” ನಮಸ್ಕಾರ ಸಾರ್ ..ಏನು ಸಾರ್ ಇತ್ತೀಚೆಗೆ ಕಾಣೋದೆ ಇಲ್ಲ…? ಬಟ್ಟೆ ಏನಾದ್ರು ಇತ್ತ..?. ಭಾನುವಾರ ಬೆಳಿಗ್ಗೆನೂ ನೆಮ್ಮದಿಯಾಗಿ ಮಲಗೋಕೆ ಬಿಡೊಲ್ಲವಲ್ಲ ಯಾವ ಕಿರಾತಕ ಅಂತ ಬೈಯುತ್ತ ಬಂದು ಬಾಗಿಲು ತೆಗೆದ್ರೆ, ಇಸ್ತ್ರಿ ಸೀನ. ನಾನು ಈ ಮನೆಗೆ ಬಂದಾಗಿನಿಂದ ಮನೆ ಹತ್ತಿರ ಬಂದು ಬಟ್ಟೆ ತಗೊಂಡು ಹೋಗಿ,ಇಸ್ತ್ರಿ ಮಾಡಿ ತರ್ತಾನೆ.ಇಲ್ಲಿವರೆಗು ಒಂದು ಬಟ್ಟೆ ಸುಡಲಿಲ್ಲ,ಹಾಳು ಮಾಡಿಲ್ಲ,ಇದೂ.. ಒಂದು ಕಾರಣ ಇವನು ನನಗೆ ಇಷ್ಟ ಆಗೋಕೆ.ಮದುವೆಗೆ ಮುಂಚೆ ಇವನ ಜೊತೆ ಹಾಗೆ ಹರಟೆನೂ ಹೊಡಿಯೊ ಅಷ್ಟು ಸಮಯವಿರುತ್ತಿತ್ತು.ಈಗ ಸಮಯ ಇದ್ದರೂ ವ್ಯವಧಾನ ಇರೊಲ್ಲ.ಇವಳು ಬಂದ ಮೇಲೆ ನನ್ನ ಬಟ್ಟೆನೆಲ್ಲ ಇವಳ ತಲೆ ಮೇಲೆ ಹಾಕಿ ಗಡದ್ದಾಗಿ ನಿದ್ದೆ ಮಾಡ್ತಿದ್ದೆ.ಇಷ್ಟು ಹೊತ್ತಿಗೆ ಬಿಸಿಬಿಸಿ ಕಾಫ಼ಿ ಸಿಕ್ಕಿರ್ತಿತ್ತು ಇವಳಿದ್ದಿದ್ದರೆ.ಮನೆ ಮುಂದೆ ಬಿದ್ದಿದ್ದ “ಸಂಡೇ ಟೈಮ್ಸ್” ಹಾಗು ಹಾಲಿನ ಪ್ಯಾಕೆಟ್ ಎತ್ತಿಕೊಂಡು ಸೀನನ ಒಳಗೆ ಕರೆದೆ ” ಬಾರೊ ಸೀನ ಒಳಗೆ ..ನೋಡಿ ತುಂಬಾ ದಿನ ಆಯ್ತಲ್ಲ..ಒಂದು ನಿಮಿಷ ಇರು ನೋಡ್ತೀನಿ ಬಟ್ಟೆ ” ಅಂತ ಒಳಗೆ ಹೋದೆ.ಒಂದಷ್ಟು ಒಗೆದ ಬಟ್ಟೆ ಇವಳು ತೆಗೆದು ಇಟ್ಟಿದಿನಿ ಅಂತ ಹೇಳಿದ್ದು ಜ್ನಾಪಕ ಬಂತು ,ಎತ್ತಿಕೊಂಡು ಬರುತ್ತ ಒಳಗಿನಿಂದಲೇ ಕೇಳಿದೆ ” ಏನು ಸೀನ ಹೆಂಗಿದಿಯ..? ಎಲ್ಲಾ ಆರಾಮ.. ”
” ಏನು ಆರಾಮೋ ಸಾರ್..,ಒಂದೊಂದು ಸಲ ಯಾಕಾದ್ರು ಮದ್ವೆ ಆದ್ನೋ ಅನ್ಸುತ್ತೆ..,ನೆಮ್ಮದಿಯಾಗಿ ಇದ್ದೆ ಸಾರ್ ಮುಂಚೆ” ಬಟ್ಟೆ ತಗೊಳ್ತ ಹೇಳಿದ. ನಿನಗೊಬ್ಬನಿಗಲ್ಲ ಬಿಡು ಹಾಗನಿಸಿದೋ ಅಂತ ಬಾಯಿಗೆ ಬಂದಿತ್ತು,”ಯಾಕೊ,ಏನಾದ್ರು ಜಗಳನೆನೋ ನಿನ್ನ ಹೆಂಡ್ತಿ ಜೊತೆ..?”. ತುಂಬ ಸನಿಹವಲ್ಲದವರನ್ನ ಇಷ್ಟು ವೈಯಕ್ತಿಕ ಪ್ರಶ್ನೆ ಕೇಳೋದು ನನಗೆ ಇಷ್ಟ ಆಗೋಲ್ಲ.ಆದರೆ ಮುಂಚಿನಿಂದ ತನ್ನ ಕಷ್ಟ ಸುಖ ಹೇಳ್ಕೊಂಡು ಇದನ್ನ ಕೇಳಿದ್ರೆ ತಪ್ಪಿಲ್ಲ ಅನ್ನುವಷ್ಟು ಸಲಿಗೆನ ಸೀನಾನೆ ನನಗೆ ಕೊಟ್ಟಿದ್ದ.ಹಾಗೆಂದ ಮಾತ್ರಕ್ಕೆ ಅವನು ನನ್ನ ಅಷ್ಟೇ ಸಲಿಗೆಯಿಂದ “ನೀವು ಗಂಡ-ಹೆಂಡ್ತಿ ಜಗಳ ಆಡ್ತೀರಾ” ಅಂತ ಕೇಳೋಕೆ ಆಗ್ತಿರಲಿಲ್ಲ..ಕೇಳಿದ್ರು ನನಗೆ ಮೈ ಉರಿಯುತ್ತಿತ್ತೇನೊ..??
ಯಾರಾದ್ರು ಕೇಳಿದ್ರೆ ಹೇಳೊಣ ಅಂತ ಕಾಯ್ತ ಇದ್ದ ಹಾಗೆ ಸೀನ ಒಂದು ಸಲ ನೆಲಾನ,ಒಂದು ಸಲ ನನ್ನ,ಮತ್ತೊಂದು ಸಲ ಆ ಕಡೆ, ಈ ಕಡೆ ನೋಡ್ತ ನುಡಿಯತೊಡಗಿದ. ” ಎಲ್ಲಾ ಚೆನ್ನಾಗೆ ಇತ್ತು ಸಾರ್ ಮೊದಲು ಮೊದಲು,ಮದ್ವೆ ಅಂತ ನಾನು ೧೦ ದಿನ ರಜ ಮಾಡಿ ಕಮಲಿನೂ ಕರ್ಕೊಂಡು ..ಆ ಊರು ಈ ಊರು,ದೇವಸ್ಥಾನ, ನೆಂಟರ ಮನೆ ಅದು ಇದು ಅಂತ ಎಲ್ಲಾ ಸುತ್ತಿದೆ.ಅವಳಿಗೂ ಇದೆಲ್ಲ ಹೊಸದು,ಹೆಚ್ಚಿಗೆ ಊರು ನೋಡಿದವಳಲ್ಲ ..ಕುಶಿಯಾಗೆ ಇದ್ದಳು.ಇಲ್ಲಿಗೆ ಕರ್ಕೊಂಡು ಬಂದೆ, ಮದುವೆಗೆ ಅಂತ ಉಳಿಸಿದ್ದು ದುಡ್ಡು ಅಲ್ಲದೇ,ಇಸ್ಕೊಂಡಿದ್ದು ಖಾಲಿ ಆಗಿತ್ತು,ಹತ್ತು ದಿನ ರಜಾ ಮಾಡಿದ್ದಕ್ಕೆ ಆಗಲೆ ೩-೪ ಮನೆಯವರು ಬೇರೆಯವರಿಗೆ ಬಟ್ಟೆ ಹಾಕೊಕೆ ಶುರು ಮಾಡಿದ್ರು.ಮೊದಲಿಗಿಂತ ಜಾಸ್ತಿ ಕೆಲಸ ಮಾಡಬೇಕಾಯ್ತು..ಬೆಳಿಗ್ಗೆ ೬ ಗಂಟೆ ಇಂದ ರಾತ್ರಿ ೮ ಗಂಟೆ ತನಕ ಇದ್ದಿಲು ಹಾಕಿ ಇಸ್ತ್ರಿ ಮಾಡಿದ್ರೆ ಮೈಯೆಲ್ಲ ಉರಿ ಉರಿ ಸಾರ್ …ನಿದ್ದೆ ಬರೊಲ್ಲ.. ಕುಡಿದು ಹೋಗಿ ಮಲಗ್ತಿನಿ..”
ಇದೆಲ್ಲಾ ಇವನು ನನಗೆ ಯಾಕೆ ಹೇಳ್ತ ಇದ್ದಾನೆ ಅನಿಸಿದ್ರೂ ಅವನಿಗೆ ಮನಸು ಹಗುರ ಆಗೋದಾದ್ರೆ ಮಾತಾಡಲಿ ಅಂತ ಸುಮ್ಮನಾದೆ.
” ನಿಧಾನಕ್ಕೆ ಶುರು ಆಯ್ತು ಸಾರ್ ಇವಳ ಗೋಳು..’ನಿನ್ನ ಹತ್ರ ನಂಗೆ ಅಂತ ಟೇಮೆ ಇಲ್ಲ..ಯಾವಾಗಲು ಕೆಲಸ,ದುಡ್ಡು ಬರೀ ಇದೆನೆಯ ನಿಂಗೆ ಧ್ಯಾನ’ ಅಂತ ದಿನ ರಾತ್ರಿ ರಂಪ,ರಾಮಾಯಣ ಮಾಡೊಕೆ ಶುರು ಮಾಡಿದ್ದಳು.ಇರಬೌದು ಅವಳ ಜೊತೆ ನಂಗೆ ಹೆಚ್ಚಿಗೆ ಮಾತಾಡಕೆ ಆಗ್ತ ಇಲ್ಲ,ಆದ್ರು ನಾನು ಬೆಳಿಗ್ಗೆ ರಾತ್ರಿ ದುಡಿಯೋದಾದ್ರು ಯಾರಿಗೆ? ಇವಳಿಗೆ,ಈಗಿರೊ ಕೂಸು,ಮುಂದಾಗೊವಕ್ಕೆ ತಾನೆ ..? ಅದು ಹೇಳಿದ್ರೆ,’ನೀನು ಅರಮನೆ ಕಟ್ಟೊದು ಬ್ಯಾಡ,ಮೂರು ಹೊತ್ತು ಗಂಜಿಗಾದ್ರೆ ಸಾಕು’ ಅಂತ ರೇಗ್ತಿದ್ದಿಳು.”
ಅವನೇ ಹೇಳಿದ ಹಾಗೆ ೮-೧೦ ವರ್ಷದ ಕೆಳಗೆ ತುಮಕೂರಿನ ಒಂದು ಹಳ್ಳಿ ಬಡತನದಿಂದ ಬೆಂಗಳೂರಿಗೆ ಬಂದಿದ್ದ ಸೀನ ಬಹಳ ಕಷ್ಟಪಟ್ಟು ಒಂದು ವಾಸಕ್ಕೆ ಯೋಗ್ಯ ಅನಿಸೊ ಬಾಡಿಗೆ ಮನೆ ಮಾಡುವ ಅಷ್ಟು ಹೊತ್ತಿಗೆ ಐದು ವರ್ಷ ಆಗಿತ್ತು.
“ಎರಡು ತಿಂಗಳಾಯ್ತು ಸಾರ್, ಮಗೂನ ಕರ್ಕೊಂಡು ಹೋದೊಳು ಇನ್ನ ಬಂದಿಲ್ಲ…” ಕಣ್ಣು ಸ್ವಲ್ಪ ತೇವವಾಗ್ತ ಇತ್ತು.
“ನೀನು ಹೋಗಿ ಕರ್ಕೊಂಡು ಬರಬಾರದೆನೋ ?,ಅವಳಿಗೆನೋ ಗೊತ್ತಿಲ್ಲ ಅಂದ್ರೆ ನೀನು ಕಷ್ಟ ಕಂಡವನು,ಪ್ರಪಂಚ ನೋಡಿದವನು,ಎರಡು ಮಾತು ಹೇಳಿ ಕರ್ಕೊಂಡು ಬಾ…ಹೋಗು ” ಅಂದೆ.
“ಬರ್ತಾಳೆ ಬಿಡಿ ಸಾರ್,..ಜೀವನ ದೊಡ್ಡದು,ಇವಳ ಜೊತೆ ದಿನ ಮಾತಾಡ್ತ ಕೂತ್ರೆ ಜೀವನ ನಡೀತದಾ..? ಇನ್ನೊಂದಷ್ಟು ದಿನ ಇರಲಿ..ಆಮೇಲೆ ನಾಕು ಜನ ನಾಕು ಮಾತಾಡ್ತರೆ ಅಂತಾನಾದ್ರೂ ಬರ್ತಾಳೆ.. , ನಾನು ಬರ್ತೀನಿ ಸಾರ್.. ನಾಳೆ ಸಾಯಂಕಾಲ ಕೊಡ್ತಿನಿ ಸಾರ್ ಬಟ್ಟೆ “ಅಂತ ಹೊರಟ.
ಬಂದು ಕೂತು “ಸಂಡೇ ಟೈಮ್ಸ್ ” ನ ಭಾನುವಾರದ ವಿಶೇಷ ಸಂಚಿಕೆ ತಿರುಗಿಸುತ್ತ ಕಣ್ಣು ನಿಂತಿದ್ದು.. ಯಾರು ,ಎಲ್ಲಿ ಯಾವಾಗ ಯಾರನ್ನು ಹಿಡಿದು ಮಾಡಿದರೋ ಗೊತ್ತಿಲ್ಲದ ಒಂದು ಸರ್ವೆ..ಸಾಫ಼್ಟ್ ವೇರ್ ಉದ್ಯೋಗಿಗಳಿಗೆ ಕೆಲಸ ಹಾಗು ವೈಯಕ್ತಿಕ ಜೀವನದ ಹೋರಾಟದಲ್ಲಿ ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಅಂತೆ..ಅದೂ ಕೆಲಸ ಮುಖ್ಯ ಅನ್ನುವರು ಶೇಕಡ ೮೫ …!!
ಜಯಂತ್
ಬರಹ ಚೆನ್ನಾಗಿದೆ..
Jayanth,
Nimma baraha tili hasyadondige mugidittadru halavaru gambhira prashnegala maleyanne hariside!
Tumba chennagide,
Vinod.
ಧನ್ಯವಾದಗಳು ದಿನೇಶ್..
@ವಿನೋದ್.. ಅದರ ಉದ್ದೇಶವು ಅದೇ ಅಲ್ಲವೇ..? [:] ..ಧನ್ಯವಾದಗಳು..