Feeds:
Posts
ಟಿಪ್ಪಣಿಗಳು

Archive for ಅಕ್ಟೋಬರ್, 2007


ಅಂದು ಕೋಳಿ ಕೂಗಲೇ ಇಲ್ಲ.

ವಾಡಿಕೆಯಂತೆ ಎದ್ದ ರಂಗಜ್ಜಿ ಅಂಗಳಕ್ಕೆ ಬಂದು ಬೆಳಗಾಗಿರುವುದನ್ನು ಖಚಿತಪಡಿಸಿಕೊಂಡ ಮೇಲೆ .. ಹುಂಜ ಕೂತೇ ಮಲಗುವೆಡೆ ನೋಡಿ..ದೃಷ್ಟಿ ಮಬ್ಬಾಗಿರಲು ಹತ್ತಿರ ಸಾಗಿ ಬಗ್ಗಿದ್ದ ಬೆನ್ನ ಮತ್ತಷ್ಟು ಬಗ್ಗಿಸಿ ಬಹು ಅಚ್ಚರಿಯಿಂದ,ಆತಂಕದಿಂದ ನೋಡುತ್ತಿದ್ದ ಹಾಗೆ, ಎದ್ದೇ ಇದ್ದ ಹುಂಜ ಬಂದವರಾರು ಎಂದೊಮ್ಮೆ ನೋಡುವಂತೆ ಕತ್ತನೆತ್ತಿ ಮತ್ತೆ ಬಗ್ಗಿಸಿತು.ರಂಗಜ್ಜಿಗೆ ಬಹು ದಿನದ ಬಳಿಕ ಅಚ್ಚರಿಯಾಗುವಂತದಾದ್ದು ಇದೇ.. ಎಂದಿಗೂ ಹೀಗೆ ಆಗಿದ್ದಿಲ್ಲ. ಸೂರ್ಯ ಮರೆತರೂ ಅವನನೆಬ್ಬಿಸಿ ಬೆಳಗು ಮಾಡುತಿರುವುದೆನೋ ಎಂದೇ ಅನಿಸುವಷ್ಟು ಒಂದು ದಿನವೂ ಚಾಚೂ ತಪ್ಪದೆ ಇಪ್ಪತ್ತು ಮನೆಯವರನ್ನು ಎಬ್ಬಿಸುವಂತ ರಂಗಜ್ಜಿಯ ಪ್ರೀತಿಯಿಂದ “ಪರಮೇಶಿ” ಎಂದು ನಾಮಾಂಕಿತವಾದ ಕೋಳಿ ಕೂಗದಿರುವುದೆಂದರೇನು..?

“ಇದಕ್ಕೆ ಯಾವ ದೊಡ್ಡ ರೋಗ ಬಂತು ಇವತ್ತು ..? ” ಎಂದು ಮೊದಲು ಕನಿಕರದೊಡನೆ ಬಂದ ರಂಗಜ್ಜಿ ಹುಂಜ ನೋಡಿದ ಧಾಟಿ ನೋಡಿ ಉರಿದುಬಿದ್ದು ” ಏನಲ.. ನಿನ್ನಿಂದಾನೆ ಬೆಳಗಾದದ್ದು ಅಂದುಕೊಂಡ..? ನೋಡು ಆಗಲೇ ನೀನು ಕೂಗದೆನೇ ಸೂರ್ಯ ಎದ್ದು ಕೂತಾವನೆ…ನಿಂಗೂ ಧಿಮಾಕು ಬಂದ ಹಂಗೈತೆ.. ” ಎನ್ನುತಲೇ ತನ್ನ ನಿತ್ಯದ ಕೆಲಸದಲ್ಲಿ ಮಗ್ನಳಾದರೂ “ಪರ್ಮೇಶಿಗೆ ಏನಾಯ್ತು” ಎಂದು ಮತ್ತೆ ಮತ್ತೆ ಯೋಚಿಸುತ್ತಲೇ ಇದ್ದಳು.

ರಂಗಜ್ಜಿಯ ಗಂಡ ನಂಜುಂಡಪ್ಪ ಒಂದು ಕಾಲಕ್ಕೆ ಸಣ್ಣ ಪುಟ್ಟ P.W.D ಕೆಲಸ ಮಾಡಿಸುತ್ತಿದ್ದ ಗುತ್ತಿಗೆದಾರ. ಈಗ ಹೊಸಹಳ್ಳಿಯೆಂದೇ ಕರೆಸಿಕೊಳ್ಳುವ ಈ ಹಳ್ಳಿಗೆ ಬಂದಾಗ ಇಲ್ಲಿ ಇದ್ದದ್ದೇ ೧೦ ಮನೆ. ಚೆಕ್ ಡ್ಯಾಮ್ ಕೆಲಸ ಮಾಡಿಸುತ್ತ,ಅಲ್ಲೇ ಅಕ್ಕ ಪಕ್ಕ ಇದ್ದ ಒಂದೈದು ಎಕರೆ ತೆಂಗಿನ ತೋಟ ಯಾರೋ ಮಾರುತ್ತಿದ್ದಾರೆ ಅಂತ ಸುದ್ದಿ ಕೇಳಿ ಅದರ ವಾರಸುದಾರರಾದ ಬಸಣ್ಣನ ಮನೆಗೆ ಹೋಗಿ ಮಾತು ಕತೆಯಲ್ಲಿ ಇಬ್ಬರದೂ ಒಂದೇ ಜಾತಿ ಅಂತ ಗೊತ್ತಾಗಿ, ಐದು ಎಕರೆ ಮಾರಿದ ಬಸಣ್ಣ ಅಮೇಲೆ ಇನ್ನು ೧೦ ಎಕರೆ ತೋಟ,ಬಂಜರು ಎಲ್ಲ ಸೇರಿದ ಭೂಮಿನ ಮಗಳ ಜೊತೆ ಧಾರೆ ಎರೆದದ್ದು ಹಳೆ ಸುದ್ದಿ.ರಾತೋ ರಾತ್ರಿ ಹಳ್ಳಿಯ ದೊಡ್ಡ ಮನುಷ್ಯ ಆದ ನಂಜುಂಡಪ್ಪ ಗುತ್ತಿಗೆ ಕೆಲಸ ಬಿಟ್ಟು ತೋಟ,ಜಮೀನು ನೋಡಿಕೊಳ್ತ ,ಹಾಗೆ ಕಷ್ಟದಲ್ಲಿದ್ದ ತನ್ನ ನೆಂಟರು,ಇಷ್ಟರನ್ನೆಲ್ಲ ಕರೆದುಕೊಂಡು ಬಂದು ಅವರ ಜೀವನಕ್ಕೆ ಏನೋ ದಾರಿ ಆಗುವಂತಹ ವ್ಯವಸ್ಥೆ ಮಾಡಿದ.ಹಳ್ಳಿಗೆ ರೋಡು,ಬಸ್ಸು,ಕರೆಂಟು ಹೀಗೆ ಎಲ್ಲ ಕೆಲಸದಲ್ಲು ಮುಂದೆ ನಿಂತು ಖುದ್ದಾಗಿ ತಾಲ್ಲೂಕು ಆಫೀಸು,ಎಲ್ಲ ಕಡೆ ಓಡಾಡಿ ಮಾಡಿದರೂ ನನ್ನಿಂದಲೇ ಬೆಳಕಾಯಿತು ಅಂತ ಮಾತಂತೂ ಆಡುತಿರಲಿಲ್ಲ.ದಿನ ಬೆಳಕಾದರೆ ಮನೆ ಮುಂದೆ ಯಾರಾದರು ತಮ್ಮ ಗೋಳು ಹೇಳ್ಕೊಳ್ಳೋರು ಯಾರಿಗೂ ಇಲ್ಲ ಅಂತ ಹೇಳ್ತಿರಲಿಲ್ಲ ಕೈಲಾದದ್ದು ಮಾಡುವಂತವನು.ಹಾಗೆ ನೋಡಿದರೆ ಮಾತು ಕಮ್ಮಿ,ಕೆಲಸ ಜಾಸ್ತಿ ಅನ್ನುವಂತಹ ವ್ಯಕ್ತಿತ್ವ,”ಬಲಗೈನಾಗೆ ಕೊಟ್ಟಿದ್ದು ,ಎಡಗೈಗೆ ಗೊತ್ತಾಗಬಾರದು” ಎಂದು ನಂಬಿದ ನಂಜುಂಡಪ್ಪನಿಗೆ,ಅವನ ನಂಬಿದ ರಂಗಜ್ಜಿಗೆ ಮಕ್ಕಳಾಗಲಿಲ್ಲ.

“ಮಕ್ಕಳಾಗದಿದ್ದರೇನಾಯಿತು ಬಿಡಮ್ಮಿ ಅದಕ್ಕೆ ಯಾಕೆ ಕೊರಗ್ತೀಯ..? ಊರಿನಾಗಿನ ಮಕ್ಕಳನ ನಮ್ಮ ಮಕ್ಕಳಂಗೆ ನೋಡಿಕೊಂಡರಾಯಿತು” ಎಂದ ನಂಜುಂಡಪ್ಪನ ಮಾತಿಗೆ ರಂಗಜ್ಜಿ ಉತ್ತರ ಒಂದೇ.. “ಹೆಣ್ಣಿನ ಸಂಕಟ ನಿಮ್ಗೆ ಎಲ್ಲಿ ಅರ್ಥ ಆದೀತು..ಬುಡಿ”.

ಆವತ್ತು ಪರಮೇಶಿ ಕೂಗೋ ಮುಂಚೆ ಎದ್ದ ನಂಜುಂಡಪ್ಪಂಗೆ ತೋಟದ ಕಡೆ ಹೋಗೋ ಮನಸ್ಸಾಯಿತು.ಇನ್ನು ಮಲಗಿದ್ದ ಹೊಸಹಳ್ಳಿ ” ಆವತ್ತಿಗೂ ಈವತ್ತಿಗೂ ಎಷ್ಟು ಬದಲಾಗೈತೆ ” ಎಂದುಕೊಳ್ಳುತ್ತ ಊರ ಗುಡಿಯ ಹತ್ತಿರ ಬಂದಾಗ ಇನ್ನು ಬೆಳಕಾಗಿರಲಿಲ್ಲ. ಆ ಮಬ್ಬಿನಲ್ಲೇ ನಂಜುಂಡಪ್ಪನಿಗೆ ಕಂಡದ್ದು ..ಒಂದೆರೆಡು ತೋಳನೋ,ನರಿನೋ,ಕೋಳಿ ಒಂದನ್ನು ಕಚ್ಚಿ ಎಳೆದಾಡುತ್ತಿದ್ದದ್ದು.ನಿಂತಲ್ಲಿಂದಲೇ ಕೂಗಿದರು,ತಮ್ಮ ಕೈಲಿದ್ದ ಕೋಲು ಬೀಸಿದರೂ,ಕೈ ಗೆ ಸಿಕ್ಕ ಕಲ್ಲನೆಲ್ಲ ಎಸೆದರೂ .. ಅವು ಬಗ್ಗಲಿಲ್ಲ.ನಂಜುಂಡಪ್ಪ ಎಸೆದ ಕಲ್ಲೊಂದು ತನಗೆ ತಾಕಿದಕ್ಕೋ ಏನೋ ಒಂದಂತೂ ನಂಜುಂಡಪ್ಪನನ್ನು ತಿನ್ನುವಂತೆ ನೋಡುತ ಗುರುಗುಟ್ಟಿತು.ನಂಜುಂಡಪ್ಪ ಹಾಗೇ ನಿಂತರು.

ಅಂದು ಕೋಳಿ ಕೂಗಲೇ ಇಲ್ಲ……..

Advertisements

Read Full Post »