Feeds:
Posts
ಟಿಪ್ಪಣಿಗಳು

Archive for ಡಿಸೆಂಬರ್, 2007

ಚಳಿಗಾಲದ ಒಂದು ದಿನ


ನೆನ್ನೆಯಿಂದ ಇಷ್ಟೊಂದು ಹಿಮ ಬೀಳದೆ ಇದ್ದಿದ್ದರೆ ಹೇಳುವುದಕ್ಕೆ ವಿಶೇಷವಾದದ್ದು ಇರಲಿಲ್ಲವೆನೋ..??

ಚಿಕಾಗೋದ ಚಳಿಯ ಒಂದು ದಿನ. ಚಳಿಯ ತೀವ್ರತೆಗಿಂತ ಬೀಸುವ ಗಾಳಿಗೆ ಹೆಚ್ಚು ಕುಖ್ಯಾತಿಯಾದ ಊರು.ಬೆಚ್ಚಗೆ ಮನೆಯ ಒಳಗಿದ್ದವನು ಏಳಕ್ಕೆ ಎದ್ದು ತಯಾರಾಗಿ ಹೊರಗೆ ಬಂದು ನೋಡಿದರೆ, ಎಲ್ಲೆಲ್ಲೂ ಬೆಳ್ಳಗೆ.. ರಾತ್ರೋ ರಾತ್ರಿ ಯಾರೋ ಊರೆಲ್ಲ ಸುಣ್ಣ ಹೊಡೆದಂತೆ ಹಿಮವೋ ಹಿಮ ! , ಇನ್ನೂ ಸಣ್ಣಗೆ.. ನನ್ನ ಇರುವ ನಾಲ್ಕು ಕೂದಲನ್ನು ಕೆದಕಿದರೆ ಬೀಳುವ ಹೊಟ್ಟಿನಂತೆ ಉದುರುತಿತ್ತು. ಕಾರು ಹತ್ತಿ ಕುಳಿತೆ. ಕಾರು ಸ್ಟಾರ್ಟ್ ಮಾಡಿ ಎಂಜಿನ್ ಬಿಸಿಯಾಗಲು ಬಿಟ್ಟು ಮತ್ತೊಂದು ಬಾರಿ ಬಿಸಿ ಬಿಸಿ ಟೀ ಕುಡಿಯೋಣ ಎಂದುಕೊಂಡರೆ ಹಾಳು ಕಾರು ನನ್ನಾಸೆಯ ವಿರುದ್ದವಾಗಿ ಆಡಲಾರಂಭಿಸಿತ್ತು. ಎಷ್ಟು ಪ್ರಯತ್ನ ಮಾಡಿದರೂ ಸ್ಟಾರ್ಟ್ ಆಗಲೊಲ್ಲದು.ಕಡಿಮೆಯ ಡೀಲ್ ಎಂದು 2000 ಡಾಲರ್‍ ಕೊಟ್ಟು ಕೊಂಡ ಕಾರಿನಿಂದ ಬೇರಿನ್ನೇನು ತಾನೆ ನಿರೀಕ್ಷಿಸಲು ಸಾಧ್ಯ ?. ಆಫೀಸ್ ತುಂಬ ದೂರವೇನು ಇಲ್ಲ , ಯಾರಾದರೂ ಸಹೋದ್ಯೋಗಿಗಳನ್ನು ಕರೆಯಲುಬಹುದು, ಯಾವದೂ ಬೇಡ, ನಡೆದೇಬಿಡೋಣ ಹೇಗೂ ಈ ಹಿಮ, ಚಳಿ ಇವೆಲ್ಲದರ ಜೊತೆಗೆ ಊರು ಹೊಸದೇ ಎಂದು ನಡೆಯಲಾರಂಬಿಸಿದೆ.ನಾಲ್ಕು ಹೆಜ್ಜೆ ನಡೆದ ಮೇಲೆ ಅನಿಸಿದ್ದು ನಡೆಯುವ ಇರಾದೆ ಸರಿಯಲ್ಲವೇನೋ ಎಂದು.ಕಾಲು ಜಾರದಂತೆ.. ನೋಡಿ ನಡೆಯುತ್ತ, ಮನಸ್ಸು ಹಗುರವಾಗಿರುವಂತೆ.. ಯಾವುದೋ ಒಂದು ಹಾಡ ಗುನುಗುನಿಸುತ್ತ ಸಾಗುತ್ತಿದ್ದವನನ್ನು ಅತ್ತ ಇತ್ತ ಕಾರಿನಲ್ಲಿ ಓಡಾಡುತ್ತಿದ್ದವರು ನೋಡಿ “ಎಲ್ಲೆಲ್ಲಿಂದ ಬರುತ್ತಾರೋ ? ” ಎಂದೇ ಅಂದುಕೊಂಡಂತೆ ಅವರ ಮುಖದ ಭಾವಗಳಿಂದ ಭಾಸವಾಗುತ್ತಿತ್ತು.

ಇನ್ನೇನು ಆಫೀಸ್ ಅಷ್ಟು ದೂರದಲ್ಲಿದೆ ಎನ್ನುವಾಗ ಒಂದು ಟ್ರಾಫಿಕ್ ಸಿಗ್ನಲ್.  ನಡೆಯುವ ಸೂಚನೆಯ ನಿಶಾನೆಗಾಗಿ ಕಾಯುತ್ತ ನಿಂತೆ. ಯಾರೋ ಪಕ್ಕದಲ್ಲಿ ಬಂದು ನಿಂತಂತಾಗಿ ಪಕ್ಕಕ್ಕೆ ತಿರುಗಿದರೆ ಒಬ್ಬ ಧಡೂತಿ ಕಪ್ಪನೆಯ ಮನುಷ್ಯ, ಮುಗುಳ್ನಕ್ಕೆ. ನಗಲೇಬೇಕಲ್ಲ ..! ನಗದಿದ್ದರೆ ಅದೆನೋ ಅಪರಾಧವೆನೋ ಎಂಬಂತೆ ನೋಡುವುದು ಉಂಟು. ” Hey, brother you got light ..? ” ಎಂದು ಬಾಯಲ್ಲೊಂದು ಸಿಗರೇಟ್ ಸಿಕ್ಕಿಸಿಕೊಂಡು, ಮೈ ಕುಣಿಸುತ್ತ, ನನ್ನ ಕೇಳಿದ.ಇಷ್ಡರಲ್ಲೇ ನಡೆಯುವ ಸೂಚನೆಯ ನಿಶಾನೆ ಸಿಕ್ಕಿತ್ತು. ಇಲ್ಲಿಂದ ಓಡಿದರೆ ಸಾಕು ಎನ್ನುವಂತೆ “No” ಎಂದು ಅವಸರದಿ ಉತ್ತರವಿತ್ತು, ರಸ್ತೆ ದಾಟಲು ಶುರು ಮಾಡಿದೆ. ನನ್ನ ಹಿಂದೆಯೇ ಬರಹತ್ತಿದ್ದ ಇವನಿಂದ ನನ್ನನ್ನು ಭಯವಾವರಿಸಿತೊಡಗಿತ್ತು. ಆಫೀಸ್‌ ಕೂಗಳತೆಯಲ್ಲೇನೋ ಇದೆ ಆದರೆ ತುಸು ದೂರ ನಡೆದು ರಸ್ತೆ ದಾಟಬೇಕು, ಬೇಗ ಬೇಗ ನಡೆದರಾಯಿತು ಎಂದುಕೊಂಡು ದಾಪುಗಾಲು ಹಾಕತೊಡಗಿದೆ. ನನ್ನಷ್ಟೇ ವೇಗದಿಂದ ಹಿಂದೆ ಬಂದ ಆಸಾಮಿ “Hey man, why are you running.. Stop” ಎಂದ. ಏನು ಮಾಡಬೇಕೋ ತೋಚದೆ, ನಡೆಯುವ ಗತಿಯನ್ನು ಸ್ಡಲ್ಪ ಕಡಿಮೆ ಮಾಡಿ ಹಿಂದೆ ತಿರುಗಿ ನೋಡಿದೆ. ಹೆ‌ಚ್ಚೇನು ಭಾವನೆಗಳಿರದೆ ನನ್ನಡೆ ನೋಡುತ್ತ ತಾನು ಹಾಕಿದ್ದ ಜಾಕೆಟ್ ಸ್ವಲ್ಪ ಸರಿಸುತ್ತ ” Gimme 5 dollors.. if you dont.. I ain’t kiddin man … I will blow you up” ಎಂದು ಸಾವಕಾಶವಾಗಿ ಅವನು ಹೇಳುವುದರಲ್ಲಿ ನನ್ನ ಜಂಘಾಬಲವೇ ಉಡುಗಿಹೋಗಿತ್ತು.ಅವನ ದಪ್ಪ ಹೊಟ್ಟಯಿಂದ ತಪ್ಪಿಸಿಕೊಂಡರೆ ಸಾಕೆಂಬುವಂತೆ ಸಿಕ್ಕಿಕೊಂಡಿದ್ದ ಆ ರಿವಾಲ್ವರ್‍ ನೋಡಿ, ಇಂತಹ ಸಾವಂತು ಬೇಡವಪ್ಪ ಅನಿಸಹತ್ತಿತ್ತು. ಒಮ್ಮೆ ಸಾದ್ಯವಾದಷ್ಟು ಜೋರಾಗಿ ಓಡಿಬಿಡೋಣವೆನಿಸಿದರೂ ಕಾಲುಗಳು ಧರಣಿ ನಡೆಸಿದಂತಿದ್ದವು. ನಾಲ್ಲು ಹೆಜ್ಜೆ ದೂರ ಇದ್ದ ಆಸಾಮಿ ಆಗಲೇ ತುಂಬ ಹತ್ತಿರ ಬಂದಿದ್ದ. ಯಾವ ದೇವರೂ, ಆಪ್ತರೂ ನೆನಪಿಗೆ ಬರಲಿಲ್ಲ .. ತೋಚಿದ್ದೊಂದೇ ! ಅವನನ್ನೇ ನೋಡುತ್ತ ಪ್ಯಾಂಟಿನ ಜೇಬಿನಿಂದ ವ್ಯಾಲೆಟ್ ತೆಗೆದು ಅವನ ಕೈಗಿತ್ತು ಕಾಲುಗಳಿಗೆ ಬುದ್ದಿ ಹೇಳಿದ್ದು. “Hey brother come back here.. dont run . I am not gonna hurt you ” ಎಂದು ಅವನ ದನಿ ಕೇಳಿಸಿದರೂ, ವೇಗದಿಂದ ಸಾಗುತ್ತಿದ್ದ ಟ್ರಾಫಿಕ್ ಕೂಡ ಲೆಕ್ಕಿಸದೆ ಓಡುವುದನ್ನು ನಿಲ್ಲಿಸಿದ್ದು ಆಫೀಸ್ ಸೇರಿದ ಮೇಲೆ.

ಏದುಸಿರು ಬಿಡುತ್ತ ಬಂದವನನ್ನು ರಮೇಶನ ಪ್ರಶ್ನೆಗಳ ಸುರಿಮಳೆ ಸ್ವಾಗತಿಸುತಿತ್ತು. ನನ್ನ ಬಳಿಯೇ ಕೂರುವ ರಮೇಶ ನನಗಿಂತ ಸೀನಿಯರ್‍ ಇಲ್ಲಿಗೆ ಬಂದು ವರ್ಷದ ಮೇಲಾಗಿದೆ. ಅವನಿಗೆ ವರದಿ ಒಪ್ಪಿಸಿದೆ, ಕುತೂಹಲದಿಂದ ಕೇಳುತ್ತಿದ್ದವನು ನಾನು ವ್ಯಾಲೆಟ್ ಕೊಟ್ಟು ಓಡಿ ಬಂದೆ ಎಂದೊಡನೆ ಚಿಕ್ಕಮಗುವೊಂದು ಕತ್ತಲಲಿ ಗುಮ್ಮ ಇದ್ದಾನೆಂದು ಭಯ ಪಡುವಾಗ ನೋಡುವ ತಾಯಿಯಂತೆ, “ಅಲ್ಲ ಅವನು ಕೇಳಿದ್ದು 5 ಡಾಲರ್‍ ತಾನೆ ಅದನ್ನ ಕೊಟ್ಟಿದ್ರೆ ಅವನ ಪಾಡಿಗೆ ಅವನು ಹೋಗುತ್ತಿದ್ದ, ವ್ಯಾಲೆಟ್ ಕೊಡೊಕೆ ಯಾಕೆ ಹೋದೆ ? ಇದೆಲ್ಲ ಇಲ್ಲಿ ಮಾಮೂಲಿ, ಹೆದರಬಾರದು ಅಷ್ಟೇ .. ಹೋಗಲಿ ಬಿಡು, ಕ್ರೆಡಿಟ್ ಕಾರ್ಡ್ ಏನಾದ್ದು ಅದರಲ್ಲಿ ಇದ್ದಿದ್ದರೆ ಪೋನ್ ಮಾಡಿ ಅದನ್ನ ವಜಾ ಮಾಡಿಸಿಕೋ ” ಎನ್ನುತ್ತ ತನ್ನ ಕೆಲಸದಲ್ಲಿ ಮಗ್ನನಾದ.ಎಷ್ಟು ಸುಲಭವಾಗಿ ಹೇಳಿದ್ದ ಹೆದರಬಾರದು ಅಂತ, ನನ್ನ ಪರಿಸ್ತಿಥಿಯಲ್ಲಿ ಇದ್ದಿದ್ದರೆ ಇವನು ಏನು ಮಾಡುತ್ತಿದ್ದನೋ, ಏನೋ ನನ್ನ ಜೀವ ಉಳಿಯಿತ್ತಲ್ಲ ಎಂದುಕೊಂಡು ಕ್ರೆಡಿಟ್ ಕಾರ್ಡ್ ರದ್ದು ಮಾಡಿಸಲು ಫೋನ್ ಹಚ್ಚಿದೆ.ದಿನದ ಅರ್ಧ ಇದೇ ಕೆಲಸವಾಯಿತು, ವ್ಯಾಲೆಟಿನಲ್ಲಿ ಏನೇನು ಇತ್ತು ? ಅದರಿಂದ ಅವನಿಗೆ ಏನು ಪ್ರಯೋಜನ ಹೀಗೆ ಪಟ್ಟಿ ಮಾಡುತ್ತ ಇದ್ದವನಿಗೆ ನೆನಪಾದದ್ದು ಡ್ರೈವಿಂಗ್ ಲೈಸೆನ್ಸ್ .ಇತ್ತೀಚೆಗೆ ಸಾಕಷ್ಟು ಚರ್ಚೆ ನಡೆಯುತಿರುವ “Identity theft” ಕನ್ನಡದಲ್ಲಿ ಇದಕ್ಕೇನು ಹೇಳ್ತಾರೋ..? , ನನ್ನ ಹೆಸರಿನಲ್ಲಿ ಅವನು ಏನೆಲ್ಲ ಮಾಡಬಹುದು, ಸಾಲ ತೆಗೆಯಬಹುದು, ಅಕ್ರಮ ಕೆಲಸ ಏನಾದರೂ ಮಾಡಿ ಅದು ನನ್ನ ತಲೆಯ ಮೇಲೆ ಬಂದರೇನು ಗತಿ ಎಂದು ಭೀತಿಗೊಳಗಾಗಿ ಡ್ರೈವಿಂಗ್ ಲೈಸೆನ್ಸ್ ನೀಡುವ ವಿಭಾಗಕ್ಕೆ ಫೋನ್ ಮಾಡಿದೆ. ನೂರು ಪ್ರಶ್ನೆಗಳ ನಂತರ ನೀವು ಖುದ್ದಾಗಿ ನಿಮ್ಮ ಗುರುತಿನ ದಾಖಲೆಗಳನ್ನು ತೆಗೆದುಕೊಂಡು ಬನ್ನಿ, ಅದರ ಹೊರತಾಗಿ ಬೇರೇನು ಮಾಡಲು ಸಾಧ್ಯವಿಲ್ಲ ಎಂದು ಉತ್ತರ ದೊರೆಯಿತು. ಈ ದಿನವಂತೂ ಆಗಲೇ ವೇಳೆ ಮೀರಿತ್ತು, ನಾಳೆ ಮೊದಲ ಕೆಲಸ ಅದೇ ಎಂದುಕೊಂಡು ತಲೆಗೆ ಕೈ ಹಚ್ಚಿ ಕುಳಿತವನನ್ನು ..ರಮೇಶ ಕರೆದ ” ಬಾ ನಾನು ನಿನ್ನನ್ನ ಮನೆಗೆ ಡ್ರಾಪ್ ಮಾಡಿ ಹೋಗ್ತೀನಿ “. ಆಫೀಸ್ ವೇಳೆಯು ಮುಗಿದಿದ್ದು ಅರಿವಾಗಿರಲಿಲ್ಲ, ಮನೆಯ ತನಕ ಮಾತಿನಿಂದ ಏನು ಸುಖವಿಲ್ಲವೆಂದೆನೋ ಸುಮ್ಮನಿದ್ದ ರಮೇಶ ಮನೆಯ ಬಳಿ ಕಾರು ನಿಲ್ಲಿಸಿ ಇಳಿಯುತ್ತಿದ್ದ ನನಗೆ “ತಲೆ ಕೆಡಿಸ್ಕೋಬೇಡ, ಆರಾಮಾಗಿರು ” ಎಂದು ಹೇಳಿ ಹೊರಟ.ವಾರಕ್ಕೊಂದು ದಿನ ಅಂಚೆ ಬರುವುದು ಹೆಚ್ಚಿನ ವಿಷಯವಾದರೂ ದಿನವೂ ಅಂಚೆಪೆಟ್ಟಿಗೆ ತೆರೆದು ನೋಡುವುದಂತು ಅಭ್ಯಾಸವಾಗಿತ್ತು, ಒಂದೆರೆಡು ಬ್ಯಾಂಕ್ ಸ್ಟೇಟಮೆಂಟಿನ ಅಂಚೆ ಅಲ್ಲದೇ ಒಂದು ಲಕೋಟೆಯು ಇತ್ತು. ಅದರ ಮೇಲೆ ಅಂಚೆವಿಭಾಗದ ಮುದ್ರೆಯಾಗಲೀ, ಅಂಚೆಚೀಟಿಯಾಗಲೇ ಯಾವುದೂ ಇರಲಿಲ್ಲ..ಹಾಗೇ ಸುಮ್ಮನೆ ಮುಂದಿನ ಭಾಗವನ್ನು ಮಡಿಚಿ ಮುಚ್ಚಲಾಗಿತ್ತು. ಎದ್ದ ಗಳಿಗೆ ಸರಿಯಿಲ್ಲವೇನೋ ಇನ್ನು ಏನೇನು ಕಾದಿದೆಯೋ ? ಎಂದು ಇದನ್ನು ತೆಗೆದು ನೋಡುವುದೋ, ಎಸೆದುಬಿಡುವುದೋ ಗೊತ್ತಾಗದೇ ಹಾಗೇ ಚಳಿಯ ನಡುಕದಲ್ಲಿ..ಯೋಚಿಸುತ್ತ ನಿಂತೆ.ನೋಡಿಯೇಬಿಡೋಣ ಆದದ್ದಾಗಲಿ ಎಂದು ತೆರೆದು ನೋಡಿದರೆ ಅದರಲ್ಲಿ ಇದ್ದದ್ದನ್ನು ನೋಡಿ ದಿನದ ಎಲ್ಲಾ ಘಟನೆಗಳಿಗೆ ಅನಿರೀಕ್ಷಿತ ತಿರುವಿನಂತೆ… ನನ್ನ ವ್ಯಾಲೆಟ್ ಅದರಲ್ಲಿತ್ತು. ಇದ್ದ ಇಪ್ಪತ್ತು-ಮೂವತ್ತು ಡಾಲರ್‍ನ ಹೊರತಾಗಿ ವ್ಯಾಲೆಟ್ ನಿಂದ ಬೇರೇನು ಮುಟ್ಟಿದಂತೂ ಇರಲಿಲ್ಲ.ನನ್ನ ಮನೆಯ ವಿಳಾಸ ಅವನಿಗೆ ಡ್ರೈವಿಂಗ್ ಲೈಸೆನ್ಸ್ ನಿಂದಲೋ, ಬೇರಾವ ಕಾಗದದಿಂದಲೂ ಸಿಕ್ಕಿರಬಹುದು.ತಲೆಯಲ್ಲಿ “ಅವನೇಕೆ ಇಷ್ಟು ದೂರ ಬಂದ..?, ದುಡ್ಡೇ ಬೇಕಾಗಿದ್ದರೆ ಇದನ್ನೆ ಏಕೆ ಹಿಂದಿರುಗಿಸಿದ” ಹೀಗೆ ನೂರು ಯೋಚನೆಗಳು ಓಡಹತ್ತಿದರೂ ಎಲ್ಲವನ್ನು ಮೆಟ್ಟಿ ನಿಂತದ್ದು, ದುಡ್ಡು ಸ್ಸಲ್ಪ ಹೋಯಿತು ಅನ್ನುವುದರ ಹೊರತಾಗಿ ಅಂತಹ ಹಾನಿಯೇನಿಲ್ಲ ಎನ್ನುವ ಸಂತಸ. ಆ ಮನುಷ್ಯನ ಮುಖವನ್ನೊಮ್ಮೆ ನೆನಪಿಸಿಕೊಂಡು ಒಳ ನಡೆದೆ.. ಅದೆಕೋ ಮನಸ್ಸು ..”ಒಂದು ದಿನ ಎಲ್ಲಿಂದಲೋ ..ನೀ ಬಂದೆ ” ಗುನುಗುನಿಸುತಿತ್ತು.

Advertisements

Read Full Post »