Feeds:
Posts
ಟಿಪ್ಪಣಿಗಳು

Archive for ಜನವರಿ, 2010


” ಸಾರ್‍ , ಭಿಕ್ಷೆ ಅಂತ ಕೊಡಬೇಡಿ, ಏನೋ ಒಂದೈದು ನಿಮಿಷದ ಟೈಮ್ ಪಾಸ್ ಆಗುತ್ತೆ ಅಂತ ಕೊಡಿ, ಜಾಸ್ತಿ ಬೇಡ ಸಾರ್‍ .. ಒನ್ಲೀ ಫೈವ್ ರುಪೀಸ್ ಪ್ಲೀಸ್ , ಐದು ನಿಮಿಷದ.. ಮಾತು, ಐದು ರೂಪಾಯಿ ಅಷ್ಟೇ “, ರೈಲ್ವೆ ಸ್ಟೇಷನ್ನನಲ್ಲಿ ಇದೆಲ್ಲ ಸರ್ವೇ ಸಾಮಾನ್ಯವಾದರೂ , ಅವರ ಮಾತು ಕೇಳದಂತೆ ಆ ಕಡೆ ಈ ಕಡೆ ತಿರುಗುವ ನಾನು ಇದು ಯಾವುದೋ ಹೊಸ ಟೈಪ್ ಎಂದು ಅವನೆಡೆ ತಿರುಗಿದೆ. ಸುಮಾರು ೪೦-೪೫ ವರುಷವಿರಬಹುದು, ಕುರುಚಲು ಗಡ್ಡ, ತುಂಬಾ ಗಲೀಜಾಗಿರದ ಒಂದು ಬಿಳಿಯ ಪ್ಯಾಂಟ್, ತಿಳಿ ನೀಲಿಯ ಶರ್ಟ್ ಮೇಲೆ ಒಂದು ಮಾಸಲು ಕೋಟಿನಂತಹ ಕೋಟು . ಸ್ವಲ್ಪ ಹಳದಿಯ ಹಲ್ಲು ಗಿಂಜಿ ನನ್ನೆಡೆ ನೋಡುತ್ತಿದ್ದ ಅವನ ಕಣ್ಣಲ್ಲಿ ಯಾವುದೋ ಅಕರ್ಷಣೆ ಇರುವದನ್ನು ,ಆಗಲೇ ಸ್ವಲ್ಪ ಏರಿಸಿಕೊಂಡು ಬಂದಿರುವುದನ್ನು ಕಂಡಂತಾಯಿತು. ತುಂಬಾ ಸಂಕೋಚದ ಪ್ರಾಣಿಯಾದ ನಾನು ಈಗ ಅವನೆಡೆ ತಿರುಗಿ ಹಾಗೇ ಹೊರಟರೆ ಅಥವ ಮುಖ ತಿರುಗಿಸಿಕೊಂಡರೂ ಇವನು ನನ್ನ ಮುಖ ನೋಡಿ ಒಳ್ಳೆ ಗಿರಾಕಿ ಎಂದೇ ಬೆನ್ನು ಹತ್ತಿರಬೇಕೆಂದು, ಹೇಗೂ ಟ್ರೈನ್ ಬರುವವರೆಗೂ ನಿಭಾಯಿಸಿದರಾಯಿತು ಎಂದೋ ? , ಐದು ನಿಮಿಷದ ಮಾತಿಗೆ ಐದು ರೂಪಾಯಿ ಕೇಳುತ್ತಿರುವ ಇವನ ಬತ್ತಲಿಕೆಯ ಬಾಣವದಾವುದು ಎಂದೋ ? ನಸು ನಕ್ಕೆ. ಅವನು ಪ್ರೊಫೆಶನಲ್ ಎಂದೆನಿಸಿದ್ದು ಆಗಲೇ. ಇಂಗ್ಲಿಷಿನಲ್ಲೇ ಆರಂಭಿಸಿದ. ” So.. I take that for an Yes , ನೋಡಿ ಸಾರ್‍ ಈಗ ೨.೧೦, ನಾನು ೨.೧೫ ರವರೆಗೆ ಮಾತಾಡ್ತಿನಿ. ಆಮೇಲೆ ನೀವು ಕಾಯ್ತ ಇರುವ ಟ್ರೈನ್ ಬಂದರೂ ಬರಬಹುದು,ಬರದೆ ಇರಬಹುದು. ಐದು ರೂಪಾಯಿ ಕೊಡ್ತ ಇದೀರಾ ಅಂತ ನನ್ನ ಮತ್ತೆ ಮಾತಿಗೆ ನಿಲ್ಲಿಸ್ಕೊಬಾರದು.”

ನನ್ನ ಐದು ರೂಪಾಯಿ ಹಾಳಾಗುತ್ತಿಲ್ಲ ಎಂದು ನನಗಾಗಲೇ ಅನಿಸತೊಡಗಿತ್ತು. ಅವನು ಮುಂದುವರೆಸಿದ. ” ಪ್ರಶ್ನೆಗಳಿಲ್ಲ, ಉತ್ತರಗಳಿಲ್ಲ ಸಾರ್‍ ನಾನು ಮಾತಾಡಿ ಮುಂದೆ ಹೋಗ್ತ ಇರ್ತಿನಿ. ಜೋಕ್ಸ್ ಮಾಡಿ ನಗಿಸಿದರೆ ಐದು ನಿಮಿಷ ನಗ್ತಿರಾ ಮರೆತು ಹೋಗ್ತೀರ. ಐದೈದು ರೂಪಾಯಿಗೆ ಕೈ ಚಾಚೋ ನನಗೆ ಐದು ರೂಪಾಯಿ ಬೆಲೆ ಈಗಲೇ ಗೊತ್ತಾಗಿರೋದು ಸಾರ್‍. ಅವರಿವರ ಕತೆ ಹೇಳಿದ್ರೆ ಅದರಲ್ಲಿ ನನ್ನದು ಅಂತ ಏನು ಇರೊಲ್ಲ. ನಿಮಗೆ sweet ಅಲ್ಲದಿದ್ದರೂ short ಆಗಿ ನನ್ನ ಕತೆ ಹೇಳ್ತೀನಿ ಅಷ್ಟೇ. ನಮ್ಮಲ್ಲಿರೋ ತುಂಬಾ ಜನದ ಹಾಗೆ ನನ್ನನ್ನು ಓದು, ಓದು ಅಂತ ಮನೆಯಲ್ಲಿ ಓದಿಸಿ , ನಾನು ಎಂಜಿನಿಯರಿಂಗ್ ಮುಗಿಸಿ ಆಗ ಇನ್ನು ಹೆಸರು ಮಾಡುತ್ತಿದ್ದ I.T ಕೆಲಸಕ್ಕೆ ಒಂದು MNC ಸೇರಿದೆ. ಯಾವ ಕಂಪನಿ? ಅಂತ ನಿಮಗೆ ಡೌಟ್ ಆಗಬಹುದು. ಹೆಸರಲ್ಲೇನಿದೆ ಸಾರ್‍ ಹುಳ್ಳಿಕಾಳು , ನಿಮಗೇನು ನನ್ನ ಈ ಕತೆ ನಂಬುವ ಅವಶ್ಯಕತೆ ಇಲ್ಲ, ಅದಕ್ಕೆ ಹೆಸರುಗಳು ಅಷ್ಟು ಬೇಕಾಗಲ್ಲ ಅಲ್ಲವೇ?. ಎಲ್ಲಾ ಚೆನ್ನಾಗಿತ್ತು ಅನಿಸ್ತ ಇತ್ತು .. ನಾನು ನನ್ನದೇ ಪ್ರಪಂಚದಲ್ಲಿದ್ದೆ. ಸಣ್ಣ ಊರಿಂದ ಬಂದ ನನಗೆ ಬೆಂಗಳೂರು, ಕೈಯಲ್ಲಿ ದುಡ್ಡು , ಜೊತೆಗೆ ಅಂದುಕೊಂಡದ್ದೆಲ್ಲ ಆಗುತ್ತೆ ಅನ್ನೋ ಜವಾನಿ ಕ ಜೋಶ್ ಎಲ್ಲ ಸೇರಿ ಯಾವಾಗಲೂ ಒಂದು ತರಹ ಮತ್ತಿನಲ್ಲಿದ್ದೆ.

ಇದರ ಜೊತೆಗೆ ಎರಡು ವರ್ಷ ಆದ ಮೇಲೆ ಕಂಪನಿಯವರು ನನ್ನನ್ನು ಮೇಲಿಂದ ಮೇಲೆ ಆ ಪ್ರಾಜೆಕ್ಟ್ ,ಈ ಪ್ರಾಜೆಕ್ಟ್ ಅಂತ US, UK ಗೆ ಕಳಿಸ್ತ ಇದ್ದರು.ಅಲ್ಲಿಯ ಜನ-ಜೀವನ, materialistic pleasure, ಬಿಡುವಿರದಂತೆ ಅವರು ಮಾಡುವ ಮಜಾ ಹೀಗೆ ನೋಡುತ್ತ, ಅನುಭವಿಸುತ್ತ, middle class ನಲ್ಲಿ ಹುಟ್ಟಿ ಬೆಳೆದಿದ್ದ ನಾನು ಸಂಬಂಧಗಳು, Family sentiments ಎಲ್ಲ ಮರೆತೆ. ಕೈ ಅಲ್ಲಿ ದುಡ್ಡಿದ್ದರೆ ಎಲ್ಲ ಸಿಕ್ಕುತ್ತೆ ಅನ್ನೋ ಹುಚ್ಚು ಜಾಸ್ತಿ ಆಗ್ತ ಇತ್ತು. ಈ ಸಮಯಕ್ಕೆ ಮನೆಯಲ್ಲಿ ಮಗ ಕೈ ಬಿಡ್ತ ಇದ್ದಾನೆ ಅನಿಸಿತೋ ಏನೋ ನನಗೆ ಮದುವೆ ಅಂತ ಮಾಡಿಸಿದರು.

ಎತ್ತು ಏರಿಗೆಳೆದರೆ , ಕೋಣ ನೀರಿಗೆಳೆದಂತೆ ನನ್ನ ಮದುವೆಯಾಗಿ ಬಂದ ನನ್ನ ಹೆಂಡತಿ ಎಷ್ಟೇ ಪ್ರೀತಿಯಿಂದ ನನ್ನನ್ನು ಕಂಡರೂ ನನಗದೇನೋ ಅವಳಿಗೆ ಯಾವುದೋ ವಸ್ತು ಬೇಕಾದಾಗ ಹೀಗೆ ಆಡುತ್ತಾಳೆ ಅನ್ನುವಂತೆ ವರ್ತಿಸ್ತ ಇದ್ದೆ. ಪಾಪ.. ಸ್ವಲ್ಪ ದಿನ ನೋಡಿ… ಅವಳು ನನ್ನ ಹಣೆಬರಹ ಎಂದುಕೊಂಡು ಮೂಗುಬಸವನ ಹಾಗೆ ಬದುಕ್ತ ಇದ್ದಳು. ನನಗೇನೋ ಇದರಿಂದ ಅನುಕೂಲನೇ ಅನಿಸಿತ್ತಲ್ಲ. ನನಗೆ ಬೇಕಾದ್ದೆಲ್ಲ ಸಿಗುತ್ತೆ , ಅವಳಿಗೆ ಮನೆಯ ಸಾಮಾನು, ಆಗ ಈಗ ಅವಳಂತೂ ಕೇಳುವದನ್ನು ಬಿಟ್ಟಿದ್ದರೂ ಒಂದೂ ಸೀರೆಯೋ ಹೀಗೆ ಏನಾದ್ರೂ ಕೊಡಿಸುತ್ತಿದ್ದರಿಂದ ಅವಳು ಕುಶಿಯಾಗಿದ್ದಳೆಂದೇ ಭಾವಿಸಿದ್ದೆ. ಹೀಗೆ ಒಂದು ಹತ್ತು ವರ್ಷ ಸಂಸಾರ , ಎರಡು ಮಕ್ಕಳೂ ಆದವು . ಮಕ್ಕಳಾದ ಮೇಲೆ ಅವಳು, ನಾನು ಮಾತನಾಡಿದ್ದೇ ಅಪರೂಪ ಎನ್ನಬೇಕು. ಇದೆಲ್ಲದರಿಂದ ನಾನಂತೂ ಸಂತೋಷವಾಗಿದ್ದೆ. ಏನು ಕೇಳದ , ಹೇಳದ ಹೆಂಡತಿ , ಮಕ್ಕಳ ವಿಚಾರದಲ್ಲೂ ಅವಳೇ ಎಲ್ಲವನ್ನು ನೋಡಿಕೊಳ್ಳುತ್ತಿದ್ದರಿಂದ ನಾನು ಅವರ ಖರ್ಚಿಗೆ ದುಡ್ಡು ಕೊಟ್ಟರೆ ಮುಗಿಯಿತು ಎಂಬಂತಿದ್ದೆ. Collegues ಎಲ್ಲ ಅವರ ಸಂಸಾರ ತಾಪತ್ರಯ ಹೇಳಿಕೊಂಡರೆ , ನಾನು ಹೆಮ್ಮೆಯಿಂದ ಬೀಗುತ್ತಿದ್ದೆ. ಈ ಮಧ್ಯೆ ಅವಳಿಗೆ ಮನಸ್ಸಿನ ನೋವೇ ಇರಬೇಕೆನೋ ದಿನೇ ದಿನೇ ಬಡವಾಗ್ತ ಇದ್ದಳು. ಏನೋ Terminal illness ಅಂತಾರಲ್ಲ ಹಾಗೇ ಕಾಣಿಸ್ತ ಇದ್ದಳು. ನನಗೂ ಸ್ವಲ್ಪ ದಿನಕ್ಕೆ ಭಯವಾಗಿ ಎಲ್ಲ ಆಸ್ಪತ್ರೆಗಳಲ್ಲಿ ತೋರಿಸಿದೆ. ಯಾವ ಕಾಯಿಲೆಯ ಲಕ್ಷಣಗಳು ಇಲ್ಲ.. ಎಂದೇ ಎಲ್ಲ ಹೇಳತೊಡಗಿದಾಗ ನನಗೂ ಏನೂ ತೋಚದಂತಾಗಿತ್ತು. NIMHANS ಗಾದರೂ ಹೋಗೋಣ ಒಮ್ಮೆ ಎಂದರೆ ಯಾವತ್ತು ಯಾವದಕ್ಕೂ ಹಠ ಮಾಡದಂತವಳು “ಬೇಡವೇ ಬೇಡ” ಎಂದಳು. ಇಷ್ಟು ದಿನ ಹತ್ತಿರವಿದ್ದ ಇವಳು ದೂರ ಆಗ್ತಾಳೆ ಅಂದರೆ ಹಗಲೂ ರಾತ್ರಿ ಬಿಡದ ಚಿಂತೆ ಶುರು ಆಯಿತು. ಅವಳ ಪರಿಸ್ತಿತಿ ನೋಡಲು ಬಂದ ಅವಳ ತಂದೆ ತಾಯಿ ಅವರ ಜೊತೆಯಲ್ಲಿ ಅವಳನ್ನು ಕರೆದುಕೊಂಡು ಹೋಗುತ್ತೇವೆಂದರೂ ಅವಳು ಒಪ್ಪದೆ ಮಕ್ಕಳನ್ನು ಅವರ ತಂದೆ ತಾಯಿ ಜೊತೆಗೆ ಬಲವಂತದಿಂದ ಕಳುಹಿಸಿ ಕೊಟ್ಟಳು. ಇಷ್ಟು ವರ್ಷ ಇವಳು ಯಾವಾಗಲೂ ನನ್ನ ಜೊತೆ ಹೀಗೆ ಇರ್ತಾಳೆ ಅಂತ , “Taken for granted”, ಅಂತಾರಲ್ಲ ಹಾಗೆ ಬದುಕುತ್ತಿದ್ದ ನನಗೆ ಈಗ ಎಲ್ಲದರಲ್ಲೂ ಇದ್ದಕ್ಕಿದ್ದಂತೇ ಆಸಕ್ತಿ ಇಲ್ಲದಂತಾಯಿತು.

ಒಂದು ದಿನ ರಾತ್ರಿ ಆಗಲೇ ಹುಚ್ಚನಂತಿದ್ದ ನನ್ನ ಕೈ ಹಿಡಿದು ಅವಳು ” ಮಕ್ಕಳು ಹೆಂಗೋ ನಮ್ಮ ಅಪ್ಪ ಅಮ್ಮನ ಜೊತೆಯಲ್ಲಿ ಬೆಳೆತಾರೆ. ನಿಮ್ಮ ಈ ಸ್ತಿತಿ ನೋಡೊಕೆ ಆಗೊಲ್ಲ. ಇನ್ನೊಂದು ಮದುವೆ ಆಗಿ ಬಿಡಿ. ನನ್ನಿಂದ ನಿಮಗೆ ಯಾವ ಸುಖವೂ ಸಿಗಲಿಲ್ಲ ಅನಿಸುತ್ತೆ”, ಎಂದು ಹಿಡಿದ ಕೈ ಒತ್ತಿದಳು. ಎಂದೂ ಯಾವದಕ್ಕೂ ಅಂಜದೆ,ಅಳದೆ ಇದ್ದ ನಾನು ಆವತ್ತು ತುಂಬಾ ಅತ್ತೆ. ನನ್ನ ಕೈಯನ್ನು ಒತ್ತಿ ಹಿಡಿದಿದ್ದ ಅವಳ ಕೈ ಮತ್ತೆ ಮಿಸುಕಲಿಲ್ಲ.
“So.. here I am, making a living with telling my story – 5 rupees for 5 minutes “.ನಾನಿನ್ನು ಯಾವುದೋ ಗುಂಗಿನಲ್ಲಿದ್ದೆ …ಎ‌ಚ್ಚೆತ್ತು ಐದು ರೂಪಾಯಿ ತೆಗೆದು ಕೊಟ್ಟೆ. “ಥ್ಯಾಂಕ್ ಯೂ ಸರ್‍ ” ಎಂದು ತಿರುಗಿಯೂ ನೋಡದೆ ಮುಂದೆ ಹೊರಟ.
ಆಗಲೇ ಬಂದು ನಿಂತಿದ್ದ ಟ್ರೈನ್ ನಲ್ಲಿ ಸೀಟು ಹಿಡಿಯುವ ಅವಸರದಲ್ಲಿ ಅವನನ್ನು ಕೇಳಬೇಕೆಂದಿದ್ದ ಹಲವು ಪ್ರಶ್ನೆಗಳು ಹಾಗೇ ಅದುಮಿಕೊಂಡು, ಅದೃಷ್ಟದಿಂದ ಸಿಕ್ಕ ಕಿಟಕಿ ಬಳಿ ಸೀಟ್ ಹಿಡಿದು ಅವನು ಹೋದ ಕಡೆ ನೋಡತೊಡಗಿದೆ. ಮತ್ತಾರನ್ನೋ ನಿಲ್ಲಿಸಿ ಮಾತನಾಡಿಸುತ್ತಿದ ಹಾಗೆ ಕಂಡ ಅವನನ್ನು ನೋಡುತ್ತಿದ್ದಂತೆ , ಮೋಬೈಲ್ ಫೋನ್ ತೆಗೆದು ನಾನು ಬರುತ್ತಿರುವ ವಿಚಾರ ತಿಳಿಸಲು ಮರೆತಿದ್ದರಿಂದ, ಮನೆಗೆ ಪೋನ್ ಮಾಡತೊಡಗಿದೆ.

Advertisements

Read Full Post »