(ಒಂದು ನೈಜ ಘಟನೆ…ನಾ ಕೇಳಿದಂತೆ..)
ಬರುವಾ ಸುಮೇರ್ ಪುರ್..ಉತ್ತರಪ್ರದೇಶದ ಕಾನ್ ಪುರ್ ನಗರದಿಂದ 80 ಕಿ.ಮೀ ದೂರದಲ್ಲಿರುವ ಒಂದು ಚಿಕ್ಕ ಪಟ್ಟಣ.ಹಳ್ಳಿ ಎನ್ನಲು ಸಾಧ್ಯವಿಲ್ಲ…ಎರಡು ಮೂರು ವೈನ್ ಶಾಪ್ ಗಳು,ಇತ್ತೀಚೆಗೆ ಆರಂಭವಾಗಿದ್ದ ಒಂದು ಒಳ್ಳೆಯ ಹೋಟೆಲ್ಲು,ಎಲ್ಲಾ ನೂತನ ನಕಲಿ ಸಿ.ಡಿ. ಮಾರುವ ಪಿಂಟೊನ ಪಾನ್ ಅಂಗಡಿ,ಅಡಿಗೆಯಿಂದ ಹಿಡಿದು ನಿತ್ಯ ಬಳಕೆಯ ಎಲ್ಲಾ ಸಾಮಗ್ರಿಗಳು ಸಿಗುತ್ತಿದ್ದ ಹಲವಾರು ಲಾಲ ದೂಕಾನುಗಳು,ಅಲ್ಲೇ ಇರುವ ಒಂದು ಸಿಂಗಲ್ ರೋಡ್ ನಲ್ಲೇ ಬಸ್ ಸ್ಟಾಂಡ್,ಪೋಲಿಸ್ ಠಾಣೆಯ ಎದುರು.ಪಕ್ಕದಲ್ಲಿ ಒಂದು ಚಿಕ್ಕ ಗಲ್ಲಿ,ಅದೇ ತರಕಾರಿ ಮಾರುಕಟ್ಟೆ.ವರುಷದ 300 ದಿನಗಳಲ್ಲಿ ರಸ್ತೆಯಲ್ಲಿ ಹೊಂಡಗಳೋ..? ಹೊಂಡಗಳಲ್ಲಿ ರಸ್ತೆಯೋ..? ಅರಿಯದಂತ ರಸ್ತೆ..! ಮೂರು ಜನಕ್ಕೆ ಒಬ್ಬರಲ್ಲಿ ಹೆಗಲ ಮೇಲೊಂದು ಕೋವಿ..ಕೋವಿಗೆ ಲೈಸೆನ್ಸ್ ಇರಬೇಕೆ..?? ಇಲ್ಲ.. ಇಲ್ಲಿ ಹಾಗೇನಿಲ್ಲ.ಮುಂಡಾಸು ಅವರಿಗಿಷ್ಟವಿದ್ದಂತೆ.ಈ ಕಡೆ ಕಾನ್ ಪುರ್ ರಸ್ತೆ,ಮತ್ತೆ ಆ ಕಡೆ ಮೌಧಾ,ಬಾಂದಾದ ಹಾದಿಯಲ್ಲಿ ಜಗತ್ಪಸಿದ್ದ ಖುಜುರಾಹೋಗೆ ದಾರಿ, ಈ ರೋಡಿನಲ್ಲೇ ಸುಮೇರ್ ಪುರ್ ನಿಂದ 2-3 ಕಿ.ಮೀ ಬಳಿಕ special economic zone. ಅದೇ ಇತ್ತೀಚೆಗೆ ಅತ್ಯಂತ ವಿವಾದಗ್ರಸ್ತವಾಗಿರುವ ಹಿಂದುಳಿದ ಪ್ರದೇಶಗಳ ಉದ್ದಾರಕ್ಕೆ ಸರ್ಕಾರದ ಉತ್ತರ.zone ಅಂದ ಮಾತ್ರಕ್ಕೆ ಅಲ್ಲಿ ಕಾರ್ಖಾನೆ ಹಾಕಿದವರಿಗಾಗಿ ಹೊಸ ರಸ್ತೆ,ಹೊಸ ಫೋನ್ ವ್ಯವಸ್ಥೆ ಹಾಗೆಲ್ಲ ಏನು ಇಲ್ಲ.ಆ ಕಾರ್ಖಾನೆಗಳಲ್ಲಿ ತಯಾರಾದ ಉತ್ಪನ್ನಗಳ ಮೇಲೆ ಅಬಕಾರಿ ಶುಲ್ಕದ ಕಡಿತವಷ್ಟೇ..!.ಅಷ್ಟೇ ಅನ್ನಲಾಗುವುದಿಲ್ಲ..ಸುಮಾರು 15-20 ವರುಷಗಳಿಂದ ತನ್ನ ವಹಿವಾಟು ನಡೆಸುತ್ತಿರುವ ಇಲ್ಲಿನ ಒಂದೇ ಹೆಸರಾಂತ ಹಿಂದುಸ್ತಾನ್ ಲಿವರ್ ಕಾರ್ಖಾನೆ ಇದಕ್ಕೆ ಸಾಕ್ಷಿ.
ಹಿನ್ನಲೆಯೇ ಸಾಕಷ್ಟಿದೆ.. ಇದೇ ಈ ಜಾಗದ ಕರಾಮತ್ತು..ಈ ಹಿನ್ನೆಲೆ ಇಲ್ಲದೇ.., ನಾ, ನಡೆದ ಘಟನೆ ವಿವರಿಸುವಂತಿಲ್ಲ.. ಎಲ್ಲಾ ಸಾಮಾನ್ಯ ಊರಿನಂತೇ ಈ ಊರಿನಲ್ಲೂ ಅಸಾಮಾನ್ಯವಾದ ಆದಾಯ ತರುವ ಯಾವ ನೈಸರ್ಗಿಕ,ಮಾನವ ನಿರ್ಮಿತ ಸಂಪನ್ಮೂಲಗಳಿಲ್ಲ.ಬೇಸಾಯ ಮುಖ್ಯ ಕಸುಬು,ಇರುವುದೊಂದು ದೊಡ್ಡ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರನನ್ನು ಇಲ್ಲಿ ತುಂಬಾ ಸ್ಥಿತಿವಂತನೆಂದು ಕಾಣುವುದು ಸಹಜ.ಇನ್ನು ಇಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಊರಿನಿಂದ ಹೊರಗೆ ಒಂದು ಕಾಲೋನಿ..,ಅವರೇನು ಅಸ್ಪ್ರಶ್ಯರಂತಲ್ಲ..!! ಊರಿನಲ್ಲಿ ಅವರಿಗೆ ರಕ್ಷಣೆ,ಸವಲತ್ತುಗಳ ನೀಡುವುದು ಕಷ್ಟವೆಂದೇನೋ..ಇನ್ನು ಮ್ಯಾನೇಜರ್ ವಲಯದವರಿಗೆಲ್ಲ ಸುಮೆರ್ ಪುರ್ ನಿಂದ 20 ಕಿ.ಮೀ ದೂರದಲ್ಲಿನ ಹಮೀರ್ ಪುರ್ ನಲ್ಲಿ ಎತ್ತರದ ಗೋಡೆಯ ಒಳಗಿನ ಮನೆಗಳು.ಹಮೀರ್ ಪುರ್ ..,ಜಿಲ್ಲಾ ಕೇಂದ್ರ,ಯಮುನಾ ಮತ್ತು ಬೇತ್ವ ನದಿಯ ಮಧ್ಯೆ ಇರುವ ಭೂ ಭಾಗ. ಎತ್ತರದ ಗೋಡೆ ಬಹುಶಃ ಸಮೀಪದಲ್ಲಿದ್ದ ಜಿಲ್ಲಾ ಕಾರಗೃಹದ ನಿಮಿತ್ತವಾಗಿರಬೇಕು.
ಹೇಳುವದ ಮರೆತೆ, ಈ ಸುತ್ತಮುತ್ತಲ ಪ್ರದೇಶ ಇತಿಹಾಸ ಪ್ರಸಿದ್ಧ “ಬುಂದೇಲ್ ಖಂಡ್” ಎಂಬ ಖ್ಯಾತಿ ಉಳ್ಳದ್ದು.ಸಾಕಷ್ಟು ಕಾಲ ..ಈಗಲೂ ಕೂಡ ದರೋಡೆಕಾರರ ಹಾವಳಿ,ಜಮೀನ್ದಾರರ ದಬ್ಬಾಳಿಕೆಯಿಂದ ನಲುಗಿದ,ನಲುಗುತ್ತಿರುವ ಪ್ರದೇಶ.ಕಾಡಿನಂತೆ ಹಬ್ಬಿದ ಕುರುಚಲು ಗಿಡಗಳು,ನದಿ ಹರಿದು ಕೊರೆದ ಭೂ ಭಾಗಗಳು ,ದರೋಡೆಕಾರರಿಗೆ ನೆಮ್ಮದಿ ನೆಲೆಯ ನೀಡಿವೆ.ಇದೇ ಹಮೀರ್ ಪುರ್ ನ ಕಾರಾಗೄಹದಲ್ಲಿ ಪೂಲನ್ ದೇವಿಯನ್ನು ಕೆಲ ಕಾಲ ಬಂಧಿಸಿಡಲಾಗಿತ್ತು ಎನ್ನಲಾಗುತ್ತದೆ.
ಸುಮೇರ್ ಪುರ್ ನ ಈ ಕಾರ್ಖಾನೆಯ ಬಳಿ ಒಂದು “ಶೀಖಾ”,ನಮಗೆಲ್ಲ ಪಂಜಾಬಿ ಢಾಬಾವೆಂದು ಪರಿಚಯವಿರುವ ರೀತಿಯ ಹೋಟೆಲ್.ರುಚಿಯಾದ ಪನ್ನೀರ್,ಮೊಟ್ಟೆ ಬುರ್ಜಿ,ಬಿಸಿ ಬಿಸಿ ತಂದೂರ್ ರೋಟಿ,ಕೆನೆ ತುಂಬಿ ತುಳುಕುವ ಲಸ್ಸಿ …ಹೀಗೆ ಹಲವು ಕೈಗೆಟುಕವ ಬೆಲೆಯ ರುಚಿಯಾದ ಖಾದ್ಯಗಳಿಗೆ ಈ ಶೀಖಾ ಹೆಸರುವಾಸಿ.ಆಗೊಮ್ಮೆ ಈಗೊಮ್ಮೆ ಧೂಳೆಬ್ಬಿಸಿ ನಿಲ್ಲುವ ಕಾನ್ ಪುರ್ -ಮೌಧಾ, ಬಾಂದಾ ಬಸ್ಸುಗಳು,ರಾತ್ರಿ ಸಮಯ ಹೆಚ್ಚಾಗಿ ನಿಲ್ಲುತ್ತಿದ್ದ ಹೆಚ್ಚು ಹೆಚ್ಚು ಲಾರಿಗಳು.ಮೌದಾದ ಬಳಿಯ ಗಣಿಗಾರಿಕೆ ಇಂದಾಗಿ ಈ ಸಿಂಗಲ್ ರೋಡಿನಲ್ಲಿ ಹೆಚ್ಚಿನ ಲಾರಿಗಳು ಓಡಾಟವಿರುತ್ತದೆ.ಎಲ್ಲಾ ಢಾಬಾಗಳ ಹಾಗೇ ಇಲ್ಲೂ ರಾತ್ರಿಯಲ್ಲೇ ಸೇವೆ..ತಿನ್ನಲೂ ಹಾಗು ಕುಡಿಯಲು.ರಾತ್ರಿ 9 ರಿಂದ 12ರ ವರೆಗೆ ಜೋರಾದ ವಹಿವಾಟು.ಢಾಬಾಕ್ಕೆ ಅಂಟಿಕೊಂಡಂತೆ ಒಂದು ಪಾನ್ ಅಂಗಡಿ.
ಕಾರ್ಖಾನೆಯಲ್ಲಿ ಹೊಸದೊಂದು ಯಂತ್ರದ ಕಮಿಷಿನಿಂಗ್ ನಡೆದಿತ್ತು,ಕಂಪನಿಯ ಆಡಳಿತ ವರ್ಗದ ಉನ್ನತ ಅಧಿಕಾರಿಯೊಬ್ಬರ ಭೇಟಿ ಹತ್ತಿರದಲ್ಲೇ ಇದ್ದ ಕಾರಣ..ಈ ಕಾರ್ಯ ಭರದಿ ಸಾಗಿತ್ತು.ರಾತ್ರಿ ಸುಮಾರು 1 ಗಂಟೆಯ ಸಮಯ..Shift ನಲ್ಲಿದ್ದವರು ತಮ್ಮ ಪಾಡಿಗೆ ಕೆಲಸ,ನಿದ್ದೆ ಮಾಡುತ್ತಿದ್ದರು .commisioning ಕಾರ್ಯದಲ್ಲಿದ್ದವರು ಒಬ್ಬ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗೆ ಈಗ ತಾನೇ ಬಡ್ತಿಗೊಂಡವ,ಮೂವರು ಅಪ್ರೆಂಟಿಸ್ ಗಳು ಹಾಗು ಕಾಂಟ್ರಾಕ್ಟ್ ಲೇಬರ್ ಗಳು.ಕೆಲಸದ ಆಯಾಸ,ನಿದ್ದೆಯ ಮಂಪರು ,ಹಸಿವು ಎಲ್ಲರಲ್ಲೂಹೆಚ್ಚಿತ್ತು..ಇದೇ ಸಮಯಕ್ಕೆ ಪ್ರಾಜೆಕ್ಟ್ ಮ್ಯಾನೇಜರ್ ಎಲ್ಲರನ್ನು ಉತ್ತೇಜಿಸುವಂತೆ ಅಪ್ರೆಂಟಿಸ್ ಗಳನ್ನೆಲ್ಲ ಬನ್ನಿ ಏನಾದ್ರು ತಿಂದು ಬರೋಣ ಎಂದು ಕರೆದು, ಕಾಂಟ್ರಾಕ್ಟ್ ಕೆಲಸದ ಉಸ್ತುವಾರಿ ನೋಡಿಕೊಳ್ಳುತಿದ್ದವಗೆ ಕೆಲಸ ಮುಂದುವರಿಸಲು ಹೇಳಿ ಹೊರಟ.ಕಾರ್ಖಾನೆ
ಯ ಕ್ಯಾಂಟೀನ್ ಸಹ ಮುಚ್ಚಿದ್ದರಿಂದ ಶಿಫ಼್ಟ್ ನ ಅಧಿಕಾರಿಗಳ ಕರೆದು ತರುವ,ಕರೆದೊಯ್ಯುವ ಕಾರಿನಲ್ಲಿ ಶೀಖಾಗೆ ಹೊರಟರು.ಶೀಖಾದಲ್ಲಿ ಕುಳಿತು ಹೀಗೆ ಲೋಕಾಭಿರಾಮವಾಗಿ ಆ ನೌಕರ ಹೀಗೆ ಮಾಡಿದ,ಈ ನೌಕರ ಹಾಗೆ ಮಾಡಿದ,ತಮ್ಮ ತಮ್ಮ ಕಾಲೇಜ್ ನ ಸಮಯ ಹೀಗೆ ಹರಟುತ್ತ,ಒಂದಷ್ಟು ನಗುತ್ತ ಇದ್ದರು.ಇವರು ಕುಳಿತ ಮೇಜಿನ ಅನತಿ ದೂರದಲ್ಲಿ ಹಗ್ಗದ ಮಂಚದ ಮೇಲೆ ಕುಳಿತವ ಆಗಾಗ್ಗೆ ಇವರೆಡೆ ಅಸಹನೀಯವಾಗಿ ನೋಡಲಾರಂಬಿಸಿದ..ಒಂದೈದು ನಿಮಿಶಗಳ ಬಳಿಕ,ಇವರ ಬಳಿ ಬಂದು..ಸಾಕಷ್ಟು ಕಟುವಾಗಿ ” ಊಟ ಮಾಡುವುದಾದರೆ ಊಟ ಮಾಡಿ ಹೋಗಿ,ಗಲಾಟೆ ಮಾಡಬೇಡಿ..ಅದೇನು ಅಷ್ಟೊಂದು ನಗುವುದು..!!” ಎಂದು ಏರು ದನಿಯಲ್ಲಿ ಗದರಿದ.ಅವನ ಠೀವಿ,ವರಸೆ,ಗದರಿದ ರೀತಿ ..,ಇವರಿಗೆ ಸ್ವಲ್ಪ ಭೀತಿ ಉಂಟುಮಾಡಿದರೂ.., ಮತ್ತೆರೆಡು ನಿಮಿಷಗಳಲ್ಲಿ …ಇವನಾರೋ ..ಏನೋ.., ಕುಡಿದು ಹೆಚ್ಚಾಗಿ ಹೀಗೆ ಆಡುತ್ತಿರಬೇಕೆಂದು ಎಂದು ಅವನಿಗೆ ಅರ್ಥವಾಗದ ಹಾಗೆ ಆಂಗ್ಲ ಭಾಷೆಯಲ್ಲಿ ಇಲ್ಲಿನ ಸ್ಥಳೀಯರು ತಾವೇ ರಾಜರೆಂದು ತಿಳಿದುಕೊಂಡಿದ್ದಾರೋ..? ಏನೋ..? ತಿನ್ನಲು ಗತಿಯಿಲ್ಲದಿದ್ದರೂ ಕೋವಿಗೆ,ಗತ್ತಿಗೇನು ಕಮ್ಮಿ ಇಲ್ಲ..ಹೀಗೆ ಒಬ್ಬೊಬ್ಬರು ತಮಗನ್ನಿಸಿದ್ದ ಹೇಳತೊಡಗಿದರು.ಮತ್ತೆ ತಮ್ಮ ಪಾಡಿಗೆ ತಾವು …ಹರಟುತ್ತ ,ನಗುತ್ತ ಊಟ ಮಾಡತೊಡಗಿದರು…. ಹೀಗೆ ನಗುತ್ತಿದ್ದವನೊಬ್ಬನ ಎದೆಯ ಮೇಲೆ ಬಂದೂಕಿನ ನಳಿಕೆ ನೋಡಿ, ಎಲ್ಲರೂ ಅವಕ್ಕಾದರು.ಈಗಷ್ಟೇ ಎಚ್ಚರಿಸಿ ಹೋದವ ಬೆಂಕಿಯನುಗುಳುವ ಕಣ್ಣುಗಳಿಂದ ಎಲ್ಲರ ದಿಟ್ಟಿಸುತ ಕಿರುಚತೊಡಗಿದ..”ಕ್ಯೊಂ ಬೇ…ಸಮಝ್ ಮೆ ನಹಿ ಆತ ಕ್ಯಾ …ಕ್ಯಾ ಭೋಲಾ ತ ಮೈನೆ ..ಶೋರ್ ನಹಿ ಮಚಾನ,ಕಾಹೆ ಹಸ್ ರಹೆ ಹೋ..ಇತ್ನೆ ಧೇರ್ ಸೆ..”ಎಂದು ಟ್ರಿಗ್ಗರ್ ನ ಒತ್ತುವ ವೇಳೆಗೆ ಈ ಗಲಾಟೆ ಕಂಡು ತನ್ನ ಗಲ್ಲದಿಂದ ಎದ್ದು ಬಂದ ಮಾಲೀಕ ಕೋವಿಯನ್ನು ಮೇಲಕ್ಕೆತ್ತಿದ..ಸೋಗೆಯಂತಹ ಛಾವಣಿಯ ತೂರಿದ ಗುಂಡು,ಗುಂಡಿನ ಸದ್ದು..ಕೆಲ ಕಾಲ ಸ್ಮಶಾನ ಮೌನವ ಬೇಡಿತು.ಏನಾಯಿತು ಎಂದು ತಿಳಿಯದೇ ಇವರೆಲ್ಲ ಗರ ಬಡಿದಂತೆ ಕೂತಿರಲು..ಇದೇನೋ ದಿನ ನಿತ್ಯ ನೋಡುವ ಹಾಗೆ ಶೀಖಾದ ಮಾಲೀಕ ಕೋವಿ ಹಿಡಿದವನಿಗೆ ಸ್ವಲ್ಪ ಒರಟಾಗೇ “ನಾನು ಅವರಿಗೆ ಹೇಳ್ತೀನಿ…ನೀನು ಗಲಾಟೆ ಮಾಡದೆ ಊಟ ಮಾಡಿ ಹೊರಡು” ಎಂದು ಹೇಳಿ ,ಸಲೀಸಾಗಿ ಗಲ್ಲದ ಮೇಲೆ ಕುಳಿತ.ನೆರೆದ ಮಂದಿ ಯಾವುದೋ ಚಿತ್ರದ ರೋಚಕ ಕ್ಲೈಮಾಕ್ಸ್ ನೋಡಿ ಚಿತ್ರಮಂದಿರದಿಂದ ಹೊರಗೆ ನಡೆಯುವ ಹಾಗೆ ತಮ್ಮ ತಮ್ಮಲ್ಲಿ ಮಗ್ನರಾದರು.
ನಗು..ಆಯಸ್ಸು ಹೆಚ್ಚಿಸುವುದಂತೆ ..??
ಸಧ್ಯ ನಮ್ಮ ಕರ್ನಾಟಕದಲ್ಲಿ ಯಾರು ಗನ್ ಹಿಡಿದು ಒಡಾಡಲ್ಲ… ನಾವೆಲ್ಲಾ ಇಷ್ಟೊತ್ತಿಗೆ ಸತ್ತೋಗ್ತಿದ್ವಿ ಅನ್ಸುತ್ತೆ ಅಲ್ವ ಮಗ???