Feeds:
Posts
ಟಿಪ್ಪಣಿಗಳು

Archive for ಜೂನ್, 2007


” ನಮಸ್ಕಾರ ಸಾರ್ ..ಏನು ಸಾರ್ ಇತ್ತೀಚೆಗೆ ಕಾಣೋದೆ ಇಲ್ಲ…? ಬಟ್ಟೆ ಏನಾದ್ರು ಇತ್ತ..?. ಭಾನುವಾರ ಬೆಳಿಗ್ಗೆನೂ ನೆಮ್ಮದಿಯಾಗಿ ಮಲಗೋಕೆ ಬಿಡೊಲ್ಲವಲ್ಲ ಯಾವ ಕಿರಾತಕ ಅಂತ ಬೈಯುತ್ತ ಬಂದು ಬಾಗಿಲು ತೆಗೆದ್ರೆ, ಇಸ್ತ್ರಿ ಸೀನ. ನಾನು ಈ ಮನೆಗೆ ಬಂದಾಗಿನಿಂದ ಮನೆ ಹತ್ತಿರ ಬಂದು ಬಟ್ಟೆ ತಗೊಂಡು ಹೋಗಿ,ಇಸ್ತ್ರಿ ಮಾಡಿ ತರ್ತಾನೆ.ಇಲ್ಲಿವರೆಗು ಒಂದು ಬಟ್ಟೆ ಸುಡಲಿಲ್ಲ,ಹಾಳು ಮಾಡಿಲ್ಲ,ಇದೂ.. ಒಂದು ಕಾರಣ ಇವನು ನನಗೆ ಇಷ್ಟ ಆಗೋಕೆ.ಮದುವೆಗೆ ಮುಂಚೆ ಇವನ ಜೊತೆ ಹಾಗೆ ಹರಟೆನೂ ಹೊಡಿಯೊ ಅಷ್ಟು ಸಮಯವಿರುತ್ತಿತ್ತು.ಈಗ ಸಮಯ ಇದ್ದರೂ ವ್ಯವಧಾನ ಇರೊಲ್ಲ.ಇವಳು ಬಂದ ಮೇಲೆ ನನ್ನ ಬಟ್ಟೆನೆಲ್ಲ ಇವಳ ತಲೆ ಮೇಲೆ ಹಾಕಿ ಗಡದ್ದಾಗಿ ನಿದ್ದೆ ಮಾಡ್ತಿದ್ದೆ.ಇಷ್ಟು ಹೊತ್ತಿಗೆ ಬಿಸಿಬಿಸಿ ಕಾಫ಼ಿ ಸಿಕ್ಕಿರ್ತಿತ್ತು ಇವಳಿದ್ದಿದ್ದರೆ.ಮನೆ ಮುಂದೆ ಬಿದ್ದಿದ್ದ “ಸಂಡೇ ಟೈಮ್ಸ್” ಹಾಗು ಹಾಲಿನ ಪ್ಯಾಕೆಟ್ ಎತ್ತಿಕೊಂಡು ಸೀನನ ಒಳಗೆ ಕರೆದೆ ” ಬಾರೊ ಸೀನ ಒಳಗೆ ..ನೋಡಿ ತುಂಬಾ ದಿನ ಆಯ್ತಲ್ಲ..ಒಂದು ನಿಮಿಷ ಇರು ನೋಡ್ತೀನಿ ಬಟ್ಟೆ ” ಅಂತ ಒಳಗೆ ಹೋದೆ.ಒಂದಷ್ಟು ಒಗೆದ ಬಟ್ಟೆ ಇವಳು ತೆಗೆದು ಇಟ್ಟಿದಿನಿ ಅಂತ ಹೇಳಿದ್ದು ಜ್ನಾಪಕ ಬಂತು ,ಎತ್ತಿಕೊಂಡು ಬರುತ್ತ ಒಳಗಿನಿಂದಲೇ ಕೇಳಿದೆ ” ಏನು ಸೀನ ಹೆಂಗಿದಿಯ..? ಎಲ್ಲಾ ಆರಾಮ.. ”

” ಏನು ಆರಾಮೋ ಸಾರ್..,ಒಂದೊಂದು ಸಲ ಯಾಕಾದ್ರು ಮದ್ವೆ ಆದ್ನೋ ಅನ್ಸುತ್ತೆ..,ನೆಮ್ಮದಿಯಾಗಿ ಇದ್ದೆ ಸಾರ್ ಮುಂಚೆ” ಬಟ್ಟೆ ತಗೊಳ್ತ ಹೇಳಿದ. ನಿನಗೊಬ್ಬನಿಗಲ್ಲ ಬಿಡು ಹಾಗನಿಸಿದೋ ಅಂತ ಬಾಯಿಗೆ ಬಂದಿತ್ತು,”ಯಾಕೊ,ಏನಾದ್ರು ಜಗಳನೆನೋ ನಿನ್ನ ಹೆಂಡ್ತಿ ಜೊತೆ..?”. ತುಂಬ ಸನಿಹವಲ್ಲದವರನ್ನ ಇಷ್ಟು ವೈಯಕ್ತಿಕ ಪ್ರಶ್ನೆ ಕೇಳೋದು ನನಗೆ ಇಷ್ಟ ಆಗೋಲ್ಲ.ಆದರೆ ಮುಂಚಿನಿಂದ ತನ್ನ ಕಷ್ಟ ಸುಖ ಹೇಳ್ಕೊಂಡು ಇದನ್ನ ಕೇಳಿದ್ರೆ ತಪ್ಪಿಲ್ಲ ಅನ್ನುವಷ್ಟು ಸಲಿಗೆನ ಸೀನಾನೆ ನನಗೆ ಕೊಟ್ಟಿದ್ದ.ಹಾಗೆಂದ ಮಾತ್ರಕ್ಕೆ ಅವನು ನನ್ನ ಅಷ್ಟೇ ಸಲಿಗೆಯಿಂದ “ನೀವು ಗಂಡ-ಹೆಂಡ್ತಿ ಜಗಳ ಆಡ್ತೀರಾ” ಅಂತ ಕೇಳೋಕೆ ಆಗ್ತಿರಲಿಲ್ಲ..ಕೇಳಿದ್ರು ನನಗೆ ಮೈ ಉರಿಯುತ್ತಿತ್ತೇನೊ..??

ಯಾರಾದ್ರು ಕೇಳಿದ್ರೆ ಹೇಳೊಣ ಅಂತ ಕಾಯ್ತ ಇದ್ದ ಹಾಗೆ ಸೀನ ಒಂದು ಸಲ ನೆಲಾನ,ಒಂದು ಸಲ ನನ್ನ,ಮತ್ತೊಂದು ಸಲ ಆ ಕಡೆ, ಈ ಕಡೆ ನೋಡ್ತ ನುಡಿಯತೊಡಗಿದ. ” ಎಲ್ಲಾ ಚೆನ್ನಾಗೆ ಇತ್ತು ಸಾರ್ ಮೊದಲು ಮೊದಲು,ಮದ್ವೆ ಅಂತ ನಾನು ೧೦ ದಿನ ರಜ ಮಾಡಿ ಕಮಲಿನೂ ಕರ್ಕೊಂಡು ..ಆ ಊರು ಈ ಊರು,ದೇವಸ್ಥಾನ, ನೆಂಟರ ಮನೆ ಅದು ಇದು ಅಂತ ಎಲ್ಲಾ ಸುತ್ತಿದೆ.ಅವಳಿಗೂ ಇದೆಲ್ಲ ಹೊಸದು,ಹೆಚ್ಚಿಗೆ ಊರು ನೋಡಿದವಳಲ್ಲ ..ಕುಶಿಯಾಗೆ ಇದ್ದಳು.ಇಲ್ಲಿಗೆ ಕರ್ಕೊಂಡು ಬಂದೆ, ಮದುವೆಗೆ ಅಂತ ಉಳಿಸಿದ್ದು ದುಡ್ಡು ಅಲ್ಲದೇ,ಇಸ್ಕೊಂಡಿದ್ದು ಖಾಲಿ ಆಗಿತ್ತು,ಹತ್ತು ದಿನ ರಜಾ ಮಾಡಿದ್ದಕ್ಕೆ ಆಗಲೆ ೩-೪ ಮನೆಯವರು ಬೇರೆಯವರಿಗೆ ಬಟ್ಟೆ ಹಾಕೊಕೆ ಶುರು ಮಾಡಿದ್ರು.ಮೊದಲಿಗಿಂತ ಜಾಸ್ತಿ ಕೆಲಸ ಮಾಡಬೇಕಾಯ್ತು..ಬೆಳಿಗ್ಗೆ ೬ ಗಂಟೆ ಇಂದ ರಾತ್ರಿ ೮ ಗಂಟೆ ತನಕ ಇದ್ದಿಲು ಹಾಕಿ ಇಸ್ತ್ರಿ ಮಾಡಿದ್ರೆ ಮೈಯೆಲ್ಲ ಉರಿ ಉರಿ ಸಾರ್ …ನಿದ್ದೆ ಬರೊಲ್ಲ.. ಕುಡಿದು ಹೋಗಿ ಮಲಗ್ತಿನಿ..”

ಇದೆಲ್ಲಾ ಇವನು ನನಗೆ ಯಾಕೆ ಹೇಳ್ತ ಇದ್ದಾನೆ ಅನಿಸಿದ್ರೂ ಅವನಿಗೆ ಮನಸು ಹಗುರ ಆಗೋದಾದ್ರೆ ಮಾತಾಡಲಿ ಅಂತ ಸುಮ್ಮನಾದೆ.

” ನಿಧಾನಕ್ಕೆ ಶುರು ಆಯ್ತು ಸಾರ್ ಇವಳ ಗೋಳು..’ನಿನ್ನ ಹತ್ರ ನಂಗೆ ಅಂತ ಟೇಮೆ ಇಲ್ಲ..ಯಾವಾಗಲು ಕೆಲಸ,ದುಡ್ಡು ಬರೀ ಇದೆನೆಯ ನಿಂಗೆ ಧ್ಯಾನ’ ಅಂತ ದಿನ ರಾತ್ರಿ ರಂಪ,ರಾಮಾಯಣ ಮಾಡೊಕೆ ಶುರು ಮಾಡಿದ್ದಳು.ಇರಬೌದು ಅವಳ ಜೊತೆ ನಂಗೆ ಹೆಚ್ಚಿಗೆ ಮಾತಾಡಕೆ ಆಗ್ತ ಇಲ್ಲ,ಆದ್ರು ನಾನು ಬೆಳಿಗ್ಗೆ ರಾತ್ರಿ ದುಡಿಯೋದಾದ್ರು ಯಾರಿಗೆ? ಇವಳಿಗೆ,ಈಗಿರೊ ಕೂಸು,ಮುಂದಾಗೊವಕ್ಕೆ ತಾನೆ ..? ಅದು ಹೇಳಿದ್ರೆ,’ನೀನು ಅರಮನೆ ಕಟ್ಟೊದು ಬ್ಯಾಡ,ಮೂರು ಹೊತ್ತು ಗಂಜಿಗಾದ್ರೆ ಸಾಕು’ ಅಂತ ರೇಗ್ತಿದ್ದಿಳು.”

ಅವನೇ ಹೇಳಿದ ಹಾಗೆ ೮-೧೦ ವರ್ಷದ ಕೆಳಗೆ ತುಮಕೂರಿನ ಒಂದು ಹಳ್ಳಿ ಬಡತನದಿಂದ ಬೆಂಗಳೂರಿಗೆ ಬಂದಿದ್ದ ಸೀನ ಬಹಳ ಕಷ್ಟಪಟ್ಟು ಒಂದು ವಾಸಕ್ಕೆ ಯೋಗ್ಯ ಅನಿಸೊ ಬಾಡಿಗೆ ಮನೆ ಮಾಡುವ ಅಷ್ಟು ಹೊತ್ತಿಗೆ ಐದು ವರ್ಷ ಆಗಿತ್ತು.

“ಎರಡು ತಿಂಗಳಾಯ್ತು ಸಾರ್, ಮಗೂನ ಕರ್ಕೊಂಡು ಹೋದೊಳು ಇನ್ನ ಬಂದಿಲ್ಲ…” ಕಣ್ಣು ಸ್ವಲ್ಪ ತೇವವಾಗ್ತ ಇತ್ತು.
“ನೀನು ಹೋಗಿ ಕರ್ಕೊಂಡು ಬರಬಾರದೆನೋ ?,ಅವಳಿಗೆನೋ ಗೊತ್ತಿಲ್ಲ ಅಂದ್ರೆ ನೀನು ಕಷ್ಟ ಕಂಡವನು,ಪ್ರಪಂಚ ನೋಡಿದವನು,ಎರಡು ಮಾತು ಹೇಳಿ ಕರ್ಕೊಂಡು ಬಾ…ಹೋಗು ” ಅಂದೆ.

“ಬರ್ತಾಳೆ ಬಿಡಿ ಸಾರ್,..ಜೀವನ ದೊಡ್ಡದು,ಇವಳ ಜೊತೆ ದಿನ ಮಾತಾಡ್ತ ಕೂತ್ರೆ ಜೀವನ ನಡೀತದಾ..? ಇನ್ನೊಂದಷ್ಟು ದಿನ ಇರಲಿ..ಆಮೇಲೆ ನಾಕು ಜನ ನಾಕು ಮಾತಾಡ್ತರೆ ಅಂತಾನಾದ್ರೂ ಬರ್ತಾಳೆ.. , ನಾನು ಬರ್ತೀನಿ ಸಾರ್.. ನಾಳೆ ಸಾಯಂಕಾಲ ಕೊಡ್ತಿನಿ ಸಾರ್ ಬಟ್ಟೆ “ಅಂತ ಹೊರಟ.

ಬಂದು ಕೂತು “ಸಂಡೇ ಟೈಮ್ಸ್ ” ನ ಭಾನುವಾರದ ವಿಶೇಷ ಸಂಚಿಕೆ ತಿರುಗಿಸುತ್ತ ಕಣ್ಣು ನಿಂತಿದ್ದು.. ಯಾರು ,ಎಲ್ಲಿ ಯಾವಾಗ ಯಾರನ್ನು ಹಿಡಿದು ಮಾಡಿದರೋ ಗೊತ್ತಿಲ್ಲದ ಒಂದು ಸರ್ವೆ..ಸಾಫ಼್ಟ್ ವೇರ್ ಉದ್ಯೋಗಿಗಳಿಗೆ ಕೆಲಸ ಹಾಗು ವೈಯಕ್ತಿಕ ಜೀವನದ ಹೋರಾಟದಲ್ಲಿ ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಅಂತೆ..ಅದೂ ಕೆಲಸ ಮುಖ್ಯ ಅನ್ನುವರು ಶೇಕಡ ೮೫ …!!

ಜಯಂತ್

Advertisements

Read Full Post »

ನಿಯತ್ತು


ತನ್ನ ಐದೆಕರೆ ತೋಪಿನಾಗೆ ತುಪಾಕಿ ತಗುಲಿಸಿಕೊಂಡು ತಿರುಗುತ್ತಿದ್ದ ತಿಮ್ಮೇಗೌಡರಿಗೆ ತೋಚಿದ್ದು..ತಾನೊಬ್ಬನೇ ತಿಕಲನಂಗೆ ಸರಿ ಹೊತ್ತಿನಾಗೆ ಇಲ್ಲಿಗಂಟ ಬರಬಾರದಿತ್ತು ಅಂತ.ವಾಪಸ್ ಹೋಗೋದು ಒಳ್ಳೆದು ಅನಿಸ್ತ ಇರೋವಾಗಲೇ “ಜೀವನದಾಗೆ ಯಾವ ನನ್ನ ಮಗಂಗೂ ಹೆದರಲಿಲ್ಲ..ನೋಡೆಬಿಡಾವ ಅದೇನೋ” ಅಂತ ಮತ್ತೆ ಇನ್ನು ಒಳಕ್ಕೆ ನುಗ್ಗಿದರು.ಒಂದು ತಿಂಗಳಿನಾಗೆ ಆಗಲೇ ಮೂರು ಜನ ಕಾವಲಿಗೆ ಅಂತ ಇಟ್ಟೋರು ಅದೇನೋ ದೆಯ್ಯ,ಪಿಸಾಚಿ ಅಂತ ಹೆದರಿ ಓಡಿ ಹೋಗಿದ್ದರು.”ಎಲ್ಲಾ ನರ ಸತ್ತ ನಾಮರ್ದ ಗಳು, ಯಾವೋ ಪೋಲಿ ಹುಡುಗರು ಕಾಯಿ ಕೀಳೋಕೆ ಬಂದು ಇವರನ್ನ ಹೆದರಿಸಿದಂಗೆ ಐತೆ,ಇವು ಮೂದೇವಿಗಳು ಭಯ ಬಿದ್ದಾವೆ.” ಅಂತ ಮಾತಡ್ಕೊಂಡ್ರುನೆ,ಕಾವಲು ಇಲ್ಲದಾಗಲೂ ಯಾವ ಕಳ್ಳತನ ಆಗದೇ ಇರೋದು ನೋಡಿ ಗೌಡ್ರಿಗೆ ಸ್ವಲ್ಪ ಕುಶಿ,ಜಾಸ್ತಿ ದಿಗಿಲಾಗಿತ್ತು. ಮನೆ ದೇವ್ರು ಜಾತ್ರೆಗೆ ಅಂತ ಮಲೆ ಮಾದೇಸನ ಬೆಟ್ಟಕ್ಕೆ ಹೋಗಿ ಬಂದ ಗೌಡ್ರಿಗೆ ಹೊಸ ಹುರುಪು..”ನಮ್ಮಪ್ಪ ಮಾದೇಸ ಅವ್ನೆ ನನ್ನ ಜೊತೆಗೆ,ಅದೇನೊ ಒಂದು ಕಿಟ ನೋಡಿಬರ್‍ತೀನಿ..ನೀನ್ ಯಾಕ ಹಿಂಗೆ ಆಡಿದಿ,ಏನು ಆಗಾಕಿಲ್ಲ ..ಸುಮ್ಮನಿರಮ್ಮಿ ” ಅಂತ ಲಕ್ಷಮ್ಮನಿಗೆ ಭರವಸೆ ನೀಡಿ,ನಾಲ್ಕು ದಪ್ಪ ಬ್ಯಾಟರಿಯ ಸರ್ಚ್ ಲೈಟು,ಕಾಡು ಹಂದಿ ಹೊಡೆಯೋಕೆ ಅಂತ ಇಟ್ಟ ಕೋವಿ ಎತ್ತಿಕೊಂಡು..ಹೆಗಲ ಮೇಲಿನ ಟವಲ್ ನ ಒಂದು ಸಲ ಕೊಡವಿ,ಹೊರಟು ಬಂದಾಗಿತ್ತು.

ಊರಿಗೆ ದೊಡ್ಡ ಸಾಹುಕಾರ ಅಲ್ಲದೇ ಇದ್ರೂನೆ ತಿಮ್ಮೇಗೌಡರು ಸ್ಥಿತಿವಂತರೆ..ಅಜ್ಜ,ಮುತ್ತಜ್ಜ ಕಾಲದ ಆಸ್ತಿನ ಉಳಿಸಿ,ಬೆಳೆಸಿಕೊಂಡು ಬಂದ ಮನೆತನ,ಈ ಮನೆತನದ ಮರ್ಯಾದೆ ಹೆಚ್ಚಿಸಿಕೊಂಡೆ ಬಂದ ತಿಮ್ಮೆಗೌಡ್ರು,ಮನೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಸಾಕಷ್ಟು ಕಷ್ಟಪಟ್ಟು ಹೊಲ,ಗದ್ದೆ,ತೋಪು ಚೆನ್ನಾಗಿ ಗೇಯೊದಲ್ಲದೆ ಇನ್ನಷ್ಟು ಹೆಚ್ಚಿಸಿದ್ದರು.ಗೌಡ್ರಿಗೆ ಈ ತೋಪು ಅಂದ್ರೆ ಒಸಿ ಅಕ್ಕರೆ ಜಾಸ್ತಿನೆಯ..ತಮ್ಮದೇ ಅಂತ ಮಾಡಿದ ಮೊದಲ ಆಸ್ತಿ ಇದು..ತೋಪಿಗೆ ಹಾಕಿದ್ದ ಬೇಲಿ,ಬೇಲಿಯ ಒಂದು ಮೂಲೆಗೆ ಅಡಿಕೆ ದಬ್ಬೆಯ ಗೇಟು..ಬೀಗ ತೆಗೆದು ಒಳಗೆ ಬಂದ ಗೌಡ್ರಿಗೆ ನೆನಪಾದದ್ದು..”ಈ ತೋಪಿಗೆ ಕಾಲಿಟ್ಟೇ ಶ್ಯಾನೆ ದಿನ ಆಯ್ತಲ್ಲ” ಅಂತ,ಹಂಗೆ ನೆನಪಾದ ನರಸ,ಅವನು ಇರ್‍ಓಗಂಟ ಈ ತೋಪೆ ಏನು ಊರಿನ ಪೂರ್ವಕ್ಕಿದ್ದ ಅವರ ಹೊಲ,ಗದ್ದೆ,ಎಲ್ಲದರ ಕಾವಲು ಕಾದು,ಒಂದು ದಿನಾನು ಇಂತಾದ್ದು ಇಲ್ಲಿ ಇದ್ದದ್ದು ,ಇಲ್ಲದಂಗೆ ಆಗೈತೆ ಅನ್ನೋ ಮಾತೇ ಇಲ್ಲದಂಗೆ ಮಾಡಿ..ಗೌಡ್ರು ಈ ಕಡೆಯ ಯೋಚನೆ ಬಿಟ್ಟೇ ಬಿಟ್ಟಿದ್ರು.

ದೂರದಾಗೆಲ್ಲೋ ಗೂಬೆ ಕೂಗಿದಂತಾದಾಗ ಗೌಡ್ರು ಬೆಚ್ಚಿ ನೆನಪಿಂದ ಹೊರಗೆ ಬಂದು, ಹಂಗೆ ಸುತ್ತು ಹಾಕ್ತ ಹೊಂಟರು..ಒಣಗಿದ ಎಲೆ ಮೇಲಿಟ್ಟ ಕಾಲಿನ ಸದ್ದು “ಚರ್ ಚರ್” ಅಂತ ಹಿಮ್ಮೇಳ ಕೊಟ್ಟಿತ್ತು..”ಚರ್..ಚರ್..ಚರ್…” ಇದ್ದಕಿದ್ದ ಹಂಗೆ ಪಕ್ಕದಾಗೆ ಯಾರೊ ಓಡಿ ಹೋದಂಗೆ ಆಯ್ತು ಅನಿಸಿ ನಿಂತವು.. ಹೆಜ್ಜೆ.ನನಗೆಲ್ಲೋ ಐಲು ಈ ಕೆಲ್ಸಕ್ಕೆ ಬಾರದವರ ಮಾತು ಕಟ್ಟಿಕೊಂಡು ಏನೇನೊ ಅಂದ್ಕತೀವ್ನಿ ಅಂತ ಸಮಾಧಾನ ಮಾಡ್ಕೊಂಡು,ತೋಳಿನಾಗಿದ್ದ ಮಾರಮ್ಮನ ತಾಯಿತ ಮುಟ್ಟಿ ನಮಸ್ಕಾರ ಮಾಡ್ಕೊಂಡು ಮತ್ತೆ ಮುಂದೆ ಹೊರಟರು.ಚರ್,ಚರ್,ಚರ್……ನಡಿತಿದ್ದ  ಗೌಡ್ರು ಮತ್ತೆ ನಿಂತರು. ಏನೊ ಸದ್ದು…ಮೈಯೆಲ್ಲಾ ಕಿವಿಯಾದಂಗೆ ಕೇಳಿದ್ರು …ಅಲ್ಲೇ ಎಲ್ಲೋ ಸ್ವಲ್ಪ ದೂರದಾಗೆ …ಗಂಡಸು ಅಳೋ ದನಿ..ಎಲ್ಲಿ ಸದ್ದು ಹೊರಗೆ ಬಂದಾತೊ ಅಂತ ತಡ್ಕೊಂಡು,ತಡ್ಕೊಂಡು..ಬಿಕ್ಕಿ ಬಿಕ್ಕಿ ಅತ್ತಂಗೆ.ಇದ್ಯಾವ ಶನಿ ಇದ್ದಾತು ಈ ರಾತ್ರಿನಾಗೆ ಮಾವಿನ ತೋಪಿಗೆ ಬಂದು ಅಳೊ ಅಂತ ಸಂಕಟ ಇದಕ್ಕೇನು ಅಂತ ಗೌಡ್ರು..”ಯಾವನ್ಲ ಅಲ್ಲಿ…ಬಾರಲ ಇತ್ಲಾಗೆ ” ಅಂತ ಕೂಗು ಹಾಕಿದರು..ಆ ಕೂಗಿಗೆ ಮರದಾಗಿದ್ದ ಹಕ್ಕಿಗಳು ಎದ್ದು ಕಿರುಚಾಡಿ…ಮತ್ತೆ ಬಂದು ಕೂತವೋ,ಮಲಗಿದವೋ..? ಗೌಡ್ರಿಗೆ ಯಾರು ಕಾಣಲಿಲ್ಲ ..ಅಳು ಕೇಳಿಸಿದ ಕಡೆ ಕೋವಿ ಮುಂದೆ ಮಾಡಿ ನಡೆದ್ರು..,”ಯಾವ ನನ್ನ ಮಗನೂ ಇಲ್ವಲ್ಲ ..”,ಈಗ ಮನಸ್ಸಿನಾಗಿನ ದಿಗಿಲು ಗೌಡ್ರ ಮುಖದ ಮ್ಯಾಗೆ ನೆರಿಗೆ ಹಂಗೆ ಕಾಣಾಕೆ ಶುರು ಆಯ್ತು.ಗೌಡ್ರಿಗೆ ನರಸ ಮತ್ತೆ ನೆನಪಾದ… “ಬಡ್ಡಿ ಮಗ ಇದ್ದಿದ್ರೆ ನನಗೆ ಈ ಪಾಡು ಯಾಕೆ ಬರ್ತಿತ್ತು”..

೩೦ ವರ್ಷದ ಕೆಳಗಿನ ಮಾತು,ಗೌಡ್ರಿಗೆ ಮದುವೆಯಾಗಿ ಆರು ತಿಂಗಳಾಗಿತ್ತು,ಯೌವ್ವನ,ಮುದ್ದಾದ ಹೆಂಡತಿ,ಹೆಗಲ ಮೇಲಿದ್ದ ಸ್ವಲ್ಪ ಜವಾಬ್ದಾರಿ ಅದೇನೋ ನಡಿತಿದ್ರೆ ಕುಣಿತವರೆ ಅನ್ನೋ ಹಾಗೆ ನಡಿತಾ ಇದ್ರು ..ಆವತ್ತು ಶನಿವಾರ ಸಂತೆಗೆ ಅಂತ ಶ್ರೀರಂಗಪಟ್ಟಣ ಹೋದವರು,ಮೂರು ತುಂಬಿದ ಬ್ಯಾಗು ಹೊರಲಾಗದೆ ಸಂಜೆಯ ಕೊನೆಯ ಬಸ್ಸಿಗೆ ಕಾಯ್ತ,ಪ್ರೈವೇಟ್ ಬಸ್ ಸ್ಟಾಂಡಿನಾಗಿ ನಿಂತಿದ್ದರು.ಇದ್ದಕಿದ್ದಂಗೆ “ಹಿಡಿರಲಾ,ಬಿಡ್ ಬ್ಯಾಡಿ ನನ್ನ ಮಗನ್ನ.. “ಅಂತ ಕೂಗು ಕೇಳಿಸಿದ ಕಡೆ ನೋಡಿದ್ರೆ, ಒಂದೈದು ಜನ ಒಂದು ೧೫ ವರ್ಷದ ಹುಡುಗನ್ನ ಒಬ್ಬನ ಅಟ್ಟಿಸಿಕೊಂಡು ಇತ್ತಲಾಗೆ ಬರ್ತಾ ಇದ್ದರು,ಏನೋ ಕದ್ದು ಇರಬೇಕು ಬಡ್ಡೆತ್ತದು ಅಂತ ಗೌಡ್ರು ಯೋಚಿಸ್ತಿದ್ದಂಗೆ ಹುಡುಗ ಇವರ ಹತ್ತಿರಕ್ಕೆ ಬಂದಿದ್ದ,ಧಿಡೀರ್ ಅಂತ, ಓಡೋ ಹುಡುಗನ ಕೊಳಪಟ್ಟೆ ಹಿಡಿದ ಗೌಡ್ರು …”ಏನಲ…ಏನು ಕದ್ದೆ .. ” ಅಂತ ಕೇಳೋದ್ರಾಗೆ ಅಟ್ಟಿಸಿಕೊಂಡು ಬಂದವರು ಅವನ ಸಾಯಿಸೊ ತರಹ ಗುರಾಯಿಸ್ತ,”ಇಕ್ರಲಾ ಅವಂಗೆ” ಅಂತ ಕೂಗಾಡೋಕೆ ಶುರು ಮಾಡಿದರು.ಗೌಡ್ರು “ಅಯ್ಯಾ ಅದ್ಯಾಕೆ ಹಂಗೆ ಆಡಿರಿ.. ಏನು ಕದ್ದ..ಕಳ್ಳ ಬಡ್ಡಿ ಮಗ,ವಸಿ ಅದಾರ ಹೇಳ್ರಲಾ” ಅಂತ ಗದರಿಕೊಂಡರು.”ಬಿಡಿ ಗೌಡ್ರೇ ಅವನ,ನನ್ನ ಮಗನ್ನ ಸಿಗಿದು ತೋರಣ ಕಟ್ತೀವಿ” ಅಂತ ಅವರಳೊಗೆ ಸ್ವಲ್ಪ ಚಿಕ್ಕವನು ಅನಿಸೋನು ಗುರುಗುಟ್ಟಿದ.”ಕಟ್ಟವಂತೆ,ಬಾಯಿ ಬಿಟ್ಟು ಅದೇನು ಕದ್ದ ಅಂತ ಹೇಳ್ರಲಾ..” ಅಂತ ಸ್ವಲ್ಪ ಗಟ್ಟಿಯಾಗೇ ಕೇಳಿದರು.”ಇವರಪ್ಪನ ಮನೆ ಆಸ್ತಿ ಅಂದುಕೊಂಡಾವ್ನ ಕಳ್ಳ ಬಡ್ಡಿ ಮಗ,೩ ಪ್ಲೇಟ್ ಇಡ್ಲಿ ತಿಂದು ಓಡಿ ಹೋಗ್ತನೆ..—-ಗುಟ್ಟಿದ –ಮಗ ” ಅಂತ ಯದ್ವಾತದ್ವ ಕಿರುಚುತಿದ್ದವರ ಮೇಲೆ ಗೌಡ್ರಿಗೆ ಅದ್ಯಾಕೋ ಶ್ಯಾನೆ ಕ್ವಾಪ ಬಂದು “ಅಲ್ಲ ಕಣ್ರಲ,ಏನೊ ಹಸಿವು ಇಂತಹ ಕೆಲಸ ಮಾಡಾವ್ನೆ,ಅದ್ಕ್ಯಾಕ್ರಲ ಹಿಂಗೆ ಆಡ್ತಿರ..,ತಗಾ ಇದ.., ಎರಡು ರೂಪಾಯಿ..ನಿಮ್ಮ ಮೂರು ಪ್ಲೇಟ್ ಇಡ್ಲಿ ಕಾಸು, ಹೋಗ್ರಲಾ ಸಾಕು”ಅಂತ ಪಂಚೆ ಎತ್ತಿ ನಿಕ್ಕರಿನ ಜೇಬಿನಾಗಿದ್ದ ಕಾಸು ತೆಗೆದು ಕೈ ಚಾಚಿದರು,ಕಾಸು ಇಸ್ಕೊಂಡವನೊಬ್ಬ “ಗೌಡ್ರೇ ಇಂತಾವನೆಲ್ಲ ಹಿಂಗೆ ಬಿಟ್ರೆ ಆಯ್ತದ.,ದುಡಿದು ತಿನ್ನೋಕೆ ಏನಂತೆ..ಒದ್ದು ಒಳಿಕೆ ಹಾಕಬೇಕು ..ನನ್ನ ಮಕ್ಕಳನ” ಅಂತ ಮಾತಡ್ತಲೇ ,ಹುಡುಗನ ಗುರಾಯಿಸ್ತ ಹೊರಟ.

ಆ ಹರಕು ಚಡ್ಡಿ,ತೂತು ಬನಿಯನ್,ಕೆದರಿದ ಕೂದಲು,ಮೈ ತೊಳೆದು ಅದೆಷ್ಟು ದಿನವಾಗಿತ್ತೋ ಅನ್ನೋ ಹಾಗಿದ್ದ ನರಸ ನಡುಗ್ತ ಇದ್ದ…ಹೆಚ್ಚಿಗೆ ಮಾತಾಡಲಿಲ್ಲ… ಗೌಡ್ರೂನೂವೆ, ..ದಿಕ್ಕು ದೆಸೆ ಇಲ್ಲ ಅಂತ ಅವನ ಕಡೆಯಿಂದ ತಿಳಿದು,ಜೊತೆಗೆ ಊರಿಗೆ ಕರ್ಕೊಂಡು ಬಂದಾಗ ಹೊಸಿಲ ತಾವ ಕೂತಿದ್ದ ಅವ್ವ,”ಇದು ಯಾರಲ .. ಎಲ್ಲಿಂದ ಕರ್ಕೊಂಡು ಬಂದೆ ಈ ಮೂದೇವಿಯ ” ಅನ್ನೊಕು ಗೌಡ್ರಿಗೆ ಥಟ್ಟನೆ ಹೊಳೆದಿದ್ದು “ಅದೇ ಕಣವ್ವ,ತ್ವಾಟಕ್ಕೆ ಕಾವಲು ಬೇಕಿತ್ತಲ್ಲ,ಈ ಹೈದನ ಕರ್ಕೊಂಡು ಬಂದೀವ್ನಿ..ಇದಕ್ಕು ಯಾರು ದಿಕ್ಕಿಲ್ಲ,ಎಡ್ಲು ಹೊತ್ತು ಅಂಬಲಿ ಕೊಟ್ರೆ ಸಾಕು ಬಿಡು” ಅಂದ.ಅಂದಕೊಂಡದ್ದಕ್ಕಿಂತ ಚೆನ್ನಾಗೆ ಕೆಲಸ ಮಾಡ್ತಿದ್ದ ನರಸನ್ನ ಕಂಡು ಗೌಡ್ರಿಗೆ “ಸದ್ಯ, ಇವನು ಕರ್ಕೊಂಡು ಬಂದಿದ್ದಕ್ಕೆ,ತಪ್ಪು ಕೆಲ್ಸ ಮಾಡಿದೆ ಅಂತ ಅನಿಸದಂಗೆ ಮಾಡಿದನಲ್ಲ” ಅಂತ ಖುಶಿಯಾಯ್ತು. ಆವತ್ತು ಗೌಡ್ರು ಹಂಗೆ ತೋಪಿನಾಗೆ ನಡಿತ ತ್ವಾಟದ ಮನೆ ತಾವ ಹೋಗಿ ನರಸನ ವಿಚಾರಿಸ್ವ ಅಂತ ಆ ಕಡೆ ನಡೀವಾಗ … ತ್ವಾಟದ ಮನೆ ಹಿತ್ತಲಿನಾಗೆ ನರಸ ತೂತು ಬಿದ್ದಿದ್ದ ಪಟ್ಟ್ ಪಟ್ಟೆ ನಿಕ್ಕರಿನಾಗೆ ಕೂತು ಬಳಪದ ಹಂಗಿದ್ದ ಬಟ್ಟೆ ಸೋಪಿನಾಗೆ,ಬಟ್ಟೆ ತಿಕ್ಕಾದ ನೋಡಿ ..ಅದ್ಯಾಕೋ ಗೌಡ್ರ ಕಳ್ಳು ಚುರ್ ಅಂತು.ಯಾರನು ಮಾತಡಿಸದಂಗೆ ತನ್ನ ಪಾಡಿಗೆ ತಾನು ತೋಟದ ಮನೆಯಲ್ಲಿ ಇರ್ತಿದ್ದ ಇವಂಗೆ ಒಂದು ಮದುವೆ ಮಾಡಬೇಕು ಅನಿಸಿ..ಮೂರು ಹುಣ್ಣಿಮೆ ಮುಗಿಯೋ ಮುಂಚೆ,ಪಕ್ಕದೂರ ಮಾದಿಗರ ಕರಿಯಣ್ಣನ ಮಗಳು ಬಸ್ವಿಯ ತಂದು ಗಂಟು ಹಾಕಿದ್ರು.

ಹಾಕಿದ ಗಂಟು ಗಟ್ಟಿಯಾಗೇ ಇತ್ತು,ಮೂರು ಮಕ್ಕಳಾದ ಮೇಲೆ ಗೌಡ್ರು ಅವನ ಮುಖಕ್ಕೆ ಉಗಿದು ಆಪರೇಶನ್ ಮಾಡಿಸ್ಕೊ ಅಂತ ಕಾಸಿ ಕೊಟ್ಟು ಅಕಳಿಸಿದ್ರು.ಗೌಡ್ರ ಹೆಸರಿನಾಗೆ ದೀಪ ಹಚ್ಚತಿದ್ದವ ನರಸ ಒಬ್ಬನೆಯ..ಬಸ್ವಿಗು ಅದೇನು ಯಾವ ಗೌಡ್ರನ ಕಂಡ್ರೂನವೇ “ಎಲ್ಲ ರಕ್ತ ಹೀರ್ತಾವೆ ..,ಅವರೇನು ಪುಕಸಟ್ಟೆ ಮಾಡವರ…ಹಗಲು,ರಾತ್ರಿ ಗೇಯಕಿಲ್ವ ನೀನು” ಅನ್ನೋಳು ,ನರಸ..,ಗೌಡ್ರ ವಿಶ್ಯ ಎತ್ತಿದಾಗಲೆಲ್ಲ.ಎಲ್ಡು ಗಂಡು ಹಿಂದೆ ಒಂದು ಹೆಣ್ಣು,ಎಲ್ಲಾನೂವೆ ಗೌರ್ ಮೆಂಟ್ ಸ್ಕೂಲಿನಾಗೆ ಓದೋಕೆ ಹೊಗ್ತಿದ್ವು.
ದಿನಾ ಮಾರಮ್ಮನ ಗುಡಿ ಮುಂದೆ ೧೦ ನಿಮಿಷ ಹಂಗೆ ಅಡ್ಡ ಬಿದ್ದಿರುವ…ಗೌಡ್ರ ಮುಂದೆ ಯಾವತ್ತು ನಿಂತಾವನಲ್ಲ,ದೂರದಾಗೆಲ್ಲೊ ಬೆನ್ನು ಬಗ್ಗಿಸಿ ನಿಲ್ಲವ.. ಆಗ ಈಗ ಲಕ್ಷಮ್ಮವ್ವ ಕಾಯಿ ಕೀಳೊಕೆ ಏನಾರ ಕರೆಸಿ,,ಉಣ್ಣಾಕಿಕ್ಕಿದ್ದರೆ ಎಲೆ ಎತ್ಕೊಂಡು ಹಿತ್ತಲಿಗೆ ಓಡಾವ.ಆವತ್ತೊಂದು ದಿನ ಗೌಡ್ರೇ ಕರೆಸಿದ್ರು.ಛಾವಡಿ ಮ್ಯಾಗೆ ಕೂತ ಗೌಡ್ರಿಂದ ಆಟು ದೂರದಾಗೆ ನಿಂತ ನರಸನ್ನ ..ಗೌಡ್ರು ಕರೆದೆ ಕರೆದ್ರು..”ಬಾರಲ…ಪರವಾಗಿಲ್ಲ..,ಇಲ್ಲೇ ಕುಂತ್ಕಾ ಬಾ..ಯಾರು ದೊಡ್ಡವ್ರು,ಸಣ್ಣೊರು ಅಂತ ಇಲ್ಲ ..ಆ ಮಾದೇಸನ ಮುಂದೆ ಎಲ್ಲಾ ಒಂದೆ ..” ಅಂದ್ರು ನರಸ ಹಲ್ಲು ಗಿಂಜಿಕೊಂಡು ಅಲ್ಲೇ ನಿಂತ .. ಈ ಮೂದೇವಿ ಈ ವಿಶ್ಯದಾಗೆ ಮತ್ತೆ ಆ ಹಾಳು ಬೀಡಿ ವಿಶ್ಯದಾಗೆ .., ನನ್ನ ಮಾತು ಕೇಳೊಲ್ಲ ಅಂತ ಗೌಡ್ರಿಗು ಗೊತ್ತಿದ್ದೆಯ.. “ಮೇಷ್ಟ್ರು ಸಿಕ್ಕಿದ್ರು ಕಣ್ಲ..ಗಂಗವ್ವನ ಹೋಟ್ಲ ತಾವ,ನಿನ್ನ ಹೈಕಳು ಶಾನೆ ಸಂದಾಗಿ ಓದ್ತಾವಂತೆ ಕಣ್ಲ..ಮುಂದೇನು ಮಾಡಿಯ ಅವಕ್ಕೆ” ಅಂದ್ರು.ಅಲ್ಲಿವರೆಗು ಅವನ ಕಡೆ ನೋಡ್ತ ಇದ್ದ ಗೌಡ್ರುನೂವೆ ಅವನ ಗಿಂಜಿದ ಹಲ್ಲು ನೋಡಿ ಒಸಿ ಹಂಗೆ ದೃಷ್ಟಿ ಬದಲಾಯಿಸಿದರು.”ಏನೈತೆ ಅಪ್ಪ,ನಿಮ್ಮ ತ್ವಾಟದ ಕಾಯಿ ನಿಮ್ಮ ಮನೀಗೆ ತಾನೆ…?, ಏನು ಓದ್ತಾವೋ ಏನೊ..? ನನಗೇನು ತಿಳಿದಾತು..ಇನ್ನೆಲ್ಡು ವರ್ಷ ಕಳದ್ರೆ ನಿಮ್ಮ ಮುಂದೆ ತಂದು ನಿಲ್ಲಿಸ್ತಿನಿ,ನಿಮ್ಮ ನೆರಳಾಗೆ ಬದುಕ್ತಾವೆ..” ಅಂದ.ಗೌಡ್ರಿಗೆ ನರಸನ ಈ ನಿಯತ್ತೇ ಬಾಳ ಕುಶಿಯಾಗೋದು…”ನನ್ನ ಬಿಟ್ರೆ ಲೋಕದಾಗೆ ಏನು ಇಲ್ಲದೋರ ಹಂಗೆ ಹೇಳ್ತಾನೆ ಬಡ್ಡಿ ಮಗ,ಆದ್ರೂವೆ ನಿಜಾನೆ …ಯಾರು ಇದ್ದರು..? ” ಇದಲ್ಲ ಈಗ ನೆನೆ ಬೇಕಾಗಿರೋ ಇಸ್ಯ ಅಂತ ಗೌಡ್ರು ತಮ್ಮ ಬಿರುಸು ದನಿಯಾಗೆ ಹೇಳಿದ್ರು.. “ಲೇ, ಅಡಕಸಬಿ ಹಂಗೆ ಮಾತಡಬೇಡ ಕಣ್ಲ.. ಚೆನ್ನಾಗಿ ಓದ್ತಾವೆ ಅಂದ್ರೆ ಇಲ್ಲಿ ತಂದು ದಿನಗೂಲಿ ಹಾಕ್ತಾನಂತೆ ಬೇಕೂಪ..ನಾಳೆ ನನ್ನ ಜೊತೆ ತಾಲೂಕು ಆಪೀಸಿಗೆ ಬಾರಲ..ನಿಂದಂತು ಯಾವ ಜಾತಿನೋ ಕಾಣೆ..ನಿಂದು,ಬಸ್ವಿದು,ಹೈಕಳ್ದು ಒಂದೇ ಜಾತಿನೆಯ ಅಂತ ಒಂದು ಸರ್ಕಿಪಿಕೇಟ್ ಮಾಡ್ಸಿ,ಆ ಹೈಕಳನ್ನ ಅಲ್ಲೇ ಹಾಸ್ಟೆಲ್ ನಾಗೆ ಬಿಡು..ಸರ್ಕಾರ ವ್ಯವಸ್ಥೆ ಮಾಡೈತೆ,ನೀನು ಏನು ಮಾಡಬೇಕಾದು ಇಲ್ಲ..ಅಲ್ಲೇ ಇದ್ದು ಓದಿ ..ಇದ್ಯ,ಬುದ್ಧಿ ಕಲೀಲಿ ಅವಾರ” ಅಂದ್ರು.ಗೌಡ್ರು ಹೇಳಿದ ಮೇಲೆ ಅದು ಒಳ್ಳೆದಕ್ಕೆ ಅಂತ ನರಸನ ಮನಸ್ಸಿನಾಗೆ ಅಚ್ಚೊತ್ತಿದ್ರು,ಇವನ ಮಕ್ಳು ಗೌಡ್ರ ಸೇವೆ ಮಾಡಿ ಋಣ ತೀರಿಸಬೇಕು ಅಂತ ಅವನ ಆಸೆ…ಹೇಳೇಬಿಡಾವ ಅಂತ ಒಂದು ಸಲ ಯೋಚ್ನೆ ಬಂದ್ರು ..ಗೌಡ್ರಿಗೆ ಉತ್ತರ ಕೊಡೊದಾ..?? ಅಪ್ಪರಾಣೆ ಆಯಾಕಿಲ್ಲ ಅಂತ ತಲೆ ಅಲ್ಲಾಡಿಸಿ ಹೊಂಟ..”ಇರಲ,ಕಾಪಿ ಕುಡಿದು ಹೋಗವಂತೆ” ಅಂತ ಗೌಡ್ರು ಕೂಗೋ ಹೊತ್ತಿಗೆ ದನಿ ಕೇಳದಷ್ಟು ದೂರ ಹೊಂಟು ಹೋಗಿದ್ದ.ಅಮಾಸೆಗೆ ಒಂದು ಸಲ,ಹುಣ್ಣಿಮೆಗೆ ಒಂದು ಸಲ ಸದ್ದಿಲ್ಲದೆ ಕುಡಿದು ಮಲಗಾವ..ಆವತ್ತು ೪ ಪ್ಯಾಕೇಟು ಕುಡಿದು,ಜಗಲಿ ಮ್ಯಾಗೆ ಕೂತು ಬಸ್ವಿನ,ಮಕ್ಕಳನ ತಾರ ಮಾರ ಬೈದು,ಬೈದು ..ಉಗುಳೆಲ್ಲ ಖಾಲಿ ಆದಂಗೆ ಆಗಿ..ಅಲ್ಲೇ ಬಿದ್ಕೊಂಡ..ಈ ಮೂದೇವಿಗೆ ಯಾನ ಬಂತ ಯಾವತ್ತು ಇರದ ರ್‍ವಾಗ ಅಂತ ಮಕ್ಕಳನ್ನ ಸಮಧಾನ ಮಾಡ್ಕೊಂಡು ಬಸ್ವಿ ಕದ ಗಟ್ಟಿ ಮಾಡಿ ಕಣ್ಣೀರು ಹಾಕ್ತ ಕೂತಳು.
ಮಕ್ಳು ಹೋದ್ವು,ನಿಂಗಿ ಮ್ಯಾಲು ಅಷ್ಟಕಷ್ಟೆಯಾ ಈಗ..ಗೌಡ್ರು ಸಂಬಳ ಅಂತ ಕೊಡೊ ಕಾಸಿನಾಗೆ ಗಣೇಶ ಬೀಡಿಗೆ ಅರ್ಧ ಸುರೀತಾ ಇದ್ದ.ಬಸ್ವಿ ಉಣ್ಣಾಕೆ ಇಟ್ರೆ ಉಂಡ,ಇಲ್ಲಂದ್ರೆ ಅದರ ಮ್ಯಾಗು ದ್ಯಾಸ ಇಲ್ಲದಂಗೆ ಇರ್ತಿದ್ದ. ಕಾವಲು ಕೆಲ್ಸದಾಗೆ ಏನು ಕಮ್ಮಿ ಆಗಲಿಲ್ಲ.

ಎಲ್ಲಾ ಸರಿ.., ಮುಂಡೇದು… ಬಿಡದಂಗೆ ಬೀಡಿ ಸೇದಿ ಸೇದಿ ಹಾಳಾಯ್ತು…ಅಂತ ಗೌಡ್ರು ಮರುಗಿದರು.ಟಿ.ಬಿ ಕಾಯಿಲೆ ಅಂತ ಅವನು ಹಾಸಿಗೆ ಹಿಡಿದಾಗ ಮಾಡೋ ಪ್ರಯತ್ನ ಎಲ್ಲಾ ಮಾಡಿ ,ಸಾವಿರಾರು ರೂಪಾಯಿ ಖರ್ಚೂ ಮಾಡಿ,ಮೈಸೂರಿನಾಗಿನ ಕೆ.ಆರ್ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ರೂವೆ ಉಳಿಲಿಲ್ಲ ಜೀವ..ನಾಳೆ ಸಾವು ಅಂತ ನರಸಂಗೆ ಕನಸೇನಾದ್ರು ಬಿದ್ದಿತ್ತೋ ಏನೋ ….ಅವ್ನ ನೋಡಾಕೆ ಹೋದ ಗೌಡ್ರ ಕಣ್ಣಿನಾಗೆ ಆವತ್ತೇ ಇರಬೇಕು ಕಣ್ಣಿಟ್ಟು ಮಾತಡಿದ್ದು.. “ನನ್ನಪ್ಪ…ನಾ ಸತ್ರೂ ನಿಮ್ಮ ಋಣದಾಗೆ ಇರ್ತೀನಿ….ಇನ್ನಾ ಏಳು ಜನುಮದಾಗು ತೀರಿಸೋಕೆ ಅಯಾಕಿಲ್ಲ ನನ್ನ ಕೈಲಿ..” ಎಲ್ಡು ಕೈಯೆತ್ತಿ ಮುಗಿದ..ಅವನ ಕೈ ಹಿಡಿದ ಗೌಡ್ರು “ಲೇ ಅದೇನು ಮಾತು ಅಂತ ಆಡಿದಿ..ಬಿಡ್ತು ಅನ್ಲ…ಗಡಾನೆ ಹುಸಾರಾಗು,ಈ ಋಣ,ಗಿಣ ಅಂತ ಮಾತಡಾದೊ ನಾನು ಏನು ಮಾಡಿಲ್ಲ ..ತಗಿ ಅತ್ಲಾಗೆ” ಅಂತ ಗದರಿಕೊಂಡರು.

“ನನ್ನಪ್ಪ….” ದೂರದಾಗೆ ಯಾರೊ ಕರೆದಂತಾಯ್ತು..,ಗೌಡ್ರು ಬೆಚ್ಚಿದರು..ಸಣ್ಣಗೆ ಬೆವರು,ಕೋವಿ ಹಿಡಿದ ಕೈ ನಡುಗೋಕೆ ಶುರು ಆಯ್ತು …ಗಂಟಲು ಬಿಗಿದಂತಾಯ್ತು…ನಾಲಿಗೆ ಒಣಗಿ, ಕೂಗಾನ ಅಂದ್ರು ತನಗೆ ಮಾತು ಬಾರದ ಮೂಕ ಅನಿಸ್ತ ಇತ್ತು.ಇನ್ನೊಂದು ಸಲ ಅಲ್ಲಿಂದಾನೆ “ನನ್ನಪ್ಪ…………” ದನಿ ನರಸಂದು ಇದ್ದಂಗೆ ಐತೆ… !! ಗೌಡ್ರ ಮೈ ಮೇಲಿದ್ದ ಬೆಳ್ಳನೆ ಕೂದಲೆಲ್ಲ ನಿಗಿರಿ,ಕಾಲು ಅದುರಿ,ಏನು ಮಾಡಬೇಕು ತೋಚವಲ್ಲದು.. ಮಾರವ್ವ,ಮಲೆ ಮಾದೇಸ,ಈರಭದ್ರ ಸಾಮಿ,ಒಬ್ಬರು ಆದ ಮ್ಯಾಗೆ ಒಬ್ಬರು ಎಲ್ಲರ ನೆನೆಸ್ಕೊಂಡು ಜೀವ ಭಿಕ್ಷೆ ಬೇಡೋಕೆ ನಿಂತರು…ಯಾವು ದೇವ್ರು ಕೇಳ್ತೊ ಗೊತ್ತಿಲ್ಲ..ಅಂತು ಗೌಡ್ರಿಗೆ ಮತ್ತೆ ಧೈರ್ಯ ಬಂತು.. “ಯಾವನ್ಲ ಅವನು..ಏನು ಹುಡುಗಾಟ ಆಡಿಯ..ಬಾರಲ ಮುಂದಕ್ಕೆ ..ಬರ್ತಿಯ ಇಲ್ಲ ನಿನ್ನ ತಿಥಿ ಮಾಡವ ” ಅಂತ ಏರು ದನಿನಾಗೆ ಕಿರುಚಿ…ನನ್ನ ದನಿನೇನಾ ಇದು ಅಂತ ಗೌಡ್ರಿಗೆ ಆಶ್ಚರ್ಯ ಆಯ್ತು.

“ನನ್ನಪ್ಪ…” ದನಿ ಸ್ವಲ್ಪ ಹತ್ರ ಆದಂಗೆ ಆಯ್ತು.. “ಮುಲಾಜಿಲ್ಲ,ಇದು ನರಸಂದೆ ದನಿ..” ಗೌಡ್ರು ದೆವ್ವ,ಭೂತದ ಕಥೆ ಕೇಳಿದ್ರು ..ಸಣ್ಣೋರಿದ್ದಾಗ ಬೆಚ್ಚಿ ಬೆಚ್ಚಿ ಹಾಸಿಗೆನು ಬೆಚ್ಚಗೆ ಮಾಡಿದ್ರು..ದೇವ್ರು ಇದ್ದ ಮ್ಯಾಗೆ ದೆವ್ವನು ಇರಬಹುದ ಅಂತ ನಂಬೊದ್ರು,ಅವರಜ್ಜಿ ಯಲ್ಲಮ್ಮ ಹಿಂಗೆ ಒಂದು ಕಥೆ ಹೇಳ್ತ ಒಂದು ಒಳ್ಳೆ ದೆವ್ವ ರಾಜಂಗೆ ಒಬ್ಬಂಗೆ ಸಹಾಯ ಮಾಡಿದ್ದು ಜ್ನಾಪಕ ಬಂತ..”ಅಂದ್ರೆ ಏನು,ಈ ದೆವ್ವ ನರಸಂದೆ ಆಗಿದ್ರೆ….?? ನನ್ನ ಏನು ಮಾಡದ…?” ಅವರೇ ಕೇಳಿಕೊಂಡ ಪ್ರಶ್ನೆಗೆ ಯಾರು ಉತ್ತರ ಕೊಡಲಿಲ್ಲ ..ಜೀವ ಹೊಗೊದಾದ್ರೆ ಯಾವನು ತಡಿತಾನೆ..ಹೆದರಿ ಅಂತೂ ಸಾಯಕಿಲ್ಲ ಅಂತ ಗಟ್ಟಿ ಮನಸು ಮಾಡಿ ..”ಯಾವನ್ಲಾ…ಅವನು ಬೇವರ್ಸಿ ನನ್ನ ಮಗ .. ತಿಮ್ಮೇಗೌಡನ ಹೆದರಿಸೋ ಅಷ್ಟು ಧಿಮಾಕೆನ್ಲ..” ಅಂತ ಕೋವಿ ಎತ್ತಿ ಹಿಡಿದು ಗಾಳಿನಾಗೆ ಒಂದು ಗುಂಡು ಮೇಲಕ್ಕೆ ಹಾರಿಸಿ ಸಮಾಧಾನ ಮಾಡ್ಕೊಂಡ್ರು….ಮತ್ತೆ ಹಕ್ಕಿಗಳ ಸದ್ದು ನಿಂತ ಮೇಲೆ … . ” ನನ್ನಪ್ಪ , ನೀವು ಯಾಕೆ ಬರೋಕೆ ಹೋದ್ರಿ ಇಲ್ಲಿಗಂಟ..ಇಷ್ಟು ಹೊತ್ತಿನಾಗೆ … ನಾನು ಇದ್ದನಲ್ಲ ಇಲ್ಲೇ” ಅಂತ ಕೀರಲು ದನಿ ಕೇಳಿಸ್ತು.

ಗೌಡ್ರಿಗೆ ಈಗ ಖಾತ್ರಿ ಆಯ್ತು ..”ಲೇ ನರಸ …ನೀನೆ ಏನಲ ಅಲ್ಲಿ ” ಅಂತ ಬಿದ್ದು ಹೋಗ್ತಿದ್ದ ಧೈರ್ಯನೆಲ್ಲ ಒಟ್ಟಿಗೆ ಮಾಡ್ಕೊಂಡು ಕೇಳಿದ್ರು.. ” ನಾನೇ ಅಪ್ಪ .. ನಿಮ್ಮ ನರಸ ..,ಯಾಕೆ ಬರೋಕೋದ್ರಿ ಸರಿ ರಾತ್ರಿನಾಗೆ,ನೀವು ಹೋಗಿ ಮಲಿಕೊಳ್ಳಿ …ನಾನು ಇದಿನಿ ಅಪ್ಪ ” ಮತ್ತದೇ ಕೀರಲು ದನಿ ..ಎಲ್ಲೋ ಮರದ ಹಿಂದೆ ನಿಂತು ಮಾತಾಡಿದಂಗೆ…

ಹೆಗಲ ಮೇಲಿದ್ದ ಟವೆಲ್ ಕೈನಾಗೆ,ಕೋವಿ ಕೆಳಗೆ ಮಾಡ್ಕೊಡು ಬಂದ ಗೌಡ್ರನ ಕಾಯ್ತ ಇದ್ದ ಲಕ್ಷಮವ್ವ “ಏನಾತು , ಯಾಕ ಹಿಂಗೆ ಇದಿರ.?.,ಏನಾರ ಗೊತ್ತಾತ..?” ಒಂದಾದ ಮೇಲೆ ಒಂದು ಪ್ರಶ್ನೆ ಕೇಳ್ತ ಇದ್ದೊರ ಕಡೆ ಗೌಡ್ರು ಒಂದು ಸಲ ನೋಡಿ.. ” ಇನ್ನು ಮ್ಯಾಗೆ ಯಾವನು ಕಾವಲು ಕಾಯಂಗಿಲ್ಲ ಹಂಗೆ ಜೋಪಾನ ಮಾಡಿವ್ನಿ..” ಅನ್ನುತ ಹೊಸಲು ದಾಟಿ ಒಳಗೆ ಹೋಗಾಕು,ಅಲ್ಲೇ ಕಾದ್ಕೊಂಡು ಕೂತಿತ್ತೇನು ಅನ್ನೊ ಹಂಗೆ ಬಾಗಿಲ ಮ್ಯಾಲಿನ ಹಲ್ಲಿ ಲೊಚ ಗುಟ್ಟಿತು.

Read Full Post »(ಒಂದು ನೈಜ ಘಟನೆ…ನಾ ಕೇಳಿದಂತೆ..)

ಬರುವಾ ಸುಮೇರ್ ಪುರ್..ಉತ್ತರಪ್ರದೇಶದ ಕಾನ್ ಪುರ್ ನಗರದಿಂದ 80 ಕಿ.ಮೀ ದೂರದಲ್ಲಿರುವ ಒಂದು ಚಿಕ್ಕ ಪಟ್ಟಣ.ಹಳ್ಳಿ ಎನ್ನಲು ಸಾಧ್ಯವಿಲ್ಲ…ಎರಡು ಮೂರು ವೈನ್ ಶಾಪ್ ಗಳು,ಇತ್ತೀಚೆಗೆ ಆರಂಭವಾಗಿದ್ದ ಒಂದು ಒಳ್ಳೆಯ ಹೋಟೆಲ್ಲು,ಎಲ್ಲಾ ನೂತನ ನಕಲಿ ಸಿ.ಡಿ. ಮಾರುವ ಪಿಂಟೊನ ಪಾನ್ ಅಂಗಡಿ,ಅಡಿಗೆಯಿಂದ ಹಿಡಿದು ನಿತ್ಯ ಬಳಕೆಯ ಎಲ್ಲಾ ಸಾಮಗ್ರಿಗಳು ಸಿಗುತ್ತಿದ್ದ ಹಲವಾರು ಲಾಲ ದೂಕಾನುಗಳು,ಅಲ್ಲೇ ಇರುವ ಒಂದು ಸಿಂಗಲ್ ರೋಡ್ ನಲ್ಲೇ ಬಸ್ ಸ್ಟಾಂಡ್,ಪೋಲಿಸ್ ಠಾಣೆಯ ಎದುರು.ಪಕ್ಕದಲ್ಲಿ ಒಂದು ಚಿಕ್ಕ ಗಲ್ಲಿ,ಅದೇ ತರಕಾರಿ ಮಾರುಕಟ್ಟೆ.ವರುಷದ 300 ದಿನಗಳಲ್ಲಿ ರಸ್ತೆಯಲ್ಲಿ ಹೊಂಡಗಳೋ..? ಹೊಂಡಗಳಲ್ಲಿ ರಸ್ತೆಯೋ..? ಅರಿಯದಂತ ರಸ್ತೆ..! ಮೂರು ಜನಕ್ಕೆ ಒಬ್ಬರಲ್ಲಿ ಹೆಗಲ ಮೇಲೊಂದು ಕೋವಿ..ಕೋವಿಗೆ ಲೈಸೆನ್ಸ್ ಇರಬೇಕೆ..?? ಇಲ್ಲ.. ಇಲ್ಲಿ ಹಾಗೇನಿಲ್ಲ.ಮುಂಡಾಸು ಅವರಿಗಿಷ್ಟವಿದ್ದಂತೆ.ಈ ಕಡೆ ಕಾನ್ ಪುರ್ ರಸ್ತೆ,ಮತ್ತೆ ಆ ಕಡೆ ಮೌಧಾ,ಬಾಂದಾದ ಹಾದಿಯಲ್ಲಿ ಜಗತ್ಪಸಿದ್ದ ಖುಜುರಾಹೋಗೆ ದಾರಿ, ಈ ರೋಡಿನಲ್ಲೇ ಸುಮೇರ್ ಪುರ್ ನಿಂದ 2-3 ಕಿ.ಮೀ ಬಳಿಕ special economic zone. ಅದೇ ಇತ್ತೀಚೆಗೆ ಅತ್ಯಂತ ವಿವಾದಗ್ರಸ್ತವಾಗಿರುವ ಹಿಂದುಳಿದ ಪ್ರದೇಶಗಳ ಉದ್ದಾರಕ್ಕೆ ಸರ್ಕಾರದ ಉತ್ತರ.zone ಅಂದ ಮಾತ್ರಕ್ಕೆ ಅಲ್ಲಿ ಕಾರ್ಖಾನೆ ಹಾಕಿದವರಿಗಾಗಿ ಹೊಸ ರಸ್ತೆ,ಹೊಸ ಫೋನ್ ವ್ಯವಸ್ಥೆ ಹಾಗೆಲ್ಲ ಏನು ಇಲ್ಲ.ಆ ಕಾರ್ಖಾನೆಗಳಲ್ಲಿ ತಯಾರಾದ ಉತ್ಪನ್ನಗಳ ಮೇಲೆ ಅಬಕಾರಿ ಶುಲ್ಕದ ಕಡಿತವಷ್ಟೇ..!.ಅಷ್ಟೇ ಅನ್ನಲಾಗುವುದಿಲ್ಲ..ಸುಮಾರು 15-20 ವರುಷಗಳಿಂದ ತನ್ನ ವಹಿವಾಟು ನಡೆಸುತ್ತಿರುವ ಇಲ್ಲಿನ ಒಂದೇ ಹೆಸರಾಂತ ಹಿಂದುಸ್ತಾನ್ ಲಿವರ್ ಕಾರ್ಖಾನೆ ಇದಕ್ಕೆ ಸಾಕ್ಷಿ.

ಹಿನ್ನಲೆಯೇ ಸಾಕಷ್ಟಿದೆ.. ಇದೇ ಈ ಜಾಗದ ಕರಾಮತ್ತು..ಈ ಹಿನ್ನೆಲೆ ಇಲ್ಲದೇ.., ನಾ, ನಡೆದ ಘಟನೆ ವಿವರಿಸುವಂತಿಲ್ಲ.. ಎಲ್ಲಾ ಸಾಮಾನ್ಯ ಊರಿನಂತೇ ಈ ಊರಿನಲ್ಲೂ ಅಸಾಮಾನ್ಯವಾದ ಆದಾಯ ತರುವ ಯಾವ ನೈಸರ್ಗಿಕ,ಮಾನವ ನಿರ್ಮಿತ ಸಂಪನ್ಮೂಲಗಳಿಲ್ಲ.ಬೇಸಾಯ ಮುಖ್ಯ ಕಸುಬು,ಇರುವುದೊಂದು ದೊಡ್ಡ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರನನ್ನು ಇಲ್ಲಿ ತುಂಬಾ ಸ್ಥಿತಿವಂತನೆಂದು ಕಾಣುವುದು ಸಹಜ.ಇನ್ನು ಇಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಊರಿನಿಂದ ಹೊರಗೆ ಒಂದು ಕಾಲೋನಿ..,ಅವರೇನು ಅಸ್ಪ್ರಶ್ಯರಂತಲ್ಲ..!! ಊರಿನಲ್ಲಿ ಅವರಿಗೆ ರಕ್ಷಣೆ,ಸವಲತ್ತುಗಳ ನೀಡುವುದು ಕಷ್ಟವೆಂದೇನೋ..ಇನ್ನು ಮ್ಯಾನೇಜರ್ ವಲಯದವರಿಗೆಲ್ಲ ಸುಮೆರ್ ಪುರ್ ನಿಂದ 20 ಕಿ.ಮೀ ದೂರದಲ್ಲಿನ ಹಮೀರ್ ಪುರ್ ನಲ್ಲಿ ಎತ್ತರದ ಗೋಡೆಯ ಒಳಗಿನ ಮನೆಗಳು.ಹಮೀರ್ ಪುರ್ ..,ಜಿಲ್ಲಾ ಕೇಂದ್ರ,ಯಮುನಾ ಮತ್ತು ಬೇತ್ವ ನದಿಯ ಮಧ್ಯೆ ಇರುವ ಭೂ ಭಾಗ. ಎತ್ತರದ ಗೋಡೆ ಬಹುಶಃ ಸಮೀಪದಲ್ಲಿದ್ದ ಜಿಲ್ಲಾ ಕಾರಗೃಹದ ನಿಮಿತ್ತವಾಗಿರಬೇಕು.

ಹೇಳುವದ ಮರೆತೆ, ಈ ಸುತ್ತಮುತ್ತಲ ಪ್ರದೇಶ ಇತಿಹಾಸ ಪ್ರಸಿದ್ಧ “ಬುಂದೇಲ್ ಖಂಡ್” ಎಂಬ ಖ್ಯಾತಿ ಉಳ್ಳದ್ದು.ಸಾಕಷ್ಟು ಕಾಲ ..ಈಗಲೂ ಕೂಡ ದರೋಡೆಕಾರರ ಹಾವಳಿ,ಜಮೀನ್ದಾರರ ದಬ್ಬಾಳಿಕೆಯಿಂದ ನಲುಗಿದ,ನಲುಗುತ್ತಿರುವ ಪ್ರದೇಶ.ಕಾಡಿನಂತೆ ಹಬ್ಬಿದ ಕುರುಚಲು ಗಿಡಗಳು,ನದಿ ಹರಿದು ಕೊರೆದ ಭೂ ಭಾಗಗಳು ,ದರೋಡೆಕಾರರಿಗೆ ನೆಮ್ಮದಿ ನೆಲೆಯ ನೀಡಿವೆ.ಇದೇ ಹಮೀರ್ ಪುರ್ ನ ಕಾರಾಗೄಹದಲ್ಲಿ ಪೂಲನ್ ದೇವಿಯನ್ನು ಕೆಲ ಕಾಲ ಬಂಧಿಸಿಡಲಾಗಿತ್ತು ಎನ್ನಲಾಗುತ್ತದೆ.
ಸುಮೇರ್ ಪುರ್ ನ ಈ ಕಾರ್ಖಾನೆಯ ಬಳಿ ಒಂದು “ಶೀಖಾ”,ನಮಗೆಲ್ಲ ಪಂಜಾಬಿ ಢಾಬಾವೆಂದು ಪರಿಚಯವಿರುವ ರೀತಿಯ ಹೋಟೆಲ್.ರುಚಿಯಾದ ಪನ್ನೀರ್,ಮೊಟ್ಟೆ ಬುರ್ಜಿ,ಬಿಸಿ ಬಿಸಿ ತಂದೂರ್ ರೋಟಿ,ಕೆನೆ ತುಂಬಿ ತುಳುಕುವ ಲಸ್ಸಿ …ಹೀಗೆ ಹಲವು ಕೈಗೆಟುಕವ ಬೆಲೆಯ ರುಚಿಯಾದ ಖಾದ್ಯಗಳಿಗೆ ಈ ಶೀಖಾ ಹೆಸರುವಾಸಿ.ಆಗೊಮ್ಮೆ ಈಗೊಮ್ಮೆ ಧೂಳೆಬ್ಬಿಸಿ ನಿಲ್ಲುವ ಕಾನ್ ಪುರ್ -ಮೌಧಾ, ಬಾಂದಾ ಬಸ್ಸುಗಳು,ರಾತ್ರಿ ಸಮಯ ಹೆಚ್ಚಾಗಿ ನಿಲ್ಲುತ್ತಿದ್ದ ಹೆಚ್ಚು ಹೆಚ್ಚು ಲಾರಿಗಳು.ಮೌದಾದ ಬಳಿಯ ಗಣಿಗಾರಿಕೆ ಇಂದಾಗಿ ಈ ಸಿಂಗಲ್ ರೋಡಿನಲ್ಲಿ ಹೆಚ್ಚಿನ ಲಾರಿಗಳು ಓಡಾಟವಿರುತ್ತದೆ.ಎಲ್ಲಾ ಢಾಬಾಗಳ ಹಾಗೇ ಇಲ್ಲೂ ರಾತ್ರಿಯಲ್ಲೇ ಸೇವೆ..ತಿನ್ನಲೂ ಹಾಗು ಕುಡಿಯಲು.ರಾತ್ರಿ 9 ರಿಂದ 12ರ ವರೆಗೆ ಜೋರಾದ ವಹಿವಾಟು.ಢಾಬಾಕ್ಕೆ ಅಂಟಿಕೊಂಡಂತೆ ಒಂದು ಪಾನ್ ಅಂಗಡಿ.

ಕಾರ್ಖಾನೆಯಲ್ಲಿ ಹೊಸದೊಂದು ಯಂತ್ರದ ಕಮಿಷಿನಿಂಗ್ ನಡೆದಿತ್ತು,ಕಂಪನಿಯ ಆಡಳಿತ ವರ್ಗದ ಉನ್ನತ ಅಧಿಕಾರಿಯೊಬ್ಬರ ಭೇಟಿ ಹತ್ತಿರದಲ್ಲೇ ಇದ್ದ ಕಾರಣ..ಈ ಕಾರ್ಯ ಭರದಿ ಸಾಗಿತ್ತು.ರಾತ್ರಿ ಸುಮಾರು 1 ಗಂಟೆಯ ಸಮಯ..Shift ನಲ್ಲಿದ್ದವರು ತಮ್ಮ ಪಾಡಿಗೆ ಕೆಲಸ,ನಿದ್ದೆ ಮಾಡುತ್ತಿದ್ದರು .commisioning ಕಾರ್ಯದಲ್ಲಿದ್ದವರು ಒಬ್ಬ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗೆ ಈಗ ತಾನೇ ಬಡ್ತಿಗೊಂಡವ,ಮೂವರು ಅಪ್ರೆಂಟಿಸ್ ಗಳು ಹಾಗು ಕಾಂಟ್ರಾಕ್ಟ್ ಲೇಬರ್ ಗಳು.ಕೆಲಸದ ಆಯಾಸ,ನಿದ್ದೆಯ ಮಂಪರು ,ಹಸಿವು ಎಲ್ಲರಲ್ಲೂಹೆಚ್ಚಿತ್ತು..ಇದೇ ಸಮಯಕ್ಕೆ ಪ್ರಾಜೆಕ್ಟ್ ಮ್ಯಾನೇಜರ್ ಎಲ್ಲರನ್ನು ಉತ್ತೇಜಿಸುವಂತೆ ಅಪ್ರೆಂಟಿಸ್ ಗಳನ್ನೆಲ್ಲ ಬನ್ನಿ ಏನಾದ್ರು ತಿಂದು ಬರೋಣ ಎಂದು ಕರೆದು, ಕಾಂಟ್ರಾಕ್ಟ್ ಕೆಲಸದ ಉಸ್ತುವಾರಿ ನೋಡಿಕೊಳ್ಳುತಿದ್ದವಗೆ ಕೆಲಸ ಮುಂದುವರಿಸಲು ಹೇಳಿ ಹೊರಟ.ಕಾರ್ಖಾನೆ
ಯ ಕ್ಯಾಂಟೀನ್ ಸಹ ಮುಚ್ಚಿದ್ದರಿಂದ ಶಿಫ಼್ಟ್ ನ ಅಧಿಕಾರಿಗಳ ಕರೆದು ತರುವ,ಕರೆದೊಯ್ಯುವ ಕಾರಿನಲ್ಲಿ ಶೀಖಾಗೆ ಹೊರಟರು.ಶೀಖಾದಲ್ಲಿ ಕುಳಿತು ಹೀಗೆ ಲೋಕಾಭಿರಾಮವಾಗಿ ಆ ನೌಕರ ಹೀಗೆ ಮಾಡಿದ,ಈ ನೌಕರ ಹಾಗೆ ಮಾಡಿದ,ತಮ್ಮ ತಮ್ಮ ಕಾಲೇಜ್ ನ ಸಮಯ ಹೀಗೆ ಹರಟುತ್ತ,ಒಂದಷ್ಟು ನಗುತ್ತ ಇದ್ದರು.ಇವರು ಕುಳಿತ ಮೇಜಿನ ಅನತಿ ದೂರದಲ್ಲಿ ಹಗ್ಗದ ಮಂಚದ ಮೇಲೆ ಕುಳಿತವ ಆಗಾಗ್ಗೆ ಇವರೆಡೆ ಅಸಹನೀಯವಾಗಿ ನೋಡಲಾರಂಬಿಸಿದ..ಒಂದೈದು ನಿಮಿಶಗಳ ಬಳಿಕ,ಇವರ ಬಳಿ ಬಂದು..ಸಾಕಷ್ಟು ಕಟುವಾಗಿ ” ಊಟ ಮಾಡುವುದಾದರೆ ಊಟ ಮಾಡಿ ಹೋಗಿ,ಗಲಾಟೆ ಮಾಡಬೇಡಿ..ಅದೇನು ಅಷ್ಟೊಂದು ನಗುವುದು..!!” ಎಂದು ಏರು ದನಿಯಲ್ಲಿ ಗದರಿದ.ಅವನ ಠೀವಿ,ವರಸೆ,ಗದರಿದ ರೀತಿ ..,ಇವರಿಗೆ ಸ್ವಲ್ಪ ಭೀತಿ ಉಂಟುಮಾಡಿದರೂ.., ಮತ್ತೆರೆಡು ನಿಮಿಷಗಳಲ್ಲಿ …ಇವನಾರೋ ..ಏನೋ.., ಕುಡಿದು ಹೆಚ್ಚಾಗಿ ಹೀಗೆ ಆಡುತ್ತಿರಬೇಕೆಂದು ಎಂದು ಅವನಿಗೆ ಅರ್ಥವಾಗದ ಹಾಗೆ ಆಂಗ್ಲ ಭಾಷೆಯಲ್ಲಿ ಇಲ್ಲಿನ ಸ್ಥಳೀಯರು ತಾವೇ ರಾಜರೆಂದು ತಿಳಿದುಕೊಂಡಿದ್ದಾರೋ..? ಏನೋ..? ತಿನ್ನಲು ಗತಿಯಿಲ್ಲದಿದ್ದರೂ ಕೋವಿಗೆ,ಗತ್ತಿಗೇನು ಕಮ್ಮಿ ಇಲ್ಲ..ಹೀಗೆ ಒಬ್ಬೊಬ್ಬರು ತಮಗನ್ನಿಸಿದ್ದ ಹೇಳತೊಡಗಿದರು.ಮತ್ತೆ ತಮ್ಮ ಪಾಡಿಗೆ ತಾವು …ಹರಟುತ್ತ ,ನಗುತ್ತ ಊಟ ಮಾಡತೊಡಗಿದರು…. ಹೀಗೆ ನಗುತ್ತಿದ್ದವನೊಬ್ಬನ ಎದೆಯ ಮೇಲೆ ಬಂದೂಕಿನ ನಳಿಕೆ ನೋಡಿ, ಎಲ್ಲರೂ ಅವಕ್ಕಾದರು.ಈಗಷ್ಟೇ ಎಚ್ಚರಿಸಿ ಹೋದವ ಬೆಂಕಿಯನುಗುಳುವ ಕಣ್ಣುಗಳಿಂದ ಎಲ್ಲರ ದಿಟ್ಟಿಸುತ ಕಿರುಚತೊಡಗಿದ..”ಕ್ಯೊಂ ಬೇ…ಸಮಝ್ ಮೆ ನಹಿ ಆತ ಕ್ಯಾ …ಕ್ಯಾ ಭೋಲಾ ತ ಮೈನೆ ..ಶೋರ್ ನಹಿ ಮಚಾನ,ಕಾಹೆ ಹಸ್ ರಹೆ ಹೋ..ಇತ್ನೆ ಧೇರ್ ಸೆ..”ಎಂದು ಟ್ರಿಗ್ಗರ್ ನ ಒತ್ತುವ ವೇಳೆಗೆ ಈ ಗಲಾಟೆ ಕಂಡು ತನ್ನ ಗಲ್ಲದಿಂದ ಎದ್ದು ಬಂದ ಮಾಲೀಕ ಕೋವಿಯನ್ನು ಮೇಲಕ್ಕೆತ್ತಿದ..ಸೋಗೆಯಂತಹ ಛಾವಣಿಯ ತೂರಿದ ಗುಂಡು,ಗುಂಡಿನ ಸದ್ದು..ಕೆಲ ಕಾಲ ಸ್ಮಶಾನ ಮೌನವ ಬೇಡಿತು.ಏನಾಯಿತು ಎಂದು ತಿಳಿಯದೇ ಇವರೆಲ್ಲ ಗರ ಬಡಿದಂತೆ ಕೂತಿರಲು..ಇದೇನೋ ದಿನ ನಿತ್ಯ ನೋಡುವ ಹಾಗೆ ಶೀಖಾದ ಮಾಲೀಕ ಕೋವಿ ಹಿಡಿದವನಿಗೆ ಸ್ವಲ್ಪ ಒರಟಾಗೇ “ನಾನು ಅವರಿಗೆ ಹೇಳ್ತೀನಿ…ನೀನು ಗಲಾಟೆ ಮಾಡದೆ ಊಟ ಮಾಡಿ ಹೊರಡು” ಎಂದು ಹೇಳಿ ,ಸಲೀಸಾಗಿ ಗಲ್ಲದ ಮೇಲೆ ಕುಳಿತ.ನೆರೆದ ಮಂದಿ ಯಾವುದೋ ಚಿತ್ರದ ರೋಚಕ ಕ್ಲೈಮಾಕ್ಸ್ ನೋಡಿ ಚಿತ್ರಮಂದಿರದಿಂದ ಹೊರಗೆ ನಡೆಯುವ ಹಾಗೆ ತಮ್ಮ ತಮ್ಮಲ್ಲಿ ಮಗ್ನರಾದರು.

ನಗು..ಆಯಸ್ಸು ಹೆಚ್ಚಿಸುವುದಂತೆ ..??

Read Full Post »


ಸಿಯರ್’ಸ್ ಟವರ್, ೧೯೭೩ ಇಂದ ೧೯೯೮ ರವರೆಗೆ ಜಗತ್ತಿನ ಅತಿ ಎತ್ತರದ ಕಟ್ಟಡವೆಂದು ಖ್ಯಾತಿವೆತ್ತ ೧೧೦ ಮಹಡಿಗಳ ಭವ್ಯ ಕಟ್ಟಡ.

ವಿಕಿಪಿಡಿಯದಲ್ಲಿ ಹೆಚ್ಚಿನ ಮಾಹಿತಿ ಇದೆ:

http://en.wikipedia.org/wiki/Sears_Towers

ಸಿಯರ್’ಸ್ ಟವರ್‍ ನಿಂದ “ದ ಲೂಪ್” ನ ವಿಹಂಗಮ ನೋಟ

Read Full Post »


ಹೀಗೆ ಬದುಕಬೇಕು ಅಂತ ಯಾವತ್ತು,ಏನು ಅಂದುಕೊಂಡಿರಲಿಲ್ಲ.ಗಾಳಿ ಬೀಸಿದ ಕಡೆ ತೂರಿಕೊಂಡು ಬಂದದ್ದು ಆಯ್ತು.ಸಮಾಧಾನ ಏನು ಅಂದ್ರೆ.., ಏನಾದ್ರು… ಆಗಿದ್ದೆಲ್ಲ ಒಳ್ಳೆದಕ್ಕೆ ಆಯ್ತು,ಇದು ಆಗಿದ್ದಕ್ಕೆ ನಾನು ಇವತ್ತು ಹೀಗಿರೋದು, ಅದು ಆಗಿದ್ದಕ್ಕೆ ನಾನು ಪಾಠ ಕಲಿತಿದ್ದು ಅಂತ ಜೀವನದುದ್ದಕ್ಕೂ ಸಮಾಧಾನ ಮಾಡ್ಕೊಂದು ಬಂದಿದ್ದು.ಈಗ ತಾನೆ ಕೂತು ತಲೆ ಕೆಡಿಸ್ಕೊಂಡು ಯೋಚನೆ ಮಾಡಿಲ್ಲ ಅಂದ್ರೆ ಈಗಲೂ ಏನು ಆಗಿಲ್ಲ ..ಎಲ್ಲಾ ಸರಿಯಾಗಿದೆ.

ಆದದ್ದೆಲ್ಲ ಒಳ್ಳೆಯದಕ್ಕೆ,ಆಗೋದೆಲ್ಲ ಒಳ್ಳೆಯದಕ್ಕೆ,ಆಗ್ತ ಇರೋದು ಒಳ್ಳೆದಕ್ಕೆ..ಪ್ರಯತ್ನ ಅಷ್ಟೆ ನಮ್ಮದು..ಗೀತಾ ಸಾರ.

ದೊಡ್ಡ ಕಿಟಕಿಗಳಿಗೆ ಮುಚ್ಚಿದ ದಪ್ಪದ ಪರದೆ ಆಗ ಈಗ ಸ್ವಲ್ಪ ಸರಿದಾಗ ಇಣುಕಿ ನೋಡಲು ಯತ್ನಿಸುತ್ತಿದ್ದ ಸೂರ್ಯ ಕಿರಣಗಳು ಎಂದಿನಂತೆ ಇಂದು ಸೂರ್ಯನಿಗೆ ಮುದ ನೀಡಲಿಲ್ಲ.ಮಲಗಿದ್ದಷ್ಟೇ..!! ನಿದ್ದೆ ಎಲ್ಲೋ ದೂರ..ಒಂದೇ ಯೋಚನೆ.
ತಾನು ಕೆಲಸ ಮಾಡುತ್ತಿದ್ದ ಐ.ಬಿ.ಎಮ್ ಕಂಪನಿಯಲ್ಲಿ ನೆನ್ನೆ ತಾನೆ ೫ ವರ್ಷ ಉತ್ತಮ ಸೇವೆಯ ಸ್ಮರಣಾರ್ಥ ಒಂದು ಸೊಗಸಾದ ಕೈ ಗಡಿಯಾರ ಕೊಟ್ಟು ಅವರ ಪಿ.ಎಮ್ ಸಾಕಷ್ಟು ಏಣಿ ಹತ್ತಿಸಿದ್ದರು.ಇದೆಲ್ಲ ಇತ್ತೀಚೆಗೆ ಅದೇನೊ “ಕಿಕ್” ಕೊಡೊಲ್ಲ.ಒಳ್ಳೆ ಸಂಬಳ, ನಿನ್ನ ಎಷ್ಟು ಅಂತ ಕೇಳೋರಿಗೆ ಅಷ್ಟೆ.., ಯಾವತ್ತು ನನ್ನ ಸಂಬಳ ನನಗೆ ಒಳ್ಳೆಯದು ಅಂತ ಅನಿಸಲಿಲ್ಲ.ಎಲ್ಲ ಒಂದೊಂದು,ಎರಡು ವರ್ಷಕ್ಕೆಲ್ಲ ಕಂಪೆನಿ ಬದಲಾಯಿಸ್ತ ಇದ್ದರು ..ನಾನಿನ್ನು ಯಾಕೆ ಇಲ್ಲಿ ಗೂಟ ಹೊಡ್ಕೊಂಡು ಕೂತಿದಿನಿ ಅಂತ ಆಗಾಗ ಯೋಚನೆ ಮಾಡ್ತ ಇದ್ದೆ. ದುಡ್ಡು ಮಾಡೊಕೆ ಇರೊಡು ಎರಡೇ ಸೀದ ದಾರಿ,ಒಂದು ಕೆಲಸ ಬದಲಾಯಿಸ್ತ ಇರು..ಪ್ರತಿಯೊಂದು ಚೇಂಜ್ ಗೆ ಏನಿಲ್ಲ ಅಂದ್ರು 30% ಅಂತು ಹೈಕ್ ಸಿಕ್ಕೇ ಸಿಗುತ್ತೆ.ಇನ್ನೊಂದು ಶೇರ್ ಮಾರ್ಕೆಟ್…ಬೆಳಿಗ್ಗೆ ಇಂದ ಸಂಜೆಯವರ್ಗೆ moneycontrol ವೆಬ್ಸೈಟ್ ನಲ್ಲಿ ಯಾವ ಯಾವ ಶೇರ್ ಹೇಗೆ ಮೂವ್ ಆಗ್ತ ಇದೆ ಅಂತ ನೋಡೋದು ಹಾಗೆ ಐ.ಸಿ.ಐ.ಸಿ.ಐ ಡೈರೆಕ್ಟ್.ಕಾಮ್ ನಲ್ಲಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ವರ್ಗಾಯಿಸೋದು.

ಕೆಲ್ಸಕ್ಕೆ ಹೊಸದಾಗಿ ಸೇರಿದಾಗ 2.5 ಲಕ್ಷ ವರ್ಷಕ್ಕೆ ಸಂಬಳ..ಅಮ್ಮ ಇನ್ನು ಸರ್ವಿಸ್ ನಲ್ಲಿ ಇದ್ದರೂ ಅವರಿಗೆ ಇನ್ನು ಅಷ್ಟು ಸಿಗೊಲ್ಲ..ಆಹಾ ಏನು ಆನಂದ ಅಮ್ಮ,ಅಪ್ಪ ದುಡ್ಡು ಪೋಲು ಮಾಡಬೇಡ….ಉಳಿಸಿ ಮನೆನೋ,ಸೈಟೋ ತಗೋ ಬೇಗ,ದಿನ ದಿನಕ್ಕು ಏರ್ತಾನೆ ಇದೆ ಬೆಲೆ ಅಂದಾಗ ಆಯ್ತು ಅಂತ ಸುಮ್ಮನಾದೆ.ಮನೆ ಸಾಲ,ಆ ಕಾರ್ಡು..ಈ ಕಾರ್ಡು,ಮನೆ ತಗೊಂಡ ಮೇಲೆ ಕಾರಿಗೆ ಸಾಲ,ಒಂದೇ ಒಂದು ತಿಂಗಳು ಸಂಬಳ ಬಂದಿಲ್ಲ ಅಂದ್ರೆ ದೇವರೆ ಕಾಪಾಡಬೇಕು.ತಾನು ಕೆಲಸ ಮಾಡುತ್ತಿದ್ದ ಮೈನ್ ಫ಼್ರೇಮ್ ನಲ್ಲಿ ಇತ್ತೀಚೆಗೆ ಕೆಲ್ಸಾನು ಕಮ್ಮಿನೇ.ಬೇರೆ ಯಾವದಾದ್ರೂ ಟೆಕ್ನಾಲಜಿಗೆ ಹೋಗೊಣ ಅಂದ್ರೆ ಮತ್ತೆ ಕೂತು ಎಲ್ಲ ಓದಬೇಕು.ಮನೆಗೆ ಹೋಗುತ್ತಿದ್ದ ಹಾಗೆ ಅರ್ಧ ಸಮಯ ಮುದ್ದಿನ ಮಗಳು ಪ್ರೀತಿ ಜೊತೆ ಕಳೆದು ಹೋಗುತ್ತೆ ಇನ್ನರ್ಧ ಅರ್ಧಾಂಗಿ ವಲ್ಲಿ.

ಹೇಗಾದ್ರು ಮಾಡಿ ಸ್ವಲ್ಪ ಹೆಚ್ಚಿನ ಖರ್ಚಿಗೆ ದುಡ್ಡು ಮಾಡಬೇಕು, ಎಲ್ಲಾರು ಏನೇನೋ ಮಾಡ್ತಾರೆ ಅಂತ ಯೋಚಿಸ್ತ ಇದ್ದ ಸಮಯದಲ್ಲಿ ಕಾಲೇಜ್ ಸ್ನೇಹಿತ ಸಾಯಿ ಕೃಷ್ಣನ ಫೋನ್ ಬಂದಿತ್ತು.ಕಾಲೇಜಿನಲ್ಲಿ ಆರಾಮಾಗಿ ಓಡಾಡ್ಕೊಂಡು ಇದ್ದ,ಬಹಳ ವರ್ಷದ ಮೇಲೆ ಅದೇನು ಈಗ ನೆನೆಸ್ಕೊಂಡಿದ್ದಾನೆ..ಮಾತಡ್ತ ತಿಳಿದಿದ್ದು.ಅವನದೆ ಆದ ಒಂದು ಕನ್ಸಲ್ಟಿಂಗ್ ಕಂಪೆನಿ ಶುರು ಮಾಡಿದ್ದಾನಂತೆ,ಹೈದರಬಾದ್ ನಲ್ಲಿ.ಬಾಡಿ ಶಾಪಿಂಗ್ ಅದು ಇದು ಹೀಗೆ ಹೇಳ್ತ ಇದ್ದೆ.ಫೋನ್ ಮಾಡಿದ್ದರ ಹಿನ್ನೆಲೆ ಕೊನೆಯಲ್ಲಿ ಬಂತು.ಅವನ ಬಳಿ ಸಾಕಷ್ಟು ಮೈನ್ ಫ಼್ರ್‍ಏಮ್ ಕೆಲಸಗಳಿಗೆ ಬೇರೆ ಬೇರೆ ಕಂಪೆನಿಗಳಿಂದ ಅವಕಾಶಗಳ ಪಟ್ಟಿ ಇತ್ತು,ಹಾಗೇ ಮೈನ್ ಫ಼್ರ್‍ಏಮ್ ನಲ್ಲಿ ಕೆಲಸ ಮಾಡಲು ಇಚ್ಚಿಸುವ,ಮೈನ್ ಫ಼್ರ್‍ಏಮ್ ನೋಡಿರದ ಅಭ್ಯರ್ಥಿಗಳು ಇದ್ದರು.’ಅದೇನು ದೊಡ್ಡ ವಿಷಯ ಅಲ್ಲ,ನಾನು ನೋಡಿರಲಿಲ್ಲ ಆದರೆ ನಾನು fresher ಆಗಿದ್ದೆ,ಇವರು experience ಇರುವವರು ಅಷ್ಟೇ ವ್ಯತಾಸ’.ಈ ಅಭ್ಯರ್ಥಿಗಳಲ್ಲಿ ಕೆಲವು ಅಭ್ಯರ್ಥಿಗಳ ದೂರವಾಣಿ ಕರೆಗಳನ್ನು ನಾನು ತೆಗೆದುಕೊಳ್ಳಬೇಕೆಂದು ಅವನ ಕೋರಿಕೆ.ಇದನ್ನೆಲ್ಲ ಕೇಳಿದ್ದೆ,ನೋಡಿದ್ದೆ ಆದರೆ ವ್ಯಕ್ತಿಗತವಾಗಿ ಇದನ್ನ ವಿರೋಧಿಸಿತ್ತಿದ್ದೆ.ಸ್ವಲ್ಪ ಖಾರವಾಗೆ ಹೇಳಿದೆ..ಈ ವಿಷ್ಯಕ್ಕಾದ್ರೆ ಮತ್ತೊಮ್ಮೆ ಫೋನ್ ಮಾಡಬೇಡ ಅಂತ.

ಹೊಂಚಿ ಹಾಕಿ ಕಾಯುತ್ತಿದ ವಿಧಿಗೆ ಒಂದು ಸುವರ್ಣಾವಕಾಶ,ಈ ಸಂಭಾಷಣೆಯ ನಾಲ್ಕು ದಿನಕ್ಕೆ ವಿಪರೀತವಾದ ಜ್ವರ.., ಎಲ್ಲ ಪರೀಕ್ಷೆಗಳಾದ ಮೇಲೆ ತಿಳಿದಿದ್ದು ವಿಷಮ ಶೀತ ಜ್ವರ ಅಂತ.ಒಂದೆರೆಡು ತಿಂಗಳು ರೆಸ್ಟ್ ಅನಿವಾರ್ಯ ಅಂತ ಸಲಹೆ.
ರಜ ಹಾಕಿ ಮನೆಗೆ ಬಂದು ಕೂಳಿತರೆ ಮೂರು ದಿನಕ್ಕೆ ಜ್ವರಕ್ಕಿಂತ ಹೆಚ್ಚಿನ ಭಾದೆ ಸುಮ್ಮನೆ ಕೂರಬೇಕಾದ್ದು,ಕೆಲ್ಸ ಇದೆಯೋ ಇಲ್ಲವೋ ಆಫ಼ೀಸ್ ಗೆ ಹೋಗಿ ಬಂದರೆ ಏನೊ ಸಮಾಧಾನ,ಬೇರೆ ಪ್ರಾಜೆಕ್ಟ್ ನವರಿಗೆ “ಮನೆಯಿಂದ ಕೆಲಸ” ಮಾಡುವ ಅವಕಾಶವಿತ್ತು ..ನನಗು ಅದು ಇಲ್ಲವಲ್ಲ ..ಕೊರಗ್ತ ಇದ್ದಾಗ ನಿಜವಾದ ಭಾದೆ ತೋರತೊಡಗಿತ್ತು.ಮುಂದಿನ ತಿಂಗಳ ಇ.ಎಮ್.ಐ (ಮಾಸಿಕ ಕಂತು) ಗಳನ್ನ ಹೇಗೆ ಕಟ್ಟೊದು ಅಂತ, ಮೋಬೈಲ್ ಬಿಲ್ಲ್ ಇಂದ ಹಿಡಿದು ಮನೆ,ಕಾರು ಎಲ್ಲ ಸಾಲಗಳು ಎಲೆಕ್ಟ್ರಾನಿಕ್ ಕ್ಲಿಯರೆನ್ಸ್,ನನ್ನ ಬ್ಯಾಂಕ್ ಅಕೌಂಟ್ ನಿಂದ ಸೀದ ಆ ಖಾತೆಗಳಿಗೆ ಜಮ ಆಗುತ್ತೆ.ಏನು ಮಾಡೊದು..??

ಸಾಯಿ ಕೄಷ್ಣನ ನೆನಪಾಯಿತು,ಬೇರೆ ಏನು ನನ್ನ ಕೈಲಿ ಯೋಚನೆ ಮಾಡೊಕೆ ಆಗ್ತ ಇಲ್ಲ ನನಗೆ ಅನಿಸಿ ಅವನಿಗೆ ಕರೆ ಮಾಡಿದಾಗ ಅವನಿಗೂ ಆಶ್ಚರ್ಯ.ಅದು ಇದು ಮಾತಾಡ್ತ ನಾನೇ ಕೇಳಿದೆ ಎಷ್ಟು ಕೊಡ್ತಿಯ ಒಬ್ಬ ಅಭ್ಯರ್ಥಿಗೆ ಅಂತ.ಬೇರೆಯವರಾಗಿದ್ರೆ ನನ್ನ ಮಾರ್ಜಿನ್ ಹೆಚ್ಚಿಸಿ ಹೇಳ್ತ ಇದ್ದೆ ನೀನು ನನ್ನ ಒಳ್ಳೆಯ ಸ್ನೇಹಿತ..?? ನಿನಗೆ ನಾನು ಅಭ್ಯರ್ಥಿಯ ಒಂದು ತಿಂಗಳ ಸಂಬಳ ಕೊಡುತಿನಿ ಅಂದ.

ಇಲ್ಲಿಯವರೆಗೆ ಮೂರು ಅಭ್ಯರ್ಥಿಗಳ ದೂರವಾಣಿ ಸಂದರ್ಶನ ಕರೆಗಳು ಮುಗಿದು,ಮೂರು ಜನಕ್ಕೂ ಕೆಲಸವು ಆಗಿತ್ತು..ನನ್ನ ಎರಡು ತಿಂಗಳ ಭಾದ್ಯತೆಗಳನ್ನ ನೀಗಿಸುವುದು ಸುಲಭವಾಗಿತ್ತು.ಆದರೆ ಇಷ್ಟು ಸುಲಭವಾಗಿ ದುಡ್ಡು ಮಾಡಬಹುದ..? ಅಂತ ಬೆರಗಾಗಿತ್ತು.ಬೇಡ ಏನೋ ಕಷ್ಟ ಅಂತ ಒಲ್ಲದ ಕೆಲಸ ಮಾಡಾಯ್ತು ಮತ್ತೇಕೆ ಅಂತ ಎಲ್ಲೊ ಯಾರೊ ದೂರದಲ್ಲಿ ಹೇಳಿದಂತಿದ್ದರೂ…ವಲ್ಲಿಯೂ ಸೇರಿದಂತೆ ಎಲ್ಲಾ ಅದ್ರಲ್ಲೇನು ತಪ್ಪು,ಯಾಕೆ ಸುಮ್ಮನೆ ಬರೋದು ಕಳ್ಕೊತಿಯ ಅಂತ “ನೀತಿ ಪಾಠ” ಮಾಡಲು ಶುರು ಮಾಡಿದ್ದರು.

ಸಾಯಿ ನೆನ್ನೆ ಮತ್ತೆ ಕರೆ ಮಾಡಿದ್ದ,ನಾನು ಒಲ್ಲೆ ಅಂದಾಗ ನಾನು ದುಡ್ಡು ಕಡಿಮೆ ಅಂತ ಹೀಗೆ ಮಾತಡ್ತ ಇದೀನಿ ಅಂತ ಮತ್ತೆ ಮತ್ತೆ ಕರೆ ಮಾಡಿ ಸ್ವಲ್ಪ ಸ್ವಲ್ಪ ಹೆಚ್ಚಿನ ಮೊತ್ತ ಸೇರಿಸ್ತ ಇದ್ದ.ಈ ಭಾರಿಯ ಅಭ್ಯರ್ಥಿಗೆ ನಮ್ಮದೇ ಪ್ರಾಜೆಕ್ಟನಲ್ಲಿ ಅವಶ್ಯಕತೆ ಇರುವುದಂತೆ…ಸಂದರ್ಶನ ತಗೊಳ್ಳೊದು ನಮ್ಮ ಟಿ.ಎಲ್ ಎಂಬುದು ತಿಳಿಯಿತು..ನನಗೆ ಅರಿಯದ ಹಾಗೆ ಯಾವ ಜಾಗ ಖಾಲಿ ಇದೆ ..??? ನನ್ನ ಧ್ವನಿ ನಮ್ಮ ಟಿ.ಎಲ್ ಗುರುತಿಸಲಾರೆನೆ…??

ಜಯಂತ್

Read Full Post »


ಬರ್‍ತಾ ಬರ್‍ತಾ “ಮಲ್ಯರ” ಕುದುರೆ “ತೂರಾಡ್ತ” ಇತ್ತಂತೆ.

ಅಜ್ಜಿಗೆ ಅರಿವೆ ಕಾಟ
ಮಗಳಿಗೆ “ಅರಿವಿರದ” ಕಾಟ

ಅಜ್ಜ ಹಾಕಿದ ಆಲದಮರಕ್ಕೆ
ಪಾಶ್ಚಾತ್ಯ ಗೊಬ್ಬರ ಹಾಕಿದರಂತೆ

ಉಂಡೂ ಹೋದ,ಪ್ಲೇಟೂ ತಗೊಂಡು

ಯಾಕೆ ಒಲ್ಲೆ ಮಗಳೆ ಅಂದ್ರೆ
“ಶಟಲ್” ಹೋದ್ರೆ “ಎಕ್ಸ್ಪಪ್ರೆಸ್” ಅಂದಳಂತೆ.

ಹೆಂಡ ಸಾರಾಯಿ ಸಹವಾಸ
ಮತ್ತು ಇಳಿಯೋ ತನಕ ಸ್ವರ್ಗವಾಸ

ಚಿಂತೆ ಇಲ್ಲದವರಿಗೆ ಹೊಸೊರು ರೋಡ್ ನಲ್ಲಿ ನಿದ್ದೆಯಂತೆ

ಉದ್ಯೋಗವಿಲ್ಲದ “ಬಡಗಿ” ಕಂಪ್ಯೂಟರ್ ಕೋರ್ಸ್ ಸೇರಿದನಂತೆ

ಅಲ್ಪನಿಗೆ ಆನ್ ಸೈಟ್ ಅಸ್ಸೈನ್ ಮೆಂಟ್ ಸಿಕ್ಕಿದ್ರೆ, ವೀಸಾ ಗೆ ಫ಼್ರ್‍ಏಮ್ ಹಾಕಿಸಿ ಇಟ್ಟನಂತೆ

Read Full Post »


ಕಣ್ಣು ಮುಚ್ಚಿದರೆ ತಲೆ ಚಿಟ್ಟೆನಿಸುವ ಯೋಚನೆಗಳು..ಒಂದಾ..,ಎರಡಾ..? ಏನೋ ಒಂದು ಸಮಾಧಾನ ಮಾಡ್ಕೊಂಡು ಬಿಡೋಣ ಅನ್ನೋದಿಕ್ಕೆ. “ಅಲ್ಲ ನನಗೆ ಯಾಕೆ ಬೇಕಿತ್ತು ..? ಏನಿದು ತಿಕಲು..?” ಅಂತ ಸಮೀರ ಒಂದೆರ್‍ಎಡು ತಾಸಿನಿಂದ ತನ್ನ Flatಲ್ಲಿ ದಿಂಬಿಗೆ ತಲೆ ಕೊಟ್ಟು ತಲೆ ಕೆಡಿಸಿಕೊಳ್ತಾನೆ ಇದ್ದ.”ಪದ್ಮನಾದ್ರೂ ಇದ್ದಿದ್ರೆ ಈ ತಲೆನೋವು ಇರ್ತಿರ್ಲಿಲ್ವೇನೊ” ಅಂತ ಹಳಹಳಿಸ್ತಾನೆ ಇದ್ದ.

ಪ್ರಪಂಚದ ಕಣ್ಣಿಗೆ ಸಮೀರ ಮಲ್ಟಿನ್ಯಾಶನಲ್ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್.ಹೆಸರಾಂತ ಬಿಲ್ಡರ್ ನ ಹೆಸರಿಲ್ಲದ Flat…ಈಗ ಇವನ ಹೆಸರು ಮನೆ ಮುಂದೆ.ದೊಡ್ಡ ಕಾರು,ಸಣ್ಣ ಸಂಸಾರ.ಹೆಂಡತಿ ಪದ್ಮಲತ ಮತ್ತೊಂದು ಮಲ್ಟಿನ್ಯಾಶನಲ್ ಕಂಪನಿಯಲ್ಲಿ ಪ್ರಾಜೆಕ್ಟ್ ಎಂಜಿನಿಯರ್.ಓದೋದು,ಕೆಲಸ ಬಿಟ್ಟರೆ ಬೇರೆ ಪ್ರಪಂಚ ಇದೆ ಅಂತ ಇತ್ತೀಚಿನವರೆಗೂ ಸಮೀರನಿಗೆ ತಿಳಿದಿರಲಿಲ್ಲ.

ಅಪ್ಪ,ಅಮ್ಮ ಡಾಕ್ಟರ್,ಗುಲಬರ್ಗಾದಲ್ಲಿ ಅವರದೇ ಹೆಸರಾಂತ ನರ್ಸಿಂಗ್ ಹೊಂ.ಮಗ ಓದಿ ಡಾಕ್ಟರ್ ಆಗಿ ಮನೆತನದ ಹೆಸರು ಉಳಿಸಿ,ಬೆಳೆಸಲಿ ಅಂತ ಒಳ್ಳೆ ಶಾಲೆ,ಕಾಲೇಜು ಸೇರಿಸಿ..,ಮುತುವರ್ಜಿಯಿಂದ ಸಾಕಿ,ಕಲಿಸಿ ಕೊನೆಗೂ ಇವನು ಎಂಜಿನಿಯರಿಂಗ್ ಮಾಡ್ತೀನಿ ಅಂದ ದಿನ ತಡೆಯಲಾಗದಷ್ಟಲ್ಲದಿದ್ದರೂ,ಆಶಾಗೋಪುರ ನುಚ್ಚುನೂರಾಗಿದ್ದಕ್ಕೆ ವ್ಯಥೆ ಪಟ್ಟರು.ಕೊಟ್ಟ ಒಂದು ನೋವನ್ನು ಸಮೀರ ಬಹುಬೇಗ ಮಾಯವಾಗಿಸಿದ.ಸುರತ್ಕಲ್ ನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರತಿವರ್ಷವೂ ಎಲ್ಲಾ ಪರೀಕ್ಷೆ,ಸ್ಪರ್ಧೆಗಳಲ್ಲಿ ಅದ್ವೀತಿಯನೆನಿಸಿಕೊಂಡ.ಮೊದಲನೆ ಬೆಂಚಿನ ಗೆಳೆಯರು,ಲೆಕ್ಚರರ್ ಗಳ ಪ್ರೀತಿ ಪಾತ್ರ.ಬಹುಪಾಲು ಹಾಸ್ಟೆಲ್ ನ ಹುಡುಗರಿಗೆ ಮಾತ್ರ ನಾಲಾಯಕ್ಕು.”ಓದೋದು ಬಿಟ್ಟು ಬೇರೇನು ಗೊತ್ತಿಲ್ಲದ ಮುಂಡೇದು..”ಅಂತ ಯಾರದ್ರೂ ಎದುರಿಗೆ ಹೇಳಿದ್ರು ನಕ್ಕು ಸುಮ್ಮನಾಗುತ್ತಿದ್ದ.ಎಷ್ಟು ಬಾರಿ ಯೋಚಿಸಿದ್ರೂ ಓದೋದು ಬಿಟ್ರೆ ಬೇರೆ ಏನು ಇರಬಹುದು ಅಂತ ಹೊಳೀತಾ ಇರಲಿಲ್ಲ..ಹಾಗೆನಾದ್ರೂ ಹೊಳೆದ್ರು..ಮನಸ್ಸಿಗೆ ಹಿಡಿತಾ ಇರಲಿಲ್ಲ.

ಆರನೇ ಸೆಮಿಸ್ಟರ್ ಮುಗೀತಿದ್ದ ಹಾಗೆ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಮೊದಲನೇ ದಿನದ ಮೊದಲ ಕಂಪನಿಯಲ್ಲಿ ಕೆಲಸ.ಅದೇ ಕಂಪನಿಯಲ್ಲಿ ಇಂದಿಗೆ ಐದು ವರ್ಷ.ಐದು ವರ್ಷದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಸಮೀರನಿಗಲ್ಲದೆ ಬೇರೆಯವರಿಗೆ ಕಬ್ಬಿಣದ ಕಡಲೆ.ಕಾಲೇಜಿನ ವಿದ್ಯಾಭ್ಯಾಸದಷ್ಟೇ ಆಸಕ್ತಿ,ಶ್ರದ್ಧೆ..ಮುತುವರ್ಜಿಯಿಂದ ಕೆಲಸ..ಸೂಕ್ಷ್ಮ ಕಣ್ಣು,ಪ್ರಭಾವಶೀಲ್ ವ್ಯಕ್ತಿತ್ವ,ನೇರ ನಡೆ ನುಡಿ…,ಯಾವುದೇ Office ಪೊಲಿಟಿಕ್ಸ್ ನಲ್ಲಿ ಭಾಗಿಯಾಗದಿರುವುದು ಇವೆಲ್ಲಾ ಒಂದಷ್ಟು ಅಂಶಗಳು.ಈ office ಪೊಲಿಟಿಕ್ಸ್ ಅದೆಲ್ಲ ಸಮೀರನಿಗೆ ಅರ್ಥ ಆಗೊಲ್ಲ ಅಂತ ಅಲ್ಲ.ಅದೆನೋ ಅವನು ಬೆಳೆದು ಬಂದ ವಾತಾವರಣ,ತುಂಬಿಕೊಂಡ ಜೀವನ ಮೌಲ್ಯಗಳು ಇವೆಲ್ಲ, ಅವನನ್ನು ಇದರೆಲ್ಲದರಿಂದ ದೂರವಿಟ್ಟಿದ್ದವು.
ಕೆಲಸ ಸೇರಿದ ಮೂರು ವರ್ಷಕ್ಕೆ ಮದುವೆ,ಮನೆಯಲ್ಲಿ ನೋಡಿದ ಹುಡುಗಿ ಪದ್ಮಲತ.ಇನ್ನು ಮದುವೆಗೆ ನಾನು ರೆಡಿ ಇಲ್ಲ ಅಂತ ಸಮೀರನಿಗೆ ಅನಿಸಿದ್ದರೂ ಅಪ್ಪ ಅಮ್ಮನ ಒತ್ತಾಯಕ್ಕೆ ಮಣಿದು ಹೂಂ ಅಂದಿದ್ದ.ಹೇಳಿ ಮಾಡಿಸದಂತಹ ಜೋಡಿ ಅಲ್ಲದಿದ್ದರು, ದಿನ ಕಿರಿಕಿರಿ ಇಲ್ಲದ ಜೀವನ.ಸಮೀರನು ಅವಳಿಂದ ಹೆಚ್ಚಿನದೇನನ್ನು ನಿರೀಕ್ಷೆ ಮಾಡದೆ ಇದ್ದರಿಂದ,ಪದ್ಮಳು ಇವನಂತೆ ಕೆರಿಯರ್ oriented ಹುಡುಗಿ ಆದ್ದರಿಂದ ಇಬ್ಬರ ಮಧ್ಯೆ ಸಣ್ಣ ಪುಟ್ಟ ವಿಷಯದಲ್ಲಿ ತಕರಾರು ಏನು ಅಷ್ಟಿರಲಿಲ್ಲ.ಅಡುಗೆ ಮಾಡಿದ್ರೆ ಮಾಡಿದಂತೆ, ಇಲ್ಲದಿದ್ದರೆ ಇಬ್ಬರು ಹೊರಗಡೆನೊ,officenallo ತಿನ್ತಾ ಇದ್ದರು.ಮನೆ ಊಟ,ತಿಂಡಿ,ಕಾಡು ಹರಟೆಗಿಂತ ಜೀವನ ದೊಡ್ಡದು,ಕೆಲಸ ಮುಖ್ಯ ಅಂತ ನಂಬಿದ ಇಬ್ಬರು.ಇಬ್ಬರ ಅಂದುಕೊಂಡದ್ದೆ ಸರಿ ಎನಿಸುವ ಹಾಗೆ ಭ್ರಮೆ ಹುಟ್ಟಿಸಿದ್ದ ಕೆಲಸ.
ಸರಸ ಸಲ್ಲಾಪ ಅಂದ್ರೆ ಆಫ಼ೀಸ್ ವಿಷ್ಯದ ಚರ್ಚೆ..ಆ Technology ಹಾಗೆ ಈ Technology ಹೀಗೆ..ಸುಖವಾಗೆ ಇದೀವಿ ಅನ್ತ ಇಬ್ಬರು ಭಾವಿಸಿದ್ದರು.ಅಪರೂಪಕ್ಕೆ ಒಮ್ಮೆ ಸಮೀರನ ತಂದೆ ತಾಯಿನೊ,ಪದ್ಮನ ಕಡೆಯವರೊ ಬಂದ್ರೆ ಆ Hotelnalli ಅದು ಚೆನ್ನಾಗಿರುತ್ತೆ,ಈ Hotelnaಲ್ಲಿ ಇದು ಚೆನ್ನಾಗಿರುತ್ತೆ ಅಂತ ಕಾರ್ ನಲ್ಲಿ ಕರ್ಕೊಂಡು ಹೋಗಿ ಬಂದ್ರೆ ಅವರಿಗು ಸಂತೊಶ..ಇವರಿಗು ತಮ್ಮವರೊಡನೆ Quality Time ಕಳೆದದ್ದಾಕ್ಕಗಿ ನೆಮ್ಮದಿ.ಬಂದವರು ಎರಡು ದಿನ ಇದ್ದು ಇವರು ತುಂಬ ಅನ್ಯೋನ್ಯವಾಗಿ ಇರೊದನ್ನ ನೋಡಿ ಹೊಟ್ಟೆ ತಣ್ಣಗಾಗಿ ಹೊರಡುವರು.
ಮಕ್ಕಳು ಬೇಡ ಇಲ್ಲದ ಜವಾಬ್ದಾರಿ ,ಈಗಲೇ ಯಾಕೆ ಅಂತ ಇಬ್ಬರು Decide ಮಾಡಿ ಆಯ್ತು ಇನ್ನೊನ್ದು ೨-೩ ವರ್ಷದ ಮೇಲೆ ನೋಡೋನ ಅದಕ್ಕೆನು ಅರ್ಜೆಂಟ್.!!.ಅಪ್ಪ ಅಮ್ಮನು “ಮಕ್ಕಳು ಒದಿದದವರು..ಅದಕ್ಕು ಹೆಚ್ಚಾಗಿ ಚೆನ್ನಾಗಿ ದುಡಿತ ಇರೋರು, ಅವರ ಜೀವನ ಅವರಿಗೆ ಚೆನ್ನಾಗಿ ಗೊತ್ತು” ಅಂತ ತಮ್ಮ ಮೊಮ್ಮಕ್ಕಳ ಕಾಣುವ ಆಸೆಗೆ ಕಡಿವಾಣ ಹಾಕ್ತ ಇದ್ದರು.ಈ ಮಧ್ಯೆ ಸಮೀರನಿಗು ಶಾರ್ಟ್ ಟರ್‍ಮ್ ಆನ್ಸೈಟ್ assignment ಅಂತ US,UK ಹೀಗೆ ಎರಡೆರಡು, ಮೂರು ಮೂರು ತಿಂಗಳು ಓಡಾಟ ನಡೆದೆ ಇತ್ತು.ಎರಡು ದಿನಕ್ಕೊಮ್ಮೆ ಪದ್ಮಳಿಗೆ ಫೋನ್ ಮಾಡಿ “ಹೇಗಿದಿಯ..?ಕೆಲಸ ಹೇಗೆ ನಡಿತ ಇದೆ..?credit card ಬಿಲ್ಲ್ ಕಟ್ಟಿದ..?” ಹೀಗೆ ಒಂದಷ್ಟು ಸವಿ ಸವಿ ನುಡಿ ನುಡಿದು,ತನ್ನ ಕೆಲಸವಾದಂತೆ ಕುಶಿಯಾಗುತ್ತಿದ್ದ.”ಬರುತ್ತ ಅಪ್ಪನಿಗೊಂನ್ದು ಒಳ್ಳೆಯ Mobile,ತಮ್ಮನಿಗೆ ಒಂದು ipod” ಹೀಗೆ ಒಂದು ಪಟ್ಟಿ ಕೊಟ್ಟು ಪದಮಳು ನಲಿಯುತಿದ್ದಳು.

ಅಗಾಗ ಏನೋ ಒಂದು ರೀತಿಯ ಒಂಟಿತನ,ಎಲ್ಲಾ ಇದ್ದು ಏನೂ ಇರದ ಶೂನ್ಯತೆ ಇಬ್ಬರನ್ನು ಕಾಡ್ತಾ ಇತ್ತು..ಅದಕ್ಕೆ ಹೆಸರಿಡಲಾಗದೆ ಅದನ್ನು ಗುರುತಿಸಿಕೊಳ್ಳಲಾಗದೆ..ಏನೆನೊ ಇವೆಲ್ಲ ಹುಚ್ಚು ಯೋಚನೆಗಳು ಎಲ್ಲ ಸರಿಯಾಗೆ ಇದೆ ಅಲ್ಲ ಅಂತ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿ ಮನದ ತುಮುಲವನ್ನು ಅದುಮಿಡುತಿದ್ದರು.

ಹೀಗೆ ಆಗುತ್ತೆ ಅಂತ ಸಮೀರ ಕನಸಿನಲ್ಲೂ ಎಣಿಸಿರಲಿಲ್ಲ.US onsite assignment ಇನ್ದ ಬಂದ ಎರಡು ತಿಂಗಳಿಗೆ ಪದ್ಮಳ onsite assignment ತಯರಿ ನಡೆದಿತ್ತು..ಅವಳ ಮೊದಲ onsite ಸಾಕಷ್ಟು ಎಕ್ಸೈಟ್ ಆಗಿದ್ದಳು..ಸಮೀರನಿಗೆ ಯಾವುದೆ ಅಭ್ಯಂತರ ಇಲ್ಲ ಅನಿಸಿದ್ರು,ಅದೆನೊ ಇತ್ತೀಚೆಗೆ ತನ್ನ ಮನಸ್ಸೆಕೊ ಸರಿ ಇಲ್ಲ, ಇವಳು ಇದ್ರೆ ಚೆನ್ನಾಗಿರುತ್ತೆನೊ ಅನಿಸ್ತ ಇದ್ರು ಹೇಳಿಕೊಳ್ಳಲಿಲ್ಲ.ಪದ್ಮ ಹೊರಡುವಾಗ “Take Care” ಎನ್ನಲು ಮರೆಯಲಿಲ್ಲ.6 ತಿನ್ಗಳ assignment,ಒಂಟಿಯಾಗಿ ಬದೊಕೊದು ಅಭ್ಯಾಸವೆನೋ ಇತ್ತು ,ಈಗ ಇವಳಿಗೆ ಹೊಂದುಕೊಂಡ ಮೇಲೆ ಸ್ವಲ್ಪ ಕಷ್ಟ ಆಗಬಹುದೆನೊ..??

ಒಂದು ನಾಲ್ಕು ದಿನ ಪದ್ಮ ಇಲ್ಲದ ದಿನಗಳು ಸ್ವಲ್ಪ ಏನು ..ತುಂಬಾನೇ ಕಷ್ಟ ಅನಿಸ್ತಾ ಇತ್ತು..ದಿನಗಳು ಹೇಗೊ ಕಳೆದರೂ,ರಾತ್ರಿಗಳು..,ಇವನ ಒಂಟಿತನ,ತಬ್ಬಲಿ ಭಾವನೆಗಳನ್ನ ಕೆದಕಿ ಕೆದಕಿ ತಾಳಲಾರದ ನೋವನ್ನುಂಟಮಾಡ ಹತ್ತಿದವು.ರಾತ್ರಿಗಳ ನೋವು,ನಿದ್ದೆ ಇರದ ಕಣ್ಣು,ಸೋತ ದೇಹ,ನಿತ್ರಾಣವಾದ ಚೇತನವಾಗಿ ಹಗಲುಗಳು ಭೀಕರವಾದಂತೆ ಭಾಸ.ಸಮೀರನಿಗು ನಂಬುವುದು ಸ್ವಲ್ಪ ಕಷ್ಟ ಅನಿಸ್ತ ಇತ್ತು,”ಪದ್ಮಳ ಜೊತೆ ನನಗೆ ನಿಜವಾಗ್ಲು ಅಷ್ಟೊಂದು attachment ಇದಿಯ ಅಥವ ಇಷ್ಟು ದಿನ ಅವಳ ಜೊತೆ ಇದ್ದು ಈಗ ಇರದಕ್ಕೆ ಈ ಸಂಕಟನಾನ ?” ಅರಿಯಲು ಯತ್ನಿಸಿದಷ್ಟು ನಿಗೂಢವಾಗ್ತ ಇತ್ತು.

ಇಷ್ಟು ದಿನ ಕಾಡುತ್ತಿದ್ದ ಹೆಸರಿಡಲಾಗದ….ಬೆಚ್ಚನೆ Bedsheetನಲ್ಲಿ ಇಲಿಯೊ ಹೆಗ್ಗಣನೊ ನುಸುಳಿ ಕಂಗೆಡಿಸುವಂಥ ಕಳವಳಗಳ ಜೊತೆ ಈಗ ಇದೊಂದು ಬೇರೆ tension.”ಯಾಕೊ ಯಾವ ಕೆಲ್ಸಾನು ಸರಿ ಹೋಗ್ತಾ ಇಲ್ಲ..ಎಲ್ಲರಿಂದ,ಎಲ್ಲದರಿಂದ ಒಂದಷ್ಟು ದಿನ ದೂರ ಎಲ್ಲಾದರು ಓಡಿ ಹೊಗಬೇಕು” ಅಂತ ಮನಸ್ಸು ಸಾರಿ ಸಾರಿ ತಿವಿದು ತಿವಿದು ಚುಚ್ಚಿದರೂ,ಸಮೀರನ ವಿವೇಕ,ಸ್ಥಿತಪ್ರಜ್ನೆ ಅವನನ್ನ ಮತ್ತೆ ಎಂದಿನ ಯಾಂತ್ರಿಕ ಜೀವನಕ್ಕೆ ಆಣಿಗೊಳಿಸುತ್ತ ಇದ್ದವು.ಎಷ್ಟು ದಿನ ನಡೆದಿತು ಹೋರಾಟ..?ಹೋರಾಟ ಹೊರಗಿನಾದರೆ..-ಗೆಲುವಿನಲ್ಲೆ ನಲಿವು.ಮನದೊಳಗಿನ ಹೋರಾಟದಲ್ಲಿ ಗೆಲುವಿನಲ್ಲು-ನಲಿವು,ನೋವು, ಸೋಲಿನಲ್ಲು – ನಲಿವು,ನೋವು..

ಉದುರಿ ಉದುರಿ ಬೀಳುತಿದ್ದ ಅವನ ಸಂಯಮ,ತಾಳ್ಮೆ..ಎಲ್ಲವನ್ನು ಕಷ್ಟಪಟ್ಟು ಒಗ್ಗೂಡಿಸಿ..ಬಲವಂತದ ನಗೆಯ ಮುಖವಾಡವೊಂದ ಧರಿಸಿ, ದಿನವು officegeಗೆ ಬಂದು ಹೋಗ್ತಾ ಇದ್ದ..ಬಂದು ಹೋಗುತ್ತಾ ಇದ್ದನೊ ಹೊರತು,ಅವನ ಕಂಡು ಅವನಿಗೆ ಅಸಹ್ಯವಾಗುವಷ್ಟು ಬೇಜವ್ಬದಾರಿ ಇಂದ ವರ್ತಿಸಿತೊಡಗಿದ.ಯಾವ ಕೆಲಸವು ಇಂದು ಮಾಡುವಂತದಲ್ಲ ಎಂಬ ವಿಳಂಬ ಪ್ರವೃತ್ತಿ ಬೆನ್ನು ಹತ್ತಿತು.ಇವತ್ತು mood ಇಲ್ಲ,’ಅದು ಸರಿ ಇಲ್ಲ,ಇದು ಸರಿ ಇಲ್ಲ’,ನಾಳೆ ನೋಡಿದರಾಯ್ತು ಎಂದು ಇಂದುಗಳನೆಲ್ಲ ನಾಳೆಗೆ ನೂಕತೊಡಗಿದ.ನಾಳೆ, ನಾಳೆ ಆದಾಗ ಇಂದೇ ಅಲ್ವೆ..? ಅವುಗಳ ಹಣೆಬರಹವು ಅದೇ ಆಗತೊಡಗಿತು.ಲೇಟ್ ಆಗಿ ಬರುವುದು ,ಬೇಗ ಹೊರಡುವುದು.ಬರುವಾಗ,ಹೊರಡುವಾಗ ಎದುರು ಯಾರಾದರು ಸಿಕ್ಕರೆ ಅದೇನೊ ಪಾಪ ಪ್ರಜ್ನೆ ಕಾಡಿ..,ಒಂದು ಬಲವಂತದ ನಗೆ ನಕ್ಕು….”I wonder when is government going to look into these traffic chaos” ಅಂತ ಒಂದು ಗೂಬೆ ಕೂರಿಸಿ ಹೊರಡುತಿದ್ದ.ಒಬ್ಬರ ಬಳಿಯು ಎರಡು ನಿಮಿಷ ನಿಂತು ಮಾತದಲು ಆಗದಂತ ಅಂಜಿಕೆ,flat ಬಿಟ್ಟು ಹೋದರೆ ಮತ್ತೆ ಯಾವಾಗ ಬಂದು ಗೂಡು ಸೇರುವೆನೆಂಬ ತವಕ.ಕಿಟಕಿ,ಬಾಗಿಲು ತೆರೆದರೆ ಯಾರು ಬಂದು ಎಲ್ಲಿ ಮಾತನಾಡಿಸುವರೋ ಎಂದು ಅಳುಕು.ಕ್ಲೈಂಟ್ ಮೀಟಿಂಗ್ ಗಳನೆಲ್ಲ ಯಾರದ್ರು ಟೀಮ್ ಲೀಡರ್ ಗೆ ಅಸ್ಸೈನ್ ಮಾಡ್ತ ಇದ್ದ,ಇಂಟೆರ್ನಲ್ meetinggaಳಿಗು ಯಾವುದಾದರು ನೆವ ಒಂದನಿತ್ತು,ದೂರ ಉಳಿಯಹತ್ತಿದ.

ಪ್ರಾಜೆಕ್ಟ್ ಮ್ಯಾನೇಜೆರ್ ಅಲ್ಲವೆ ಅವರದೇ ಒಂದು ಗಾಂಭೀರ್ಯ,ಯಾರು…”ಏನಾಯ್ತು..?ನೀನೇಕೆ ಹೀಗಾದೆ..?”ಎಂದು ಕೇಳುವ ಧೈರ್ಯ ಮಾಡಲಿಲ್ಲ.ಹೇಳಿಕೊಳ್ಳೋದಿಕ್ಕೆ ಗೆಳೆಯರು ಅಂತ ಇದ್ದವರೆ ಬೆರಳೆನಿಕೆ ಅವರಲ್ಲೂ ಮನಸ್ಸಿನ ವಿಷ್ಯದ ಮಾತಾಡೊ ಅಷ್ಟು ಸಾಮೀಪ್ಯ ಇರಲಿಲ್ಲ..ಮನೆಯಲ್ಲಿ ಕೂತು ಯಾವುದೊ ಒಂದು ಚಾನ್ನೆಲ್ ನೋಡ್ತಾ ಕೂರೊದು..ಅಪ್ಪ,ಅಮ್ಮ,ಪದ್ಮಳ ಫೋನ್ ಬಂದರೆ “ಬಿಜಿ ಇದ್ದೇನೆ,ಆಮೇಲೆ ಮಾಡುತ್ತೇನೆ” ಅನ್ತಾನೊ,ಏನಾದ್ರು ಸಬೂಬು ನೀಡಿ ಜಾರಿಕೊಳ್ತ ಇದ್ದ.
ತನಗೆ ತಾನು ಅಪರಿಚಿತನಂತೆ ದಿನಗಳ ದೂಡುವಾಗ ಒಂದು ದಿನ ಅವಳು ಸಿಕ್ಕಿದಳು.ಹೆಸರು ಪ್ರಿಯಂವದ..ಅವಳು ಹೇಳುವುದೆಲ್ಲ ಪ್ರಿಯವಾಗದೆ ಇದ್ದರು..,ಹೇಳುವ ರೀತಿ ಪ್ರಿಯವಾಗಿರುತಿತ್ತು.ಅರಳು ಹುರಿದಂತೆ ಮಾತು,ಪಾದರಸದಷ್ಟು ಚುರುಕು..ಎಂತ ಬೇಸತ್ತ ಜೀವಕ್ಕು ಹುರುಪು ನೀಡುವಷ್ಟು ಚೈತನ್ಯ.senior software engineer ಆಗಿ ಇತ್ತಿಚೆಗೆ ಅಷ್ಟೆ ಬೆರೋಂದು compnay ಇಂದ ಬಂದು ಸೇರಿದ್ದಳು.ಬಂದ ನಾಲ್ಕು ದಿನಕ್ಕೆ ಎಲ್ಲರ ಪರಿಚಯ ಮಾಡಿಕೊಂಡು ತಾನೆ ಈ offshore development center ನ ಮಾಲಿಕಳಂತೆ ಓಡಾಡುತಿದ್ದಳು.ಇವಳ ಬಳಿ ಮಾತನಾಡುವಾಗ ಯಾರು ಏಷ್ಟೆ ಜಾಣ್ಮೆ ತೋರಿ flirt ಮಾಡುವ ಆಶಯ ವ್ಯಕ್ತಪಡಿಸಿದರು,ಇವನ್ನೆಲ್ಲ ತನ್ನ ಚೂಪು ಚಾಕುವಿನಂತ ಮಾತಿಗೆ ಮುಗುಳ್ನಗೆಯ ಲೇಪವಿತ್ತು ಹಾಗೆ ಮೊಟುಕಿ ಹಾಕುತಿದ್ದಳು.ತನ್ನೊಡನೆ ಇರುವರೆಲ್ಲ ನಗು ನಗುತ ಹಾಯಾಗಿ ಇರಬೇಕೆಂಬ ಉದಾತ್ತ ಮನೋಭಾವ,ಭಾವಕ್ಕೆ ತಕ್ಕಂತೆ ನಡೆತ.Tea break,lunchge ಎಲ್ಲರನ್ನು ಕರೆಯುವುದು..ಬರದವರನ್ನ ನಗೆ ಮಾತಿನ್ದ ಚೇಡಿಸ್ಸಿ ಒತ್ತಾಯಿಸಿ ಕರೆದೊಯ್ಯುವುದು.officeನ ಹರುಷದ ಮುಖದಂತಿದ್ದಳು.”ಅಯ್ಯೊ ಈ ಜೀವನದಲ್ಲಿ ಇನ್ನೆನು ಹೊಸದಿಲ್ಲ,ಅದೆ routine ಜೀವನ..!!” ಅಂತ ಕೊರಗೊ ಒಂದಷ್ಟು ನಿರಾಶವಾದಿಗಳು ಕೂಡ ಇವಳ ಕಂಡು “ಹೀಗು ಬದುಕಬಹುದೇ..??” ಎಂದು ಅಚ್ಚರಿ ಪಡದೇ ಇಲ್ಲ.

ತನ್ನಲ್ಲೆ ತನ್ನ ಹುಡೂಕುತ,ಎಲ್ಲೆಡೆ ಪರಕೀಯನಿಯಂತೆ feel ಮಾಡುತ್ತಿದ್ದ ಸಮೀರನು officena ಈ ಬದಲಾವಣೆಯನ್ನು ಗಮನಿಸದೇ ಇರಲಿಲ್ಲ.ಒಂದೆದೆ “ಎಲ್ಲರು ಕುಷಿಯಾಗಿದ್ದರೆ, ನನ್ನ ಹೊರತು ಪಡಿಸಿ” ಎಂತದಾದರೆ,ಇನ್ನೊಂದೆಡೆ “ಏನೊ ಎಲ್ಲ ಕುಷಿಯಾಗಿದ್ದು,ನನ್ನ ಬಳಿಗೆ ಯಾವ ಸಮಸ್ಯೆ ತರದೇ ಇದ್ದರೆ ಸಾಕು” ಎಂದು ನಿಟ್ಟುಸಿರುಡಿತ್ತಿದ್ದ.ಕಾಲನ ಕಣ್ಣಾಮುಚ್ಚಲೆ ಆಟವೇ ಹೀಗೆ..ಕೊಟ್ಟವರ ಬಳಿ ಕೊಡಲಾಗದಂತದ್ದ ಕಿತ್ತು ನೋಡಿ ಮಜ ನೋಡುತ್ತಾನೆ,ಕಿತ್ತವರ ಬಳಿ ಹೆಚ್ಚು ಕೊಟ್ಟು.., ಮೈ ಮರೆವುದ ನೋಡಿ ನಗುತ್ತನೆ.

ಪದ್ಮಳಿಗು ಹೋದ ನಾಲ್ಕು ದಿನ ಹೊಸ ಪರಿಸರ,ಹೊಸ ಬಗೆಯ ಕಲ್ಚರ್,ಕಲರ್ ಸ್ವಲ್ಪ ದಿಗಿಲು,ಸ್ವಲ್ಪ ಕುತೂಹಲವನಿಟ್ಟು ದಿನಗಳು ಬೇಗ ಕಳೆದರೂ,ಮತ್ತದೇ ರುಟೀನ್ ಆಗತೊಡಗಿತು. ಅತ್ತ ಪದ್ಮ,ಇತ್ತ ಸಮೀರ ಗಾಣದೆತ್ತಿನಂತೆ ದಿನಗಳ ತಳ್ಳುತ್ತಿದ್ದರು.ಸಮೀರನಿಗೆ ಇದೆಲ್ಲ ಹೊಸದಾಗಿ ತೋರುತ್ತಿತ್ತು,ತಾನೆಂದು ಯಾವ ಪರಿಸ್ಥಿತಿಯಲ್ಲೂ ಯಾರ ಎದುರು ತಲೆ ಬಾಗದವನು ಇದೇನು?ಹೀಗೇಕೆ? ಕತ್ತಲಲ್ಲಿ ಮಿಂಚುಹುಳುದಂತೆ ಮಿಂಚಿ ಮರೆಯಾಗುತಿತ್ತು.ಇಷ್ಟೆಲ್ಲಾ ತಲೆನೋವುಗಳ ಮಧ್ಯೆ ಈಗ ಅವನ ಕಾಡಹತ್ತಿದ್ದು ಪ್ರಿಯಂವದ..!!.ಅವಳ ಮೇಲೆ ಮನಸಾದದ್ದಲ್ಲ,ಏನೋ ಸೆಳೆತ..!!.ಅವಳ ನಗುಮುಖ ಇವನ ಚೈತನ್ಯಕ್ಕೆ ಸವಾಲು ಹಾಕತೊಡಗಿತ್ತು.ಉಡುಗಿಹೋದ ಅವನ ಜೀವಕ್ಕೆ ಅವಳ ಲವಲವಿಕೆ ಜೀವಸೆಲೆಯಂತೆ ತೋರತೊಡಗಿತು.ಪ್ರಿಯಂವದಳೊಡನೆ ಮಾತನಾಡುವ ಅವಕಾಶವಷ್ಟು ದೊರೆಯದಿದ್ದರು ತನ್ನ ಗ್ಲಾಸ್ ಚೇಂಬರ್ ನಿಂದ ಅವಳ ಚಟುವಟಿಕೆಗಳ ಬಗ್ಗೆ ಗಮನವಿಡುವುದು ಅವನ ದಿನಚರಿಯ ಅವಿಭಾಜ್ಯ ಅಂಗವಾದಂತಿತ್ತು.ಮುಖಾ-ಮುಖಿ ಭೇಟಿ ಆದದ್ದು ಅವಳ ಇಂಡಕ್ಶನ್ ಟ್ರೇನಿಂಗ್ ನಲ್ಲಿ ಅವಳ ಟೀಮ್ ಲೀಡರ್ ಮುಖಾಂತರ. ಇದೇನು ಹುಚ್ಚಾಟ?ತನಗಿದು ಶೋಭೆಯೆ? ಸವಾಲುಗಳಿಗೆ ಉತ್ತರವಿಲ್ಲದೇ ತನ್ನ ಹೊಸ ಮನೋವಿರೂಪವ ಅದುಮಿಡಲಾಗದೆ ಒಪ್ಪಿಕೊಳ್ಳತೊಡಗಿದನು.ತಾನು ಅಟೆಂಡ್ ಮಾಡಲೇಬೇಕಾದ ಮೀಟಿಂಗ್ ಒಂದಕ್ಕೆ ಪ್ರಿಯಂವದಳ ಹಾಜರಿ ಇತ್ತು.ನೋಡಿದರು ನೋಡದಂತೆ ತನ್ನ ಪಾಲಿನ ಕೆಲಸದಂತೆ ಒಂದಷ್ಟು ಹುರಿದುಂಬಿಸುವ ಮಾತುಗಳನ್ನು ತನ್ನ ಇತ್ತೀಚಿನ ಹುರುಪಿಲ್ಲದ ಧ್ವನಿಯಿಂದ ಹೊರಡಿಸಿ ತನ್ನ ಚೇಂಬರ್ ಗೆ ಬಂದು ಕೂತಾಗ ಅದೇನೋ ತಳಮಳ.

ಪ್ಯಾಂಟ್ರಿಗೆ ಹೋಗಿ,ಬರುವ ದಾರಿಯಲ್ಲಿ ಎದುರಾದರೆ ಒಂದು ನಗೆ,ಅವಳ ಆ ಆಪ್ತ ನಗೆ ಅವನ ಮನವ ಮತ್ತಷ್ಟು ಕದಡಲು..ನೂರು ಯೋಚನೆಗಳ ಮೀರಿ ಪ್ರಿಯಂವದ ಮೆರೆಯತೊಡಗಿದಳು.ಇತ್ತೀಚೆಗೆ ಬಂದ ಕ್ಲೈಂಟ್ ರಿಪೋರ್ಟ್ ನಲ್ಲಿ,ಸಂಖ್ಯೆಗಳ ಮಾರಾಮಾರಿ ನಡೆದು ಸಮೀರನ ಪ್ರಾಜೆಕ್ಟ್ ನ ಯಶಸ್ಸಿನ ಬಗ್ಗೆ ಅವನ ಸುಪಿರಿಯರ್ ಗಳಿಂದ ಉತ್ತಮ ಪ್ರಶಂಸೆ ಬಂದಿತ್ತು.ಎಂದಿನಂತೆ ಈ ಕಾರಣಕ್ಕಾಗಿ ಟೀಮ್ ಔಟಿಂಗ್ ಮಾಡುವುದೆಂದು ನಿಶ್ಚಯಸಿಲಾಯ್ತು.

ಬರುವ ಶನಿವಾರ ಬೆಳಗ್ಗೆ ೮.೩೦ ರಿಂದ ರಾತ್ರಿ ೯.೦೦ರವರೆಗೆ ರೆಸಾರ್ಟ್ ಒಂದರಲ್ಲಿ ದಿನವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.ದಿನಗಳು ದೂಡುತ್ತಿದ್ದ ಸಮೀರನಿಗೆ ಎಲ್ಲ ದಿನಗಳು ಬೇಸರದ ಕುಣಿಕೆಗಳಾಗೆ ತೋರುತ್ತಿದ್ದವು.ಶುಕ್ರವಾರದ್ ಸಂಜೆ ಅವನ ಟೀಮ್ ನವನೊಬ್ಬ “ಸಾರ್ ಯು ಆರ್ ಕಮಿಂಗ್ ರೈಟ್..??” ಅಂದ.ಯಾವುದೋ ಲೋಕದಲ್ಲಿದ್ದಂತ ಸಮೀರ್ ..”ವ್ಹೆರ್‍..?” ಎಂದುತ್ತರಿಸಿದ. “ಸಾರ್ ಡಿಡ್ ಯು ಫ಼ಾರ್ಗಾಟ್..?ಟೊಮಾರೋ ಇಸ್ ಔರ್ ಟೀಮ್ ಔಟಿಂಗ್” ಅಂದ.ಈಗಾಗಲೇ ಸಹಜವೆನ್ನುವಂತಿದ್ದ ನಿರುತ್ಸಾಹದಿಂದ ಸಮೀರ “ಯಾ..ಯಾ..” ಅಂದ.ಹೋಗುವ ಯಾವುದೇ ಆಸಕ್ತಿ ಇರದಿದ್ದರೂ ಕಾಟಾಚಾರಕ್ಕೆ ಉತ್ತರಿಸಿದ್ದ.ಸಂಜೆ ೫.೩೦ ರ ವೇಳೆಗೆ ಹೊರಟು ನಿಂತಾಗ ಎದುರಾದ ಅವನ ಪ್ರಿಯಂವದಳ ಮುಗುಳ್ನಗೆ ಬೀಳ್ಕೊಟ್ಟಿತ್ತು.
ಮತ್ತದೇ ಏಕಾಂತದಲ್ಲಿ ಹಾಸಿಗೆಯಲ್ಲಿ ಉರುಳುತ್ತ ಇದ್ದವನಿಗೆ ನಿದ್ದೆ ಯಾವಾಗ ಆವರಿಸಿತೋ ತಿಳಿಯಲಿಲ್ಲ.ನೀಲಿಆಗಸದಿ ಕೋಲ್ಮಿಂಚೊಂದು ಬಡಿದಂತೆ ಥಳಥಳಿಸಿದ ಪ್ರಿಯಂವದಳ ಮುಗುಳ್ನಗೆಗೆ ಎಚ್ಚೆತ್ತು ಕುಳಿತ.ಪಕ್ಕದಲ್ಲೇ ಮೋಬೈಲ್ ಸಾಕಷ್ಟು ಮಿಸ್ಸಡ್ ಕಾಲ್ ಇರುವುದು ತಿಳಿಸಿತು.ವಾಸ್ತವಕ್ಕೆ ಬರತೊಡಗಿದಂತೆ ನೆನಪಾದದ್ದು ಟೀಮ್ ಔಟಿಂಗ್ ಅದರೊಂದಿಗೆ ಅವಳ ನಗು.ಹೋಗಬಾರದೆಂಬ ಮನಸು ಈಗ ತಾನು ಹಲವು ನೆವಗಳ ನೀಡಿ,ನೀನು ಪಿ.ಎಂ. ಅಲ್ಲಿ ಇರಬೇಕಾದು ನಿನ್ನ ಕರ್ತವ್ಯ … ಹೀಗೆ ಈ ಸಮಯಕ್ಕೆ ಸಲ್ಲದ ಜವಾಬ್ದಾರಿಯ ನೆನಪಿಸಿ ..ಏಳು ..ಬೇಗ ರೆಡಿಯಾಗು ಎಂದು ನೂಕತೊಡಗಿತು.ಶೇವು,ಸ್ನಾನ,ಮೆಚ್ಚಿನ ಟೀ ಶರ್‍ಟ್ ತೊಟ್ಟು,ಕಾರು ಹತ್ತಿ ಹೊರಡುವಲ್ಲಿ ಸಮಯ ೧೦. ಮತ್ತೆ ೩೦ ನಿಮಿಷಗಳಲ್ಲಿ ರೆಸಾರ್ಟ್ ತಲುಪಿದ.ಕಂಡವರೊಡನೆ “ಹಾಯ್, ಹೌ ಆರ್ ಯು..?” ಗಳ ವಿನಿಮಯ ಮಾಡಿ ಒಂದೆಡೆ ಕುಳಿತ.ನಿಶ್ಚಯಿಸಿದಂತೆ ಬಗೆ ಬಗೆಯ ಟೀಮ್ ಬಿಲ್ಡಿಂಗ್ , ಗೇಮ್ಸ್ ಹೀಗೆ ಸಾಗಿದ್ದವು.ಸಮೀರನ ಕಣ್ಣು ಒಂದೆಡೆ ನಿಲ್ಲದೆ ಎಲ್ಲೆಡೆ ಹುಡುಕುತಿರಲು, “ಏನು ಸಾರ್ ..ಒಬ್ಬರೇ ಕೂತಿದ್ದಿರಾ..?” ಪ್ರಿಯಂವದ ಅದೇ ಸಾಂಕ್ರಾಮಿಕ ನಗೆಯೊಂದಿಗೆ.ಮೊದಲ ಬಾರಿಗೆ ಕನ್ನಡದಲ್ಲಿ ಮಾತನಡಿಸಿದ್ದು.ಸ್ವಲ್ಪ ತಡವರಿಸಿ,ಚೇತರಿಸಿಕೊಂಡು ..”ಓಹ್ ..ನಿಮಗೆ ಕನ್ನಡ ಬರುತ್ತಾ..? ಗೊತ್ತೇ ಇರಲಿಲ್ಲ. ಏನಿಲ್ಲ ,,ಸುಮ್ಮನೆ ಕೂತು ನೋಡ್ತ ಇದ್ದೆ..” ಅಂದ.”ಅದಲ್ಲ ಸಾರ್ ನಾನು ಕೇಳಿದ್ದು ಒಬ್ಬರೇ ಅಂದ್ರೆ ನಿಮ್ಮ ಮಿಸ್ಸೆಸ್ ಬರಲಿಲ್ಲವ..?”, “ಇಲ್ಲ” ಎಂದಷ್ಟೇ ಚುಟುಕಾಗಿ ಉತ್ತರಿಸಿ ಪರವಾಗಿಲ್ಲ ಹುಡುಗಿ ,ನನ್ನ ಬಗ್ಗೆ ಸಾಕಷ್ಟು ತಿಳಿದೇ ಇದ್ದಾಳೆ ಎಂದು ಮನಸ್ಸಲ್ಲೇ ನಕ್ಕ.
ಒಬ್ಬರ ಮೇಲೆ ಮನಸ್ಸಾದಾಗ ಅವರು ಸಹಜವಾಗಿ ಏನೇ ಮಾಡಿದ್ರೂ ಅದಕ್ಕೇನಾದರೂ ಅರ್ಥ ಹುಡುಕುವುದು ಸಾಮಾನ್ಯ.ತನ್ನಲ್ಲಾಗುತಿರುವ ಬದಲಾವಣೆಗೆ ತಾನೇ ಹೆದರಿದ್ದ,ಕಾರಿನಲ್ಲಿ ಬರುವಾಗ ಮೂಲೆಗೆಸೆದಿದ್ದ ಸಿಡಿ ತೆಗೆದು ಕೇಳೋಕೆ ಶುರು ಮಾಡಿದ್ದ,ಅದ್ರಲ್ಲೂ ಅವನ ಮೆಚ್ಚಿನ ಗೀತೆ, ” ತಮ್ ನಮ್ ತಮ್ ನಮ್..ನನ್ನೀ ಮನವು ಮಿಡಿಯುತಿದೆ…ಓಹ್ ಸೋತಿದೆ…” ಮತ್ತೆ ಮತ್ತೆ ಪ್ಲೇ ಮಾಡಿದ್ದ.ಇವಳ ಜೊತೆ ಮಾತನಾಡಬೇಕು,ಹೆಚ್ಚು ಸಮಯ ಕಳೆಯಬೇಕು …ಮನಸ್ಸು ಹುಚ್ಚೆದ್ದು ಕುಣಿಯಹತ್ತಿತು.

ವಿವೇಕ ಅನ್ನೋದು ಕೆಲ್ಸಕ್ಕೆ ಬಾರದ ಸಮಯದಲ್ಲಿ ಕೆಲಸ ಮಾಡುವ ಸ್ಥಿತಪ್ರಜ್ನೆ.

ತನ್ನ ಸಹೊದ್ಯೋಗಿಗಳ ಜೊತೆ ಆಡದೇ ತನ್ನೊಂದಿಗೆ ಮಾತನಾಡುತ ಪಕ್ಕದಲ್ಲಿ ಕುಳಿತ ಪ್ರಿಯಂವದ ಅಚ್ಚರಿ,ಬೆರಗು,ಸಂದೇಹ,ಸಂತೋಷದ ಮಿಶ್ರ ಭಾವಗಳಿಗೆ ಎಡೆ ಮಾಡಿದ್ದಳು. ಪ್ರಾಜೆಕ್ಟ್,ಪ್ರಪಂಚದ ಆಗುಹೋಗು,ಐ.ಟಿ ಯ ಕಥೆ,ವ್ಯಥೆ..ಹೀಗೆ ಒಂದರಿಂದ ಮತ್ತೊಂದರತ್ತ ವಿಷಯಗಳು ಹೊರಳಿ..ಯಾರೋ ಊಟಕ್ಕೆ ಕೂಗಿದಾಗ ಇಬ್ಬರೂ ಹೊರಟರು.ಏನಿದೆ ಇವಳ ಮನಸ್ಸಲ್ಲಿ ,ನನ್ನೊಂದಿಗೆ ಇಷ್ಟೊಂದು ಸ್ನೇಹಪೂರ್ವಕವಾಗಿ ಯಾಕೆ ಇದ್ದಾಳೆ..ಇವತ್ತು ಮಾತನಾಡಿದಷ್ಟು ..ಕಳೆದ ಮೂರು ತಿಂಗಳು ಸೇರಿದರೂ ಮಾತನಾಡಿರಲಿಲ್ಲ..ಎದೆಯ ಬಾರ ಕಡಿಮೆಯಾದಂತಿತ್ತು.

ಅದೆನೋ “ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ…” ಮನಸ್ಸು ಗುನುಗ್ತಾ ಇತ್ತು.ಅವನು ಹಾಗೇ ಒಳಗೇ ನಕ್ಕ.ಊಟದ ಮಧ್ಯೆಯು ಮಾತು ನಡೆದೇ ಇತ್ತು ..ಕೆಲವರ “ಇಂಟರಪ್ಶನ್”ಗಳ ಜೊತೆಯಲ್ಲಿ..

ಸಮೀರ ಸುಮ್ಮನೆ ಹಾಗೆ ಮುಖ ತೋರಿಸಿ ಹೋಗುವುದೆಂದು ಬಂದವ ಕಾರ್ಯಕ್ರಮ ಮುಗಿಯುವವರೆಗೂ ಉಳಿದ.ಎಲ್ಲರೂ ಹಿಂತಿರುಗಿ ಹೊರಟಾಗ ಒಂದು ಮಾತು ಪ್ರಿಯಂವದಳ ಕೇಳಲೇಬೇಕೆನಿಸಿತು. ” ನಿಮ್ಮ ಮನೆ ಎಲ್ಲಿ..??” ನಿಲ್ಲದ ಯೋಚನೆ ಅವಳು ಯಾವ ಏರಿಯಾ ಹೇಳಿದರೂ ” What a coincidence , ನಾನು ಅದೇ ಕಡೆ ಹೊರಟಿದ್ದೆ ಬನ್ನಿ ಡ್ರಾಪ್ ಮಾಡುತ್ತೇನೆ” ಎಂದು ಹೇಳುವ ಬಯಕೆ.ಆಚಾರ,ವಿಚಾರ,ವೈಯಕ್ತಿಕ ಸಿದ್ದಾಂತಗಳು ,ಮೌಲ್ಯಗಳು ಎಲ್ಲ ಒಮ್ಮೆಲೇ ಕೊಚ್ಚಿಕೊಂಡು ಹೋಗುವುದಿಲ್ಲ,ಬಿರುಗಾಳಿಯಾದರೂ ಗಟ್ಟಿಯಾಗಿ ನಿಲ್ಲುವ ಪ್ರಯತ್ನವಂತೂ ಮಾಡೇ ಮಾಡುತ್ತವೆ.ಎಲ್ಲರಿಗೂ ಶುಭವಿದಾಯ ಹೇಳಿದ.ಕಣ್ಣುಗಳು ಹುಡುಕುತ್ತಿದ್ದ ಪ್ರಿಯಂವದಳಿಗೆ ಮುಗುಳ್ನಗೆಯೊಂದ ಬೀರಿ ಹೊರಟ.ಇತ್ತೀಚಿನ ದಿನಗಳಲ್ಲಿ ಹುಚ್ಚು ಹಿಡಿಸಿದ್ದ ಅವನ ಅವ್ಯಕ್ತ ಭಾವಗಳು,ಹೋರ್‍ಆಟ,ಎಲ್ಲ ಶಮನಗೊಂಡು ಮನಸ್ಸು ಅದೆಂತೋ ಹಗುರವಾಗಿತ್ತು.ದೊಡ್ಡ ಪ್ರವಾಹವೊಂದು ತೀರಕ್ಕಪ್ಪಳಿಸಿ ಎಲ್ಲವನ್ನೂ ಬಾಚಿಕೊಂಡು ಸತ್ತ ತಿಮಿಂಗಿಲವೊಂದನಪ್ಪಳಿಸಿ ಹೋದಂತೆ.

ಗಂಟೆ ಹನ್ನೊಂದಾದರೂ ಊಟ ಮರೆತ..,ನಾಳೆ ಭಾನುವಾರ, ಅದರ ಅರಿವೂ.. ಅನಗತ್ಯ.ನಿದಿರೆಯೋ,ಮದಿರೆಯೋ..ಏನೋ ಆಹ್ಲಾದವಾದ ತಂಗಾಳಿ ಬೀಸಿದಂತೆ….ಸಮೀರ,ಪ್ರಿಯಂವದಳ ಕೈ ಹಿಡಿದು ಆ ಸುಂದರ ಬನದಲ್ಲಿ ನಡೆಯತೊಡಗಿದ್,ಮುಗಿಲ ಚುಂಬಿಸುವ ಎತ್ತರದ ಮರಗಳು,ಪ್ರಶಾಂತವಾದ ನದೀ ತೀರ,ದೂರದಿ ಒಂದು ನಾವೆ,ಹುಟ್ಟ ಮುಳುಗಿಸಿ ನೂಕಿ ನೂಕಿ ಸಾಗುತ,ಮಧುರ ಗಾನದಿ ಮೈ ಮರೆತಿದ್ದ ಅಂಬಿಗ… ಮೌನವೇ ಮಾತು..!

ಹುಲ್ಲುಹಾಸಿನ ಮೇಲೆ ಕುಳಿತರಿಬ್ಬರು,ಪ್ರಿಯಂವದಳ ಕಣ್ಣಲ್ಲಿ ಕಣ್ಣನಿಟ್ಟು ಹೊಸದು ಲೋಕವೊಂದ ನೋಡುತ್ತಿದ್ದ ಸಮೀರ.ಹೊಳೆವ ಕಣ್ಣು,ನೀಳ ನಾಸಿಕ,ಸಂಜೆಗೆಂಪಿನ ಕೆನ್ನೆ,ಈ ಅಂದಕ್ಕೆಲ್ಲಿಯ ಸಾಟಿ..ಎನೆ ನಾಚಿ ನಲುಗುತ್ತಿದ್ದ ಹರಳಿನ ಓಲೆ,ಕೋಮಲ ತುಟಿಗಳು…..

“ಸಮೀರ್….ಸಮೀರ್….” ಅವಳ ಇಂಪಾದ ಕರೆಗೆ ತುಟಿಯ ಹಿಗ್ಗಿಸುತ,ಆನಂದವ ಸೂಸುತ..ಏನೆಂಬಂತೆ ಸನ್ನೆ ಮಾಡಿದ.
“ಸಮೀರ್…,ಒಂದು ಮಾತು ಕೇಳಲಾ..?? ನನ್ನ ಜೊತೆ ಜೀವನ ಪೂರ್ತಿ ಹೀಗೆ…ಇರ್ತೀರಾ..???”

ಸಣ್ಣನೆ ಬೆವರು,ತಣ್ಣನೆ ನಡುಕ,ಅದುರುತ್ತಿದ್ದ ಗಂಟಲು,ಎದೆಯ ಮೇಲೆ ಅದೆಂತಹದೋ ಭಾರಿ ಭಾರ…ಕಲ್ಲುಗುಂಡಿನಂತದ್ದು.. “ಇಲ್ಲ….!!!!” ಬೆಚ್ಚೆದ್ದು ಕೂತ…. “ಈ ರಾತ್ರಿ ನನ್ನದಲ್ಲ….ಇಲ್ಲ …ಈ ರಾತ್ರಿ ನನ್ನದಲ್ಲ…” !!

Read Full Post »