆ ಗೊತ್ತು.ಇವಳಿಗೆ ನಮ್ಮ ಆಫೀಸಿನಲ್ಲೇ ಕೆಲಸ ಕೊಡಿಸುವುದು ಅಷ್ಟು ಕಷ್ಟವಾಗಲಾರದು .. ಹತ್ತಿರ ಇದ್ದರೆ ಇವಳು ನನಗೆ ಇನ್ನಷ್ಟು ಹಿಡಿಸುವ ಸೂಚನೆಗಳು ಹೆಚ್ಚೆಚ್ಚು ಕಾಣಹತ್ತಿದವು..
ನಮ್ಮ ಮಾಮೂಲಿ ಕ್ಯಾಂಟಿನ್.ನಾವು ಏನು ತಿನ್ನುತ್ತೇವೆ, ಏನು ಕುಡಿತೇವೆ ..ಅನ್ನುವುದನ್ನ ನಾವೇ ಮರೆತರೂ, ಸ್ವಾಮಿ, ನೆನಪಲ್ಲಿ ಇಟ್ಟಿರ್ತಾನೆ. ನಾನು ಹುಡುಗಿ ಜೊತೆಗಿದ್ದದ್ದು ನನಗಿಂತ ಅವನಿಗೆ ಹೆಚ್ಚು ಖುಷಿಯಾದಂತಿದೆ.. “ಏನು ಸಾರ್.. ಏನು ಕೊಡಲಿ” ಅಂತ ಅಪರೂಪಕ್ಕೆ ಕೇಳಿದ.. ಇಲ್ಲಾಂದ್ರೆ ಒಂದು ಅರ್ಧ ಟೀ, ಒಂದು ಕಿಂಗ್ ಸಿಗರೆಟ್ ಕೈಲಿ ಇಟ್ಕೊಂಡು ಬರೋನು.ಜಾಣ.! ಅದೆನೋ ಇವಳ ಮುಂದೆ ಸಿಗರೆಟ್ ಸೇದುವುದು ಇಷ್ಟ ಆಗಲಿಲ್ಲ.. ಅಪ್ಪನ ಸ್ನೇಹಿತರ ಮಗಳು ನಮ್ಮ ಅಪ್ಪನ ಮೇಲಿಟ್ಟ ಗೌರವದಲ್ಲಿ ನನ್ನ ಮೇಲೂ ಸ್ವಲ್ಪ ತೋರಿಸ್ತ ಇದ್ದಾಳೆ ಅನಿಸಿತು.”ನೀವು ಏನು ತಗೋತಿರ” ..ಅವಳನ್ನು ಕೇಳಿದೆ … “ಅಯ್ಯೋ ಏನು ಬೇಡ, ಮನೆ ಇಂದ ಬರುತ್ತ ಎಲ್ಲಾ ಆಗಿದೆ” ಅಂದಳು.. “ಏನಾದ್ರು ಕುಡಿಯೋಕಾದ್ರು ತಗೊಳ್ಳಿ” ಎಂದು ಸ್ವಲ್ಪ ಒತ್ತಾಯಿಸಲು “ಸರಿ ..ಕಾಫಿ ..ತಗೋತಿನಿ” ಅಂದಳು. “ಬೈ ಟು ಕಾಫಿ” ಎಂದು ಒಂದು ಸ್ಮೈಲಿತ್ತೆ. ಸ್ವಾಮಿ ಹೊರಟ.
“ನಿಮಗೆ ಏನಾದ್ರು.. ಇಂತಹುದೇ ಕೆಲಸಕ್ಕೆ ಸೇರಬೇಕು ಅಂತ ಏನಾದ್ರು ಇದೆಯ..?” ಕೇಳಿದೆ… ” ಬಿ.ಎಸ್.ಸಿ ಮುಗಿದ ಮೇಲೆ ಕಂಪ್ಯೂಟರ್ ಕೋರ್ಸ್ ಮಾಡಿ ಎಲ್ಲದ್ದ್ರೂ ಒಳ್ಳೆ ಐ.ಟಿ. ಕೆಲಸಕ್ಕೆ ಸೇರೋಣ ಅಂತ ಇದ್ದೆ, ಈಗ ಯಾವ ಕೆಲಸವಾದರೂ ಸರಿ ಅನಿಸುತ್ತೆ” ಅವಳ ಮುಖದ ಭಾವಗಳು ಏನು ಹೇಳುತಿದೆ ಅನ್ನುವುದು ಊಹಿಸುವುದು ಸುಲಭವಾಗಿ ಕಾಣಲಿಲ್ಲ. “ನಾನು  ಓದಿರುವದಕ್ಕೆ  ಐ.ಟಿ. ಕೆಲಸ ಸಿಗೋದು ಸ್ವಲ್ಪ ಕಷ್ಟ..ಎಕ್ಸಪಿರಿಯನ್ಸ್  ಅದು ಇದು ಬೇಕು ಅಂತಾರೆ ,ಎಂ.ಸಿ.ಏ ನಾದ್ರು ಆಗಿದ್ರೆ ಸ್ವಲ್ಪ ಸುಲಭವಾಗ್ತ ಇತ್ತೆನೋ? ” ಮಾತನಾಡ್ತನೆ ಇದ್ದಳು.. ನಾನೇನೋ ಮಂತ್ರದಂಡ ಹಿಡಿದಿರುವ ಹಾಗೆ ಅವಳ ಕಷ್ಟಕ್ಕೆ ನನ್ನ ಬಳಿ ಉತ್ತರ ಇರುವ ಹಾಗೆ .. ಅವಳಿಗೆ ಕೆಲಸದ ವ್ಯವಸ್ಥೆ ಏನೋ ಮಾಡಬಹುದು..ಅಲ್ಲಿನಿಂದ ಇವಳಿಗೆ ಹೊಸ ಕಷ್ಟಗಳು ಆರಂಬಿಸುತ್ತವೆ.ಇನ್ನು ಈ ಆಫೀಸ್ ರಾಜಕೀಯಗಳು,ಹೊಂಚು ಹಾಕಿ ಕಾದು ಕುಳಿತಿರುವ ಹದ್ದುಗಳು ,ನನ್ನಂತ ಸಭ್ಯ ಜೀವನದ ಹೊರೆಗೆ ಬಗ್ಗಿ… ಕದ್ದು ಮುಚ್ಚೇ ಮನಸಿನಲ್ಲಿ ಮಂಡಿಗೆ ಹಾಕುವಂತವರು,ತಂದ ಹೊಸ ರಿಬ್ಬನ್ನಿನಿಂದ ಹಿಡಿದು ಹೃತಿಕ್ ರೋಶನ್ಗೆ ಆರು !!! ಬೆರಳಿರುವುದೇ ಜಗತ್ತಿನ ಮತ್ತೊಂದು ಅದ್ಭುತವೆಂದು ಉದ್ಗರಿಸುವ ಲಲನೆಯರು…ಅಯ್ಯೋ ಹುಡುಗಿ ನಲುಗಿ ಹೋಗುವೆಯಲ್ಲ .. ನಾನು ಇವಳ ಬಗ್ಗೆ ಇಷ್ಟೊಂದು ಕಾಳಜಿ ತೋರಲು ಅವಳ ಆ ಮುದ್ದು ಮುಖ ನನಗೆ ತುಂಬಾ ಹಿಡಿಸಿದ್ದು ನಿಜವಾದರೂ ದಿನವೂ ಇವಳೊಡನೆ ಮಾತು ಕತೆಯ ಆಸೆ ಆಗಲೇ ಬೇರೂರಿ ಹೆಮ್ಮರವಾಗಿ ಬಿಳಲುಗಳ ಬಿಡಲಾರಂಬಿಸಿತ್ತು,ನನ್ನ ಬೈಕ್,ಪುಸ್ತಕಗಳು,ಸಂಜೆ ಹೊತ್ತು ಬಿ.ಡಿ.ಎನಲ್ಲಿ ಹುಡುಗರ ಜೊತೆಯ ಆಪ್ತ ಸಮಯ..ಇವುಗಳೊಡನೆ ಇವಳು ಸರದಿಯಲ್ಲಿ ನಿಂತಂತೆ ಕಂಡಿತು..”ತಿಕಲ” ಎಂದುಕೊಂಡೆ.
ಕಾಫಿ ತಂದಿಟ್ಟ ಸ್ವಾಮಿ ಸುಮ್ಮನೇ ಹೋಗನೇಕೆ..?? ಅಲ್ಲೇ ನಿಂತು  ಪ್ಲೇಟ್ ಕೈ ನಲ್ಲಿ ಹಿಡಿದು ಹಲ್ಲು ಗಿಂಜಿದ..”ಇನ್ನೇನಾದರೂ ಬೇಕಿತ್ತ ..ಸಾರ್‍..” ಬಡ್ಡಿಮಗ ಮಜಾ ತಗೊತ ಇದಾನೆ ಅನಿಸಿ “ಏನು ಬೇಡ” ಅಂತ ಒಂದು ಪ್ರಯತ್ನಪೂರ್ವಕವಾಗಿ ಅವನಿಗೆ “ಇಲ್ಲಿಂದ ಬೇಗ ಕಳಚಿಕೋ” ಅನಿಸುವ ನಗುವನಿತ್ತೆ.ಗಂಟೆಗಟ್ಟಲೆ ಪುಂಖಾನುಪುಂಖವಾಗಿ ಮಾತನಾಡುವ ನನಗೆ ಇದೇನು ಈ ದಿನ ಏನು ಹೇಳಬೇಕು , ಏನು ಕೇಳಬೇಕು ಅಂತಾನೇ ತೋಚ್ತ ಇಲ್ಲ.. ಇದು ಆಗಲೇ ಅದೆಷ್ಟೋ ಬಾರಿ ಇರಬೇಕು ಅವಳೆಡೆ ನೇರವಾಗಿ ನೋಡಲಾಗದೆ ಮತ್ತೆ ಅವಳ ರೆಸುಮೆ ನೋಡಹತ್ತಿದೆ.. ಇನ್ನು ಅದರಲ್ಲಿ ಏನು ಇದೆ ಎಂದೇ ನಾನು ಓದಿರಲಿಲ್ಲ. ಹೀಗೆ ಇನ್ನು ಹೆಚ್ಚು ಹೊತ್ತು ಕುಳಿತಲ್ಲಿ ಇವಳಿಗೆ ನನ್ನ ನೋಟದಲ್ಲಿ ಏನೋ ಹುಳುಕು ಇದೆ ಅನಿಸಿದರೂ ಅನಿಸಬಹುದೆನಿಸಿ ..”ನಾನು ನಿಮ್ಮ ರೆಸುಮೆ ನ ನಮ್ಮ ಮ್ಯಾನೇಜರ್‍ ಗೆ ಕೊಟ್ಟು ಮಾತನಾಡುತ್ತೇನೆ.. ನಿಮ್ಮ ಫೋನ್ ನಂಬರ್‍ ಕೊಡಿ,ನಾನು ಫೋನ್ ಮಾಡಿ ತಿಳಿಸುತ್ತೇನೆ” ಎಂದೆ.”ಮನೆಯಲ್ಲಿ ಫೋನ್ ಇಲ್ಲ ..ನೀವು ಇಂತಹ ದಿನ ಅಂದರೆ ನಾನೇ ಫೋನ್ ಮಾಡ್ತೀನಿ” ಅಂದಾಗ ಇವಳಿಗೆ ತನ್ನೆಲ್ಲ ಕಷ್ಟ ಹೇಳಿಕೊಳ್ಳುವಷ್ಟು ನಾನು ಆಪ್ತ ಅನಿಸುತ್ತ..? ಅಥವ ಇರುವದನ್ನ ಯಾವ ಮುಚ್ಚು ಮರೆ ಇಲ್ಲದೆ ಹೇಳುವುದೇ ಇವಳ ಸ್ವಭಾವವೇ..? ಒಂದಂತೂ ನಿಜ..ನನ್ನ ಸಹಾನುಭೂತಿಯ ಬೇಡುವ ಮಾತುಗಳಂತೂ ಅಲ್ಲವೇ ಅಲ್ಲ. “ಒಂದು ಕೆಲಸ ಮಾಡಿ ಗುರುವಾರ ಒಂದು ೧೦ ಗಂಟೆಯ ಹೊತ್ತಿಗೆ ಇಲ್ಲೇ ಬನ್ನಿ.. ” ಎಂದು ನನ್ನ ವಿಸಿಟಿಂಗ್ ಕಾರ್ಡ್ ತೆಗೆದು ಅದರ ಹಿಂದೆ ನನ್ನ ಮೊಬೈಲ್ ನಂಬರ್‍ ಬರೆದು ಕೊಟ್ಟೆ.ಯಾವುದು ಹೇಗಾದರೂ ಇರಲಿ, ಇವಳಿಗೆ ನಾನೇನೋ ಉಪಕಾರ ಮಾಡುತ್ತಿದ್ದೇನೆ ಅನಿಸಿದಿದ್ದರೆ ಸಾಕು ಎಂದು ಮತ್ತೆ ಮತ್ತೆ ಮನಸ್ಸಿನ ತೊಯ್ದಾಟ ಹೇಳುತ್ತಲೇ ಇತ್ತು. ಕ್ಯಾಂಟಿನ್ ನಿಂದ ಹೊರಟ ಅವಳನ್ನು ಕೇಳಿದೆ ” ಹೇಗೆ ಹೋಗ್ತಿರ..?” ,”ಬಸ್ ಸ್ಟಾಪಿನ ತನಕ ನಡೆದು,ಆಮೇಲೆ ಬಸ್ಸಿನಲ್ಲಿ ” ಎಂದಾಗ ” ಆಹ..ಎಂತಹ ಪ್ರಶ್ನೆ ..ಎಂತಹ ಉತ್ತರ.. ಎನಿಸಿ . ಅವಳ ಆ ತುಂಟ ನಗುವಿಗೆ ಅರಳಿ ನಕ್ಕೆ.”ಅದಲ್ಲ ಬಿಸಿಲು,ಬಸ್ ಸ್ಟಾಪ್ ಬೇರೆ ದೂರ ಇದೆ ಅಲ್ವ..ನಿಮಗೇನು ಅಭ್ಯಂತರ ಇಲ್ಲ ಅಂದರೆ ನಾನು ಡ್ರಾಪ್.ಮಾಡ್ತೀನಿ ” ಅಂದೆ .. ತುಂಬ ಸೂಕ್ಷ್ಮ ಅನಿಸುತ್ತೆ ನಾವೆಲ್ಲ ಈಗ ಯೋಚನೆ ಮಾಡೋದು .. ಅವಳಿಗೆ ಇದೇನು ಇವನಿಗೆ ಏನು ಕೆಲಸ ಇಲ್ಲವ ಅಥವ ಇದೇನು ತುಂಬಾ ಹತ್ತಿರ ಬರೋಕೆ ಪ್ರಯತ್ತ ಮಾಡ್ತ ಇದ್ದಾನೆ ಅನಿಸಿದರೆ  ಎಂದು ನನಗೆ ಭಯವಿದ್ದೇ ಇತ್ತು.. ನನಗಂತೂ ಅವಳು ಈ ಉರಿಬಿಸಿಲಲ್ಲಿ ಅಷ್ಟು ದೂರ ನಡೆದು ಹೋಗುವ ಇಷ್ಟವಿರಲಿಲ್ಲವಷ್ಟೇ..!”ಪರವಾಗಿಲ್ಲ ಬಿಡಿ.. ಆರಾಮಾಗಿ ನಡೆದು ಹೋಗ್ತೀನಿ” ಎಂದು ತನ್ನ ವ್ಯಾನಿಟಿ ಬ್ಯಾಗ್ನಂತಹ ಬ್ಯಾಗಿನಿಂದ ಸಣ್ಣದೊಂದು ಛತ್ರಿಯ ತೆಗೆದು ಅರಳಿಸಿ ಹೊರಟಳು.ಅರೆಗಳಿಗೆ ಅಲ್ಲೇ ನಿಂತು ಅವಳು ಹೋದೆಡೆ ನೋಡುತ್ತ ಆಫೀಸ್ ಕಡೆ ನಡೆದೆ.ಏನೋ ಒಂದು ಗಳಿಗೆನೂ ತಡ ಮಾಡದೆ ಇವಳ ಕೆಲಸದ ವ್ಯವಸ್ಥೆ ಇವತ್ತೇ ಮಾಡಿಬಿಡಬೇಕೆನಿಸಿ ನಮ್ಮ ಮ್ಯಾನೇಜರ್‍ ನೋಡೋಣ ಅಂತ ತರಾತುರಿಯಲ್ಲಿ ಹೊರಟೆ. ಎದುರಿಗೆ ರಂಗ ಸಿಕ್ಕಿದ್ದು  ಆಕಸ್ಮಿಕವೇ ಆಗಿರಲಿಕ್ಕಿಲ್ಲ. ಬಡ್ಡೀಮಗ ..ಅಂದುಕೊಂಡ್ತಿರಾನೆ ಈ ಪ್ಯಾದೆ ನೋಡೋಕೆ ಅಷ್ಟು ಚೆನ್ನಾಗಿರೋ ಹುಡುಗಿ ಬರೋದು ಅಂದ್ರೆ ಏನು.. ? ವಿಚಾರಿಸೋಣ ಅಂತ.. ” ಏನು ಸಾರ್‍..ಏನು ಸಮಾಚಾರ ” ಅಂತ ವಕ್ರವಾಗಿ ಕೇಳಿದ. ಇವನ ಹತ್ರ ಮತ್ತೆ ಕಂತೆ ಪುರಾಣ ಬಿಚ್ಚೋದು ಬೇಡ ಅನಿಸಿ ..”ನಮ್ಮ ತಂದೆಯ ಸ್ನೇಹಿತರ ಮಗಳಪ್ಪ ..ಇಲ್ಲೇ ಏನೊ ಕೆಲಸ ಅಂತ ಬಂದಿದ್ರಂತೆ ಹಾಗೇ ಮಾತನಾಡಿಸೋಣ ಅಂತ ಬಂದಿದ್ರು. ಬಾಸ್ ಇದ್ದಾರ .? ” ಬೇಗ ಟಾಪಿಕ್ ಛೇಂಜ್ ಮಾಡದಿದ್ರೆ ..ತಿಗಣೆ ತರಹ ಕಚ್ಚಿಕೊಂಡು ಬಿಡ್ತಾನೆ. “ಇಲ್ಲ ಅದೆನೋ ಮೀಟಿಂಗ್ ಅಂತೆ ,ವಿಧಾನಸೌಧಕ್ಕೆ ಹೋದರು ” ಎಂದ.ಹಂ.. ಛೇ..ಛೇ. ಯಾವಾಗಲೂ ಇಷ್ಟೇ ಏನಾದರೂ ಒಳ್ಳೆ ಕೆಲಸ ಮಾಡಬೇಕು ಅನಿಸಿದಾಗ ಏನಾದರೂ ವಿಘ್ನ ಅನಿಸುತ್ತೆ,ಅದೇ ಗಂಟೆಗೊಮ್ಮೆ ಪಕ್ಕದ ಟೇಬಲ್ ಸುರೇಶ .. ಬನ್ನಿ ಸಾರ್‍ ವಾಯುವಿಹಾರಕ್ಕೆ ಹೋಗೋಣ ಅಂತ ಸಿಗರೇಟಿಗೆ ಕರೆದಾಗ,ವಾರಕ್ಕೆರಡು ಸಲ ಹುಡುಗರು ” ಇವತ್ತು ಇವನ ಬರ್ತಡೇ ಇದೆ ,ಇವತ್ತು ಅವನು ಅಮೆರಿಕಾದಿಂದ ಬಂದ ..” ಹೀಗೆ ಎಲ್ಲ ಹೋಗಲೇಬೇಕೆನಿಸುವ ಗುಂಡು ಪಾರ್ಟಿಗಳು ,ಇದು ಇರಲಿ.. ಆವತ್ತು ಆ ೨೪ ಕ್ಯಾರೆಟ್ ಡ್ಯಾನ್ಸ್ ಬಾರಿಗೆ ಹೋಗುವಾಗಲೂ ಯಾವ ಅಡ್ಡಿ ಆತಂಕಗಳು ಇರಲಿಲ್ಲ.ಇದನ್ನೆಲ್ಲ ಕೆಟ್ಟದ್ದು ..ಮಾಡಬಾರದ ತಪ್ಪು ಎಂದು ಯಾಕೆ ಈ ಸಮಾಜ ನೋಡುತ್ತೆ..? ಆ ದೇವರು ಅನ್ನೋದು ನಿಜವಾದರೆ ಕೆಟ್ಟದು ಮಾಡೋಕೆ ಯಾಕೆ ಪ್ರೇರಿಪಿಸುತ್ತಾನೆ .. ? ಈ ಪ್ರಶ್ನೆಗೆ ನನಗೆ ಸೂಕ್ತವಾದ ಉತ್ತರ ಕೊಟ್ಟವನು ಅಂದರೆ ನಮ್ಮ ಗ್ಯಾಂಗಿನಲ್ಲಿ ನಾವೆಲ್ಲ ‘ಫಿಲಾಸಫರ್‍’ ಎಂದೇ ಕರೆಯುವ ರಾಘು,ಅವನು ಹುಟ್ಟಿ ಬೆಳೆದದ್ದು ಮೈಸೂರು,ಮಂಡ್ಯ ಕಡೆ..ನಮಗೆ ಹೆಸರು ಗೊತ್ತಿಲ್ಲದ ಎಷ್ಟೋ ಪುಸ್ತಕ ಓದಿಕೊಂಡಿದ್ದಾನೆ.” ಬಡ್ಡೆತ್ತದೆ..ದೇವರು ಅಂತ ಇದ್ದರೂ ಅವನಿಗೇನು ನಿನ್ನ ಕಾಯೊದೊಂದೇ ಕೆಲಸನಾ ಲೈಫ್ ಅಲ್ಲಿ.ನೀನು ಏನು ಮಾಡ್ತ ಇದಿಯ..ಸರಿ ಮಾಡ್ತ ಇದಿಯ ,ತಪ್ಪು ಮಾಡ್ತ ಇದಿಯ ..? ಇದೆಲ್ಲ ದೇವರೇ ಹೇಳಿ ಕೊಡಬೇಕು ಅಂತ ಆಗಿದ್ರೆ ನಿನಗಾದರೂ ಯೋಚನೆ ಮಾಡೋ ಬುದ್ದಿ ಯಾಕೆ ಇರುತಿತ್ತು. ?? ” .ಅವನು ಹೀಗೆ… ನಾವು ಕೇಳೊ ಒಂದು ಸಾಲಿನ ಪ್ರಶ್ನೆಗೆ ಒಂದು ಪ್ಯಾರಾದಷ್ಟಾದರೂ ಉತ್ತರ ಕೊಡುತಾನೆ.ನನಗೆ ಎಲ್ಲ ಗೊಂದಲ ,ತಲೆ ಕೆಟ್ಟು ಚಿತ್ರಾನ್ನ ಆಗ್ತ ಇದೆ ಎಂದು ಅನಿಸಿದಾಗಲೆಲ್ಲ ಒಂದು ಫೋನ್ ಅವನಿಗೆ .. ” ರಾಘು, ೮ ಗಂಟೆ ಹೊತ್ತಿಗೆ ಜೆ.ಪಿ.ನಗರ ಬಾರ್‍ ಹತ್ತಿರ ಸಿಗೋಣ ” ಅವನಿಗೆ ಇಷ್ಟು ಹೇಳುತ್ತಿದ್ದ ಹಾಗೆ ಅರ್ಥ ಆಗಿರುತ್ತದೆ.”ಇವನ ಗೋಳು ಯಾವಾಗಲೂ ಇದ್ದದ್ದೇ ಅನ್ನೋ ಹಾಗೆ “.. ಇಬ್ಬರೂ ಜೊತೆಯಲ್ಲಿ ಎರಡು ಪೆಗ್ ಮುಗಿಸೋವರೆಗೂ ಸುಮ್ಮನೆ ಮಸಾಲೆ ಹಚ್ಚಿದ ಕಡಲೆಕಾಯಿ ತಿನ್ಕೊಂಡು ..ಆರಾಮಾಗಿ ಸಿಗರೇಟ್ ಸೇದುತ ಕೂತವನು ಆಮೇಲೆ ನಿಧಾನಕ್ಕೆ ಕೇಳೋನು .. ” ಹೇಳಪ್ಪ .. ಏನು ಸಮಾಚಾರ.. ” .ಅವನು ಇಷ್ಟು ಹೇಳಲಿ ಅಂತ ಕಾಯುತ್ತ ಇರುತ್ತಿದ್ದ ನಾನು, ನನ್ನ ತಲೆಯಲ್ಲಿದ್ದ ಎಲ್ಲ ಹುಳುಗಳನ್ನು ಅವನ ಮುಂದೆ ಇಟ್ಟರೆ ಅವನು ಅವಕ್ಕೆಲ್ಲ ಮುದ್ದಾಗಿ ಹೆಸರಿಡೋನು . .” ಹೋ ..ಇದಾ ನೀನು ಮನೆ,ಸಮಾಜ ಅಂತ ಹೆದರಿ ಅನಿಸಿದ್ದೆಲ್ಲ ಮಾಡೋಕೆ ಒದ್ದಾಡ್ತಿಯಲ್ಲ ಅದಕ್ಕೆ ಹೀಗೆ ಅನಿಸುತ್ತೆ”, ” ಓಹ್ ಅದಾ….ಅವರ ಇವರ ಬಗ್ಗೆ ಯೋಚನೆ ಮಾಡುತ್ತ ನಿನ್ನ ಸ್ವಭಾವಕ್ಕೆ ವಿರುಧ್ಧವಾಗಿ ಇರುತ್ತಿಯಲ್ಲ .. ಇದಕ್ಕೆ ಆತ್ಮವಂಚನೆ ಕೂಡ ಅಂತಾರೆ”,” ಹೂಂ.. ಇದಾ ..?? ಇದಕ್ಕೆ ಇರೋ ಮದ್ದು ಅಂದರೆ ನನಗನಿಸಿದ ಹಾಗೆ ಮದುವೆ ..ಅದರಲ್ಲೂ ನಿನಗಂತೂ ಅದೇ ಸೇಫ್.. ” ಅವನು ಹೇಳುವುದನ್ನು ಕೇಳುತ್ತಿದ್ದೆನೋ ಇಲ್ಲವೋ ಅದು  ಬೇರೆಯ ವಿಷಯ.ಆದರೆ ನನ್ನನ್ನು  ಹಗಲೂ ರಾತ್ರಿ ತಲೆ ಕೆಡಿಸುತ್ತಿದ್ದ ವಿಷಯಗಳಿಗೆ, ಹೇಗೆ ಹೆಸರು ಇದೆ,ಬೇರೆಯವರಿಗೂ ಇದು ಗೊತ್ತು ಎನ್ನುವ ಸಮಾಧಾನದಿಂದ ಮನಸ್ಸು ಎಷ್ಟೋ ಹಗುರ ಆಗುತಿತ್ತು.ನನಗೆನೋ ಇವನ ಜೊತೆ ಇರೋದು ಸಾಕಷ್ಟು ಹೆಚ್ಚಿನ ಸಮಯ ಕಳೆಯಬೇಕೆನಿಸಿದರೂ  ಇಷ್ಟೊಂದು ಕಡ್ಡಿ ತುಂಡಾದ ಹಾಗೆ ಮಾತು, ಎಲ್ಲ ಸಮಸ್ಯೆಗಳಿಗೊಂದು ಸಮಾಧಾನ.. ಏನೋ ಹೀಗೆ ಇದ್ದರೆ ಮಜಾ ಬರುವುದಿಲ್ಲ ಎಂದು ಅದೆಷ್ಟೋ ಬಾರಿ ಅನಿಸಿ,ಇಬ್ಬರಿಗೂ ಅನುಕೂಲವೆನಿಸುವ ಹಾಗೆ ಭೇಟಿಯಾಗುತ್ತಿದ್ದೆ.

ರಾತ್ರಿ .. ಊಟ ಆದ ಮೇಲೆ ಅದು ಯಾವುದೋ ಒಂದು ಸೀರಿಯಲ್ ಅಪ್ಪ ಅಮ್ಮ ನೋಡುತ್ತಿರುವವರೆಂದು ನಾನು ಕೂತು ನೋಡುವಾಗ, ಅಪ್ಪ ಕೇಳಿದ್ರು “ರಂಗನಾಥ್ ಮಗಳು ಬಂದಿದ್ದಳ ಅಫೀಸಿಗೆ..? ” “ಹೂಂ”ಗುಟ್ಟಿದೆ. “ಪಾಪ ಕಷ್ಟದಲ್ಲಿದ್ದಾರೆ ..ಏನಾದ್ರು ಮಾಡು” , ” ಸರಿ” ಎಂದು ಎದ್ದು ಹೊರಟೆ..ಹೀಗೆ ನಾನು ಊಟ ಆದಮೇಲೆ ಹೊರಗೆ ಏನಕ್ಕೆ ಹೋಗ್ತಿನಿ ಅಂತ ಅಪ್ಪ ಅಮ್ಮನಿಗೆ ಗೊತ್ತಿದ್ರು ಗೊತ್ತಿರಬಹುದು. ಎರಡು ಬೀದಿ ಕೆಳಗೆ ,ಮೂಲೆ ಅಂಗಡಿ ಮಹೇಶ… ಗಿರಾಕಿಗಳು ಜಾಸ್ತಿ ಇದ್ದರೆ ಕೈಗೊಂದು ಸಿಗರೇಟ್ ಕೊಟ್ಟು ..ಸ್ಮೈಲ್ ಕೊಡ್ತಾನೆ ..ಇಲ್ಲ ಅಂದರೆ ಆವತ್ತಿನ ವಿಜಯ ಕರ್ನಾಟಕನೋ , ಪ್ರಜಾವಾಣಿನೋ ಓದ್ತ ” ನೋಡಿದ್ರ ಸಾರ್‍ ಈ ಗೌಡರ ಬಯಲು ನಾಟಕಾನ..? ನೀವೇನಂತೀರಾ ಸಾರ್‍ ..? ಇವರು ಬಿ.ಜೆ.ಪಿ ಗೆ ಅಧಿಕಾರ ಕೊಡ್ತಾರೆ ಅಂತೀರ..?”, ನನಗೆ ರಾಜಕೀಯ ಕೇಳೊದು , ಮಾತನಾಡೋದು ಅಂದರೆ ಅಷ್ಟಕಷ್ಟೆ.. “ಗೊತ್ತಿಲ್ಲ ..” ಎಂದು ನಾನು ರೋಡ್ ಕಡೆ ನೋಡ್ತ ನಿಲ್ತೀನಿ..ಇಲ್ಲವಾದಲ್ಲಿ ಅಲ್ಲೆ ಪಕ್ಕದ ಜಗುಲಿ ಮೇಲೆ ಕೂತು ಸಿಗರೇಟ್ ಮುಗಿಸಿ ..ಬಾಯಿ ವಾಸನೆ ಬರದಿರುವ ಹಾಗೆ ಏನಾದ್ರು ತಿನ್ನುತ್ತ ಮನೆಗೆ ಹೋಗ್ತಿನಿ.ವಾಸನೆ ಬರೊಲ್ಲ ಅಂತ ನಾನು ಅಂದುಕೊಳ್ಳುವುದು ಅಷ್ಟೇ..! ಇವತ್ತು ಬೇಗ ಮನೆಗೆ ಹೋಗುವ ಮನಸ್ಸಾಗದೆ ಅಲ್ಲಿಯೇ ಕೂರಲು ಆಗದೇ, ಹಾಗೆ ಒಂದು ರೌಂಡ್ ನಡೆಯೋಣ ಅನಿಸಿ ರಂಗಶಂಕರದ ಹತ್ತಿರ ಹೋದೆ ..ಮನೆ ಇಂದ ತುಂಬಾ ದೂರವೇನಲ್ಲ..ಅಗಲೇ ಗಂಟೆ ಹತ್ತಾಗಿತ್ತು. ನಡೆಯುವಾಗ ನೀಲವೇಣಿ ಮತ್ತೆ ನೆನಪಾದಳು.ಇವಳ ಬಗ್ಗೆ ನಾನು ಯಾಕೆ ಇಷ್ಟು ಯೋಚನೆ ಮಾಡಬೇಕು ಅನಿಸಿ .. ಯಾವುದಕ್ಕೂ ನಮ್ಮ ಫಿಲಾಸಫರ್‍ ನ ಒಂದು ಮಾತು ಕೇಳೇಬಿಡೋಣ ಅನಿಸಿ ಮೊಬೈಲ್ ತೆಗೆದು ಅವನಿಗೆ ಫೋನ್ ಮಾಡಿದೆ..ಒಂದೆರಡು ರಿಂಗಿನ ನಂತರ ಮೊದಲಿನಂತೆ ಮಧುರವೆನಿಸದೆ ..ಈಗ ಕಿರಿಕಿರಿಯಾಗುವ ” The number you have dialled is switched off ” ಎಂಬ ಯಾವುದೋ ಹೆಣ್ಣಿನ ರೆಕಾರ್ಡೆಡ್ ದನಿ.ದಿನದಲ್ಲಿ ಒಂದು ೪-೫ ಗಂಟೆಯಷ್ಟೆ ಆನ್ ಆಗಿರುವ ಇವನ ಮೊಬೈಲ್ ..ಈ ಘನಂದಾರಿ ಕೆಲಸಕ್ಕೆ ಇವನಿಗೆ ಮೊಬೈಲ್ ಬೇರೆ ಯಾಕೆ ಎಂದು ಸಿಟ್ಟು ಬಂತು..ಇಷ್ಟು ಹೊತ್ತಿಗೆ ರಂಗಶಂಕರವು ಬಂದಿತ್ತು…ಯಾವುದೇ ನಾಟಕ ಇಲ್ಲದಿದ್ದರೆ.. ಇಷ್ಟು ಹೊತ್ತಿಗೆ ವಾಚ್ ಮ್ಯಾನ್ ಒಬ್ಬನಿರುತ್ತಾನೆ..ನಾಟಕ ಇದ್ದಲ್ಲಿ…” ಅರ್ಥ ಆಯಿತೆಂದೋ” ..,”ಆಗಲಿಲ್ಲವೆಂದೋ” ..”ಯಾರಿಗೆ ಹೆಚ್ಚು ತಿಳಿಯಿತೆಂಬ” ಚರ್ಚೆ ನಡೆಸುತ್ತಿರುವ ಸಣ್ಣ ಸಣ್ಣ ಗುಂಪುಗಳಿರುತ್ತವೆ.ಆ ದಿನ ಮುಖ್ಯದ್ವಾರದ ಬಳಿ ವಾಚ್ ಮ್ಯಾನ್ ಕಂಡ.ಪಕ್ಕದಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತೆ… ಕೈಯಲ್ಲಿನ್ನು ಉರಿಯುವ ಸಿಗರೇಟ್ ಇತ್ತು…ಆಕಾಶ ನೋಡುತ್ತ ಒಂದು ದಂ ಎಳೆದೆ,ಹೊಗೆ ಹೊರಗೆ ಬಿಡುತ್ತಿದ್ದ ಹಾಗೆ ಸಣ್ಣದೊಂದು ನಗು. ನನ್ನ ಕಾಲೇಜಿನಲ್ಲಿ ಹುಡುಗರ ಜೊತೆ ಹೀಗೆ ಕೂತು ಸಿಗರೇಟು ಸೇದುತ್ತಿರುವಾಗ ಆಗಾಗ ನನ್ನ ಗೆಳೆಯ ದಿಲೀಪ ಹೇಳ್ತ ಇದ್ದ.. “ತಲೆ ಎತ್ತಿ.. ಆಕಾಶ ನೋಡ್ಕೊಂಡು ಸಿಗರೇಟ್ ಸೇದುವವರಿಗೆ ಕಾನ್ಫಿಡೆನ್ಸ್ ಜಾಸ್ತಿ ಅಂತೆ”. ಇರಬಹುದೇನೋ..!! … ?
“Excuse me,do you have light” ನನ್ನದೇ ಲೋಕದಲ್ಲಿದ್ದವನಿಗೆ ಎಚ್ಚರವಾಯಿತು..ನನ್ನ ಎಡಬದಿಗೆ ತುಂಬಾ ಹತ್ತಿರವಾಗಿ ಒಬ್ಬಳು ಸುಂದರವಾದ ಹುಡುಗಿ..ನೀಲವೇಣಿಗಿಂತಲೂ ಅಂದಗಾತಿ ಎನಿಸಿತು..ಅವಳು ನನ್ನನೇನು ಕೇಳಿದ್ದಳು ಎಂಬುದು ನೆನಪಾಗಿ , “NO… If you Dont mind “ಎಂದು ಕೈಲ್ಲಿದ್ದ..,ಮುಗಿಯಲು ಬಂದಿದ್ದ ಸಿಗರೇಟ್ ಚಾಚಿದೆ. ಅವಳು ಹತ್ತಿಸಿದ ..ಅದೇನು ಸಿಗರೇಟೋ..ವಿಚಿತ್ರವಾದ ವಾಸನೆ ಎನಿಸಿತು… ತನ್ನ ಸಿಗರೇಟ್ ಹಚ್ಚಿಕೊಂಡು ,thanks ಹೇಳಿ,ನಗೆಯೊಂದನ್ನ ಬಿಸಾಕಿ..ನನ್ನ ತುಂಡು ಸಿಗರೇಟ್ ಕೈಗಿತ್ತಳು.ಒಳಗಡೆ ‌ಇದ್ದ ಕ್ಯಾಂಟೀನ್ ಮುಚ್ಚಿದ್ದರೂ ,ಬಿಚ್ಚಿಕೊಂಡಿದ್ದ ಮರದ ಹಾಸಿನ ಮೇಲೆ ಹೋಗಿ ಕುಳಿತಳು.ಕೈ ಸುಟ್ಟ ಸಿಗರೇಟನ್ನು ಎಸೆದು ಮನೆಯ ಕಡೆ ಹೊರಟೆ..ದಾರಿಯುದ್ದಕ್ಕೂ ಯೋಚಿಸುತ್ತಿದ್ದದ್ದು ಒಂದೇ.. ಎಲ್ಲಿಯ ನೀಲವೇಣಿ.?.ಎಲ್ಲಿಯ ಈ ಭಾಮಾಮಣಿ..?.ನನ್ನ ಫಿಲಾಸಫರ್‍ ಒಮ್ಮೆ ಇದೇ ರೀತಿಯ ವಿಷಯಕ್ಕೆ ಹೇಳಿದ್ದ ಮಾತು ನೆನಪಿಗೆ ಬಂತು. “ಅಲ್ಲಪ್ಪ ನೀನು ನಿನಗೆ ಇಷ್ಟ ಆಗಿದ್ದೆಲ್ಲ ಮಾಡ್ತಿಯ,ಅದೇ ಹೆಣ್ಣುಮಕ್ಕಳು ಮಾಡಬಾರದು ಅಂತಿಯ ..ಇದು ಯಾವ ನ್ಯಾಯ.?.” . ಹೌದು.. ನ್ಯಾಯವಲ್ಲದಿರಬಹುದು..ಏನೋ ನನಗೆ ಸರಿ ಕಾಣುವುದಿಲ್ಲ..ಮೈ ಉರಿಯುತ್ತೆ.
ಮತ್ತೊಂದು ಇಂದಿನಂತಹ ರಾತ್ರಿ..ಮಗ್ಗುಲಗಳ ಬದಲಿಸಿ,ಹೊಟ್ಟೆಯ ಮೇಲೆ,ಬೆನ್ನ ಮೇಲೆ.. ಹೇಗೆ ಮಲಗಿದರೂ,ಕತೆ ಕಾದಂಬರಿ ಓದಿದರೂ,ಅವರು ಇವರ ಬಳಿ ಮೊಬೈಲಿನಲ್ಲಿ ಮಾತನಾಡಿದರೂ..ರಾತ್ರಿ ಮೂರಾಯಿತು…. ನಿದ್ದೆಯ ಸುಳಿವಿಲ್ಲ.ಕಣ್ಣ ಉರಿ,ತಲೆಯ ನೋವಿನೊಡನೆ ಆಫೀಸಿಗೆ ಹೋದಾಗ ನೆನಪಾದದ್ದು..ನೀಲವೇಣಿಯ ರೆಸ್ಯೂಮ್.ದಿನದ ಹೆಚ್ಚಿನ ಸಮಯ ಕ್ಯಾಂಟೀನಿನಲ್ಲೇ ಕಳೆದು ಆ ದಿನದ ಎಲ್ಲಾ ಕೆಲಸಗಳನ್ನು(ನೀಲವೇಣಿಯ ಕೆಲಸದ ವಿಷಯವು ಸೇರಿಸಿ).. ಮುಂದೂಡಿ, ಸಂಜೆ ಎಂದಿಗಿಂತ ಬೇಗ ಹೊರಟು ನಮ್ಮ ಫಿಲಾಸಫರ್‍ ಈ ವೇಳೆಯಲ್ಲಿ ಮಾಮೂಲಾಗಿ ಸಿಗುತ್ತಿದ್ದ ಬಿ.ಡಿ.ಎ ಕಾಂಪ್ಲೆಕ್ಸ್ ಬಳಿ ಹೋದೆ.”ಏನಪ್ಪ ಇವತ್ತೇನು ಇಷ್ಟು ಹೊತ್ತಿನಲ್ಲಿ ನಮ್ಮನ್ನ ನೆನಸ್ಕೊಂಡು ಈ ಕಡೆ ಬಂದ..? ಅಥವ ಏನಾದ್ರು ಕೆಲಸ ಇತ್ತ..ಹತ್ತಿರದಲ್ಲಿ ” ಎಂದು ಕುಹಕಿಸುತ್ತ ನನ್ನ ಬಿದ್ದು ಹೋದ ಮುಖ ನೋಡಿ..ತನ್ನ ಗೆಳೆಯರ ಗುಂಪಿನಿಂದ ಎದ್ದು ಬಂದ.”ಏನಾಯ್ತೋ ..ಯಾಕೆ ಇಷ್ಟು Dull ಆಗಿ ಕಾಣ್ತೀಯ ” ಎಂದ , “ಏನಿಲ್ಲ ಗುರು.. ನಿದ್ದೆ ಸರಿಯಾಗಿಲ್ಲ ಅಷ್ಟೇ ..ಬಾ ಟೀ ಕುಡಿಯೋಣ” ಎಂದು ಅಲ್ಲೇ ಬಳಿಯಲ್ಲಿದ್ದ ಟೀ ಶಾಪ್ ಎಂದು ಬೋರ್ಡ್ ಹಾಕಿ ಪಿನ್ನಿನಿಂದ ಹಿಡಿದು ಪಾರ್ಕರ್‍ ಪೆನ್ನಿನ ತನಕ ಎಲ್ಲ ಮಾರುತ್ತಿದ್ದ ಅಂಗಡಿಯ ಕಡೆ ಅವನ ಜೊತೆ ನಡೆದೆ.ಪ್ಲಾಸ್ಟಿಕ್ ಕಪ್ಪಿನಲ್ಲಿ ಕೊಟ್ಟ ಕಪ್ಪು ಕಾಫಿಯೊಂದಿಗೆ ಪಕ್ಕದ ಕಟ್ಟೆಯ ಮೇಲೆ ಅಕ್ಕ ಪಕ್ಕ ಕುಳಿತೆವು.”ನಿನ್ನ ಹತ್ರ ಒಂದು ವಿಷಯ ಮಾತನಾಡಬೇಕಿತ್ತು..?” ..ಬೇರೆ ಸಮಯದಲ್ಲಿ ನೇರವಾಗಿ ಹೀಗೆ ವಿಷಯಕ್ಕೆ ಬರುವುದು ನನ್ನ ಜಾಯಮಾನವಲ್ಲ .. ಇದು ಗಂಭೀರವಾದ ವಿಷಯವೇ ಇರಬೇಕು ಅಂತ ಅವನಿಗೂ ಅನಿಸಿರಬೇಕೆಂದು ಅವನ ಕುತೂಹಲ ಹೇಳುತ್ತಿರುವಂತಿತ್ತು. ” ಏನಿಲ್ಲ ನೆನ್ನೆ ನಮ್ಮ ಆಫೀಸಿಗೆ ನಮ್ಮ ತಂದೆಯ collegue ಮಗಳೊಬ್ಬಳು ಬಂದಿದ್ದಳು.ನೋಡೋಕೆ ತುಂಬಾ ಚೆನ್ನಾಗಿದ್ದಾಳೆ .. ಕೆಲಸ ಕೇಳ್ಕೊಂಡು ಬಂದಿದ್ದಳು.ಅವರ ತಂದೆ ತೀರಿಕೊಂಡಿದ್ದಾರೆ ಮನೆಯಲ್ಲಿ ಕಷ್ಟ ಅಂತೆ.. ” ಎಷ್ಟು ಹೇಳಬೇಕು ? ಏನು ಹೇಳಬೇಕು ? ಗೊತ್ತಾಗದೆ ಇಷ್ಟು ಹೇಳಿದೆ.” ಸರಿ, ಅದ್ರಲ್ಲಿ ಏನಿದೆ..? ಕೊಡಿಸಪ್ಪ ನಿನಗೆ ಹೆಂಗೂ ಆಫೀಸಿನಲ್ಲಿ ಒಳ್ಳೆ contacts ಇದೆಯಲ್ಲ..” ಎಂದು ಸಲೀಸಾಗಿ ಉತ್ತರ ಹೇಳಿದ.  “ಅದಲ್ಲ ಕಣೋ..ಆ ಹುಡುಗಿ ನನಗೆ ತುಂಬಾ ಇಷ್ಟ ಆಗಿದ್ದಾಳೆ.. ನಿನಗನಿಸಬಹುದು.. “ಇದೇನು ತಿಕಲು..ನೋಡಿ ಒಂದು ದಿನಕ್ಕೆ ತುಂಬಾ ಇಷ್ಟ ಅಂತಾನೆ” ಅಂತ, ನನಗೆ ನೆನ್ನೆ ಇಂದ ಬೇರೆ ಏನೂ ಯೋಚನೆ ಮಾಡೋಕೆ ಆಗ್ತ ಇಲ್ಲ. ನಾನೂ ಒಪ್ಪಿಕೊಳ್ತಿನಿ ಚೆನ್ನಾಗಿರುವ ಬೇರೆ ಬೇರೆ ಹುಡುಗಿಯರನ್ನು ನೋಡಿದಾಗಲೂ ನನಗೆ ಇಷ್ಟ ಆಗಿದೆ ಅಂತ,ಆದರೆ ಯಾವುದು ಈ ತರಹ ಆಗಿಲ್ಲ ಗುರು.. ”  ಆವೇಶದಲ್ಲಿ ಮಾತನಾಡುತ್ತಿದ್ದಂತ ನನ್ನನ್ನು ಸ್ವಲ್ಪ ವಿಚಿತ್ರವಾಗಿ ನೋಡುತ್ತ ..ರಾಘು, ” ‌ಫ್ರೀ ಇದ್ದರೆ ಬಾ .. ಹಂಗೆ ಒಂದು ಪೆಗ್ ಹಾಕಿಕೊಂಡು ಮಾತಾಡೋಣ” ಎಂದು ಉತ್ತರಕ್ಕೆ ಕಾಯದೆ ಎದ್ದು ನಿಂತ,ಇದನ್ನೇ ಕಾಯುತಿದ್ದೆನೆನೋ ಎನ್ನುವಂತೆ ನಾನು ಹೊರಟೆ. ಇಷ್ಟು ದಿನದಲ್ಲಿ ಎಂದೂ ಮನೆಗೆ ೧ ಗಂಟೆಯ ಮೇಲೆ ಹೋಗಿರಲಿಲ್ಲ.. ” ಲೇಟ್ ಆಗಿ ಬರುತ್ತೀನಮ್ಮ..ಊಟಕ್ಕೆ ಕಾಯಬೇಡಿ ” ಎಂದು ಮನೆಗೆ ಮುಂಚಿತವಾಗಿ ತಿಳಿಸಿದ್ದರಿಂದ ಒಳಗಿನಿಂದ ಬೀಗ ಹಾಕಿಕೊಂಡು ಎಲ್ಲ ದೀಪ ಆರಿಸಿ ಮಲಗಿದ್ದರು.ಕತ್ತಲು,ಅಮಲು,ಯಾವುದೋ ಅರಿಯದ ದಿಗಿಲು..,ಎಲ್ಲ ಸೇರಿ ಹುಚ್ಚು ಹಿಡಿಸಿದಂತಿತ್ತು, ತುಂಬಾ ಪ್ರಯತ್ನ ಮಾಡಿ..ಸದ್ದಾಗದಂತೆ ಬೀಗ ತೆಗೆದು ಮತ್ತೆ ಹಾಕಿಕೊಂಡು ನನ್ನ ರೂಮ್ ಸೇರಿ ಒಳಗಿನಿಂದ ಚಿಲುಕ ಹಾಕಿಕೊಂಡೆ,ಅರ್ಧ ನಿಮೀಲಿತವಾಗಿದ್ದ ಕಣ್ಣು ಹಾಸಿಗೆ ನೋಡಿ ಕುಣಿದಂತಾಯಿತು,ಬಟ್ಟೆಯನ್ನು ಬದಲಾಯಿಸದೆ ಮಲಗಿದ್ದದ್ದು,ಮರುದಿನವೇ ತಿಳಿದಿದ್ದು.

“ರಾಮೂ..,ಏಳೋ.. ಆಫೀಸಿಗೆ ಹೋಗೊಲ್ವ…?” ಅಮ್ಮನ ದನಿ..,ದಡ ಬಡ ಬಾಗಿಲಿನ ಸದ್ದು, ಬಲವಂತದಿಂದ ಕಣ್ಣು ಅಗಲಿಸಿ ಗಡಿಯಾರ ನೋಡಿದರೆ ಆಗಲೇ ಒಂಭತ್ತಾಗಿತ್ತು. ಕೆಲಸದಲ್ಲಿ ಸ್ವಲ್ಪವಾದರೂ ಆಸಕ್ತಿ ಇರುವವರಿಗೆ ವಾರ ಕಳೆಯುವುದು ತಿಳಿಯದು..ಇಲ್ಲವಾದಲ್ಲಿ ಶನಿವಾರ,ಭಾನುವಾರ ಎಂದು ಬರುವುದೋ ? ಎಂದೇ ಕಾಯುವಂತೆ.. ವಾರ… ಕಾಯುತ್ತಾ.. ಕಳೆಯಿತು. ಭಾನುವಾರ ಕಳೆದು ಸೋಮವಾರಕ್ಕೆ ನನ್ನ ಮನಸ್ಸು ಸ್ವಲ್ಪ ಹಿಡಿತದಲ್ಲಿದ್ದಂತೆ ಅನಿಸತೊಡಗಿತ್ತು.ಗುರುವಾರವು ಬಂದು ಕಳೆದು ಹೋಗಲಿ ಎಂದು  ನಿಮಿಷ,ನಿಮಿಷಕ್ಕೂ ಭಜನೆ ಮಾಡುವಂತಾಗಿತ್ತು ನನ್ನ ಪರಿಸ್ಥಿತಿ.ರಂಗನಿಂದ ಹಿಡಿದು ಸ್ವಾಮಿಯವರಗೆ ದಿನಕ್ಕೆ ಇಪ್ಪತ್ತು ಸಲ ಎಲ್ಲರೂ ಕೇಳುತಿದ್ದೊಂದೇ ” ಯಾಕ್  ಸಾರ್..ಯಾಕೋ ತುಂಬ ಡಲ್ ಆಗಿ ಕಾಣ್ತೀರ..” .ನಾನು ಖುಷಿಯಾಗಿದ್ದರೆ, ಯಾಕೆ? ಎಂದು ಡಲ್ ಆಗಿ ಇದ್ದರೂ, ಯಾಕೆ ? ಎಂದು ನಿಮಗೆಲ್ಲ ನಾನು ಹೇಳಲೇಬೇಕೆ..? ಎಂದು ಅನಿಸುತ್ತಿದ್ದರೂ, “ಏನಿಲ್ಲ, ಮೈ ಯಲ್ಲಿ ಆರಾಮಿಲ್ಲ ” ಎಂದು ಬಲವಂತದ ಒಂದು ನಗೆಯ ನೀಡುತ್ತಿದ್ದೆ.ಯಾವತ್ತು ಇಲ್ಲದ ನಮ್ಮ ಮ್ಯಾನೇಜರ್‍ ಖುದ್ದು ನನ್ನ ಛೇಂಬರ್‍ ಬಳಿ ಇವತ್ತೇ ಬರಬೇಕಿತ್ತೇ..? ” ಏನ್ರಿ ಇತ್ತೀಚೆಗೆ ನಿಮ್ಮದೇನು ಸುದ್ದಿನೇ ಇಲ್ಲ ..ಆರಾಮಾಗಿದಿರ? ” ಎಂದು ಒಂದು ದೇಶಾವರಿ ನಗೆಯನಿತ್ತರು. ” ಹಾಗೇನಿಲ್ಲ ಸಾರ್‍ …,” ಎಂದು ಆ ನಗೆಯನ್ನು ಮರಳಿಸಿದೆ. “ನಿಮಗೆ ಯಾರಾದರು ಗೊತ್ತಿದ್ದರೆ ಹೇಳಿ. ನಮ್ಮ ಡಿಪಾರ್ಟಮೆಂಟಿನಲ್ಲಿ ಒಂದು ಐದು Junior Officer ಗ್ರೇಡ್ ಪೊಸ್ಟ್ ಖಾಲಿ ಇದೆ ” ಎಂದರು.ನನ್ನ ಹತ್ತಿರ ಈ ವಿಷಯ ಹೇಳೊದಿಕ್ಕೆ ಅವರಿಗೆ ಕಾರಣ ಇರದೇ ಇರಲಿಲ್ಲ.ಹಿಂದೆ ಒಂದೆರಡು ತಾತ್ಕಾಲಿಕ ಕಾಲದ ಹುದ್ದೆಗಳಿಗೆ ಒಳ್ಳೆಯ ರೇಟ್ ಅವರಿಗೆ ಸಿಗುವಂತೆ ಮಾಡಿದ್ದೆ. ಈಗ ನೀಲವೇಣಿಯ ನೆನಪಾದರೂ..,ಅವರ ಬಳಿ ಹೇಳಬೇಕು ಎಂದೆನಿಸಲಿಲ್ಲ.ನಾನು ಹೋಗಿ ಅವರ ಬಳಿ ಮಾತನಾಡಿ .. ನೀಲವೇಣಿಯ ಕೆಲಸ ಆಯಿತೆಂದು ತಿಳಿಯುವಷ್ಟು ಭರವಸೆ ನನಗೆ ಅವರ ಮೇಲಂತೂ ಇದ್ದೇ ಇತ್ತು.

ಇದೆಲ್ಲ ನನ್ನ ಕೈಲಿ ಆಗೊಲ್ಲ ಅನಿಸ್ತ ಇದೆ .. ಹೀಗೆ ಒಬ್ಬರ ಬಗ್ಗೆ ತಲೆ ಕೆಡಿಸ್ಕೊಂಡು ಕೂರೋದು. ಹಿಂದೊಮ್ಮೆ ಕಾಲೇಜಿನಲ್ಲಿ ನಮ್ಮ ಕ್ಲಾಸ್ ಮೇಟ್ ಕವಿತಳ ಮೇಲೆ ಮನಸ್ಸಾದಗಲೂ ಅಷ್ಟೇ..! ಒಂದೆರೆಡು ತಿಂಗಳು ಅವಳದೇ ಧ್ಯಾನ ಆಮೇಲೆ ಯಾರಿಗೆ ಬೇಕು ಈ ತಲೆನೋವು ..ನನ್ನ ಪಾಡಿಗೆ ನಾನು ಇರುವುದೇ ಒಳ್ಳೆಯದು ಅನಿಸತೊಡಗಿತ್ತು.ಇನ್ನೆರಡು ದಿನದಲ್ಲಿ ನೀಲವೇಣಿ ಬರುತ್ತಾಳೆ ಎನ್ನುವ ಯೋಚನೆ ಕೂಡ ನಾನು ಅವಳ ಕೆಲಸಕ್ಕೆ ಏನಾದರು ಮಾಡಬೇಕು ಎಂದು ಪ್ರೇರೇಪಿಸಲಿಲ್ಲ.ಇದೇ ಗೊಂದಲದಲ್ಲಿ ಸಂಜೆ ನಮ್ಮ ಗೆಳೆಯರ ಗುಂಪಿನಲ್ಲಿದ್ದ ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರತಾಪ್ ನ ಸುಮ್ಮನೆ ಹಾಗೆ ಲೋಕಾಭಿರಾಮವಾಗಿ ಮಾತನಾಡುತ್ತ ಕೇಳಿದೆ. ” ನಿಮ್ಮ ಕಂಪನಿಯಲ್ಲಿ fresher.., ಬಿ.ಎಸ್.ಸಿ ಮಾಡಿದವರಿಗೂ ಕೆಲಸ ಕೊಡುತ್ತಾರಲ್ಲವ..? ” . “ಹೂನಪ್ಪ.. ಕೊಡ್ತಾರೆ ಆದರೆ ಅವರಿಗೆ ಸೆಪೆರೇಟ್ traning ಇರುತ್ತೆ ಆಮೇಲೆ ಕೆಲಸಕ್ಕೆ ಹಾಕ್ತಾರೆ” ಎಂದ. ಕಳೆದ ಐದು ವರ್ಷದಿಂದ  ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪ್ರತಾಪ್ ನಮ್ಮ ಗೆಳೆಯರಲ್ಲಿ ಸಾಕಷ್ಟು ಜನಕ್ಕೆ ತನ್ನ ಕೈಲಾದ ಸಹಾಯ ಮಾಡಿ ಅವರಿಗೆ ಒಂದು ಕೆಲಸದ ವ್ಯವಸ್ಥೆ ಮಾಡಿದ್ದಾನೆ, ಇವನಿಗೆ ಒಂದು ಮಾತು ಹೇಳಿಯೇ ಬಿಡೋಣವೆನಿಸಿ ” ನಮ್ಮ ತಂದೆಯ ಸ್ನೇಹಿತರ ಮಗಳು ಒಬ್ಬಳು ಇದ್ದಾಳೆ ಅವಳ Resume ನಿನಗೆ ಕಳಿಸ್ತಿನಿ..ನೋಡು ನಿನ್ನ ಕೈಲಿ ಏನು ಮಾಡೋಕಾಗುತ್ತೆ ಅಂತ” .. ಎಂದೂ ಇಲ್ಲದ ವಿನಮ್ರತೆಯಲ್ಲಿ ಅವನ ಕೇಳಿದೆ.ಅವನಿಗೆ ನಾನು ಕೇಳುವ ರೀತಿ ಸ್ವಲ್ಪ ವಿಚಿತ್ರ ಎನಿಸಿದರೂ “ಆಯ್ತು ಕಳಿಸು ..ನೋಡೋಣ,ನನ್ನ ಮೊಬೈಲಿಗೆ ಕಾಲ್ ಮಾಡೋಕೆ ಹೇಳು ಮುಂದಿನ ವಾರ ” ಎಂದ.ಸ್ವಲ್ಪ ಮನಸ್ಸಿಗೆ ನಿರಾಳ ಅನಿಸತೊಡಗಿತ್ತು. ಅವಳು  ಯಾವ ಐ.ಟಿ. ಕಂಪನಿಯಲ್ಲಿ ಕೆಲಸಕ್ಕೆ ಪ್ರಯತ್ನ ಮಾಡಿದ್ದಳೋ.ಇಲ್ಲವೋ ನನಗೆ ತಿಳಿದಿರಲಿಲ್ಲ.ಪ್ರತಾಪನ ಕಡೆಯಿಂದ ಅವಳಿಗೆ ಕೆಲಸ ಸಿಗುವುದು ಕಷ್ಟವಾಗದು ,ಅವಳಿಗಾದರೂ ಐ.ಟಿ. ಕೆಲಸದಲ್ಲಿ ಅಲ್ಲವೇ ಆಸಕ್ತಿ ಇದ್ದದ್ದು. ಎರಡು ದಿನ ಹೆಚ್ಚಿನ ತ್ರಾಸವಾಗದೇ ಕಳೆಯಿತು.
ಗುರುವಾರ ಎಂದಿನಂತೆ.. ಆಫೀಸಿಗೆ ಬಂದರೂ, ಎಂದಿನಂತಲ್ಲದೆ..  ಬಂದಾಗಿನಿಂದ ಕ್ಯಾಂಟೀನಿನಲ್ಲಿ ಕುಳಿತು ರಸ್ತೆ ಕಾಯುತ್ತಿದ್ದೆ.ಸರಿ ಸುಮಾರು ೧೦ ಗಂಟೆಗೆ ನೀಲವೇಣಿ ನಡೆದು ಬರುತಿರುವುದು ಕಂಡಿತು.ತೀರ ಆಕಸ್ಮಿಕವೇನು ಎಂಬಂತೆ ಅವಳಿಗೆ ಎದುರಾದೆ.ನಗೆಯ ವಿನಿಮಯ,ಹೇಗಿದ್ದಿರ..ಮನೆಯಲ್ಲಿ ಎಲ್ಲ ಆರಾಮ.. ?? ಈ ತರಹದ ಮಾತು ಆಯಿತು. ಏನೋ ಅವಳನ್ನು ಕಾಫಿಗೆ ಕರೆಯಬೇಕು ಅಂತಾಗಲೀ, ಎಲ್ಲಾದರು ಕುಳಿತು ಸಾವಕಾಶವಾಗಿ ಮಾತನಾಡಬೇಕು ಎಂದಾಗಲೀ ಮನಸ್ಸು ಆಗಲಿಲ್ಲ.  “ಕಾಫಿ,ಟೀ ಏನಾದರೂ ತಗೋತೀರ ” ಎಂದು ಕೇಳಿ ಅವಳು “ಬೇಡ” ಎನ್ನಲಿ ಎಂದೇ ಕಾಯುತ್ತಿದ್ದೆ. “ಇಲ್ಲ, ಬೇಡ ..ಈಗ ಆಯ್ತು ” ಎಂದಳು. “ನಮ್ಮ ಆಫೀಸಿನಲ್ಲಿ ಸದ್ಯಕ್ಕಂತೂ ಯಾವ ಕೆಲಸವೂ ಇಲ್ಲ , ನನ್ನ ಸ್ನೇಹಿತನೊಬ್ಬ ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಾನೆ ಅವನಿಗೆ ನಿಮ್ಮ  ರೆಸುಮೆ ಕೊಟ್ಟಿದ್ದೇನೆ .. ಈ ನಂಬರ್‍ಗೆ ನೀವು ಮುಂದಿನ ವಾರ ಫೋನ್ ಮಾಡಿ..  ಇಂಟರ್‍ ವ್ಯೂ ವ್ಯವಸ್ಥೆ ಮಾಡಿಸುತ್ತಾನೆ .. ಚೆನ್ನಾಗಿ ಮಾಡಿ.” ಎಂದು ಸೀದ ವಿಷಯಕ್ಕೆ ಬಂದದ್ದು ನನಗೆ ಕಷ್ಟವಾಗಿತ್ತು,ನಾನು ಕೊಟ್ಟ ನಂಬರಿನ ಚೀಟಿ ತೆಗೆದುಕೊಂಡು “ಸರಿ…” ಎಂದಷ್ಟೇ ಹೇಳಿ..ಅದೆನೋ ಪ್ರಶ್ನಾರ್ಥಕವಾಗಿ ನನ್ನ ನೋಡುತಿರುವಂತೆ ಭಾಸವಾಗುತಿತ್ತು.ಅವಳನ್ನು ಅಲ್ಲಿ ..ಹಾಗೆ.. ಎದುರಿಸಲು ನನಗೆ ಆಗುತಿರಲಿಲ್ಲ, “ನನಗೆ ಕೆಲಸ ಇದೆ ಸ್ವಲ್ಪ…ನಾನು ಹೊರಡಬೇಕು, ದಯವಿಟ್ಟು ತಪ್ಪು ತಿಳಿಯಬೇಡಿ.., ತಪ್ಪದೇ ಫೋನ್ ಮಾಡಿ ..ಪ್ರತಾಪ್ ಅಂತ ಅವನ ಹೆಸರು ..ನನ್ನ ಹೆಸರು ಹೇಳಿ ಅವನಿಗೆ ಗೊತ್ತಾಗುತ್ತೆ. ” ಎಂದು ಮನದ ತುಮುಲವನ್ನೆಲ್ಲ ಹತ್ತಿಕ್ಕಿ ..ಮುಗುಳ್ನಕ್ಕೆ .. ಕನ್ನಡಿ ಒಂದಿದ್ದೂ, ಅವಳಿಗೆ ಕೊಟ್ಟ ಈ ನಗೆಯನ್ನ್ನು..ನಾನೇ ನೋಡಿದ್ದರೆ ಮೈ ಪರಚಿಕೊಳ್ಳುತ್ತಿದ್ದೆನೆನೋ..??.ಹೊರಟು ನಿಂತವನನ್ನು “ಆಯ್ತು , ತುಂಬಾ ಥ್ಯಾಂಕ್ಸ್.. ನಾನು ಹೊರಡಿತಿನಿ” ಎಂದ ನೀಲವೇಣಿ ಮುಂದೆ ಅದೆಕೋ ನಾನು ಚಿಕ್ಕವನಾಗಿ ಕಾಣುತ್ತಿದ್ದೆ. “ಏನಾದರು ಇದ್ರೆ ಫೋನ್ ಮಾಡಿ ” ಎಂದು ಆಗಲೇ ಎರಡು ಹೆಜ್ಜೆಯನ್ನಟ್ಟಿದ್ದೆ. ತಿರುಗಿಯೂ ನೋಡದೆ ರಿಸೆಪ್ಶನ್ ತನಕ ಬಂದೆ.ಒಳಗೆ ಹೋಗಬೇಕು ಅನಿಸದೆ ಮತ್ತೆ ಏನೋ ನೆನಪಾದಂತೆ ಹಿಂದೆ ಬಂದೆ.. ಕ್ಯಾಂಟೀನಿನ ಕಡೆ ದಾಪುಗಾಲು ಹಾಕಿದೆ ..ಅಲ್ಲೇ ಎರಡು ನಿಮಿಶ ನಿಂತು ತುಸು ದೂರದಲ್ಲಿ ನಡೆಯುತ್ತಿದ್ದ ನೀಲವೇಣಿಯನ್ನೊಮ್ಮೆ , ಮತ್ತೊಮ್ಮೆ ಕ್ಯಾಂಟೀನಿನ ಕಡೆ ನೋಡಿದೆ. ಮತ್ತೆ ಈಗ ಒಳಗೆ ಹೋದರೆ ಸ್ವಾಮಿ ತಲೆ ತಿನ್ನುತಾನೆ ಎಂದೆನಿಸಿ , ಆಫೀಸಿನ ಆ ಕಡೆ ಇದ್ದ ಸಣ್ಣ ಟೀ ಅಂಗಡಿಯ ಕಡೆ ನಡೆದೆ.

ಒಂದು ವಾರದಿಂದ  ಭಾರವಾಗಿದ್ದ ಮನಸ್ಸು ಈಗ ಸ್ವಲ್ಪ ಹಗುರವಾದಂತಿತ್ತು, ಪ್ರತಾಪ ಅವಳಿಗೆ ಕೆಲಸ ಕೊಡಿಸಬಹುದು.. ಎಲ್ಲಕ್ಕಿಂತ ಮಿಗಿಲಾಗಿ ಆ ದಿನ ನಾನು , ಫಿಲಾಸಫರ್‍ ಒಂದು ಗಂಟೆಯ ತನಕ ಕುಡಿಯುತ್ತ ಕೂತಾಗ  ಅವನು ಹೇಳಿದ ಮಾತು ” ನೋಡೋ ಇನ್ನು ಒಂದು ವಾರ ಆಗಿಲ್ಲ ಆಗಲೇ ನೀನೇನೋ ಕಳೆದುಕೊಂಡಿರುವ ಹಾಗೆ ಅವಳನ್ನ ಹಚ್ಚಿಕೊಂಡಂತೆ ಕಾಣ್ತ ಇದಿಯ.. ಇನ್ನು ನಿನ್ನ ಆಫೀಸಿನಲ್ಲಿ ಅವಳಿಗೆ ಕೆಲಸ ಕೊಡಿಸೋದು ನಿನಗೆ ದೊಡ್ಡ ಮಾತೂ ಅಲ್ಲ .. ಹಾಗೇನಾದರೂ ಆದರೆ ಅವಳಿಗೆ ನಿನ್ನ ಮೇಲೆ  ತುಂಬಾ ಅಭಿಮಾನ ಇರುತ್ತೆ . ನೀನು ಏನು ಹೇಳಿದರೂ ಅವಳು ಇಲ್ಲ ಅನ್ನದೆ ಇರಬಹುದು.ಅವಳಿಗೆ ನೀನು ಇಷ್ಟ ಆಗ್ತಿಯೋ..? ಇಲ್ಲವೋ..? ನೀನು ಅವಳನ್ನ ಮದುವೆ ಆಗ್ತಿಯ ಎಂದರೂ..ನೀನೇನೋ ಅವಳ ಬಾಳಿಗೆ ಬೆಳಕಾಗಿ ಬಿಟ್ಟೆ ಎಂದು ಅವಳು ಒಪ್ಪಲೂ ಬಹುದು..ನಿನ್ನ ಮೇಲೆ ಅವಳಿಗೆ ನಿಜವಾದ ಪ್ರೀತಿ ಹುಟ್ಟುತ್ತೋ ಇಲ್ಲವೋ ಅದು ನಿನಗೆ ಗೊತ್ತಾಗದೇ ಇರಬಹುದು.ಅದರ ಬದಲು ನಿನಗೆ ಅವಳ ಮೇಲೆ ನಿಜವಾದ ಪ್ರೀತಿ ಎಂದೆನಿಸಿದರೆ ಅದು ಹಣ್ಣಾಗುವ ತನಕ ಕಾಯಬೇಕು..ಅವಳನ್ನ ನೀನು ದಿನ ನೋಡುತ್ತಿದ್ದರೆ ಈ ವಿಷಯದ ಪರೀಕ್ಷೆ ಆಗೋಲ್ಲ. ಒಂದಷ್ಟು ದಿನ ಹೋಗಲಿ … ಆಮೇಲೂ ನಿನಗೆ ಅವಳ ಮೇಲೆ ಇಷ್ಟ ಆಯಿತು ಅನಿಸದರೆ ಆಗ ಅವಳ ಹತ್ತಿರ ಮಾತನಾಡಿ ನೋಡು.. ಅವಳ ಕೆಲಸದ ವಿಷಯಕ್ಕೆ ನಿನಗೆ ಗೊತ್ತಿರೋರಿಗೆ ಯಾರಿಗಾದರೂ ಹೇಳು.. ಅದು ಅವಳಿಗೆ ನೀನೆ ಎಲ್ಲ ಮಾಡಿದೆ ಅನಿಸದಂತಿರಬೇಕು….ನಾನು ನನಗೆ ಅನಿಸಿದ್ದನ್ನ ಹೇಳ್ತ ಇದೀನಿ…ನಿನಗೆ ಸರಿ ಅನಿಸಿದ್ದು ನೀನು ಮಾಡು ” .

– ಜಯಂತ್

Advertisements

Read Full Post »